Advertisement
ತಲಪಾಡಿಯಿಂದ ಕಲ್ಲಾಪುವರೆಗೆ ಖಾಸಗಿ ಯಾಗಿ ನಿರ್ಮಾಣಗೊಂಡಿರುವ ಬಸ್ ತಂಗುದಾಣಗಳನ್ನು ಹೊರತು ಪಡಿಸಿದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕಾಮಗಾರಿ ವಹಿಸಿಕೊಂಡ ನವಯುಗ್ ಸಂಸ್ಥೆಯಿಂದ ನಿರ್ಮಾಣವಾಗಿರುವ ಬಸ್ ತಂಗು ದಾಣಗಳು ಕೇವಲ ಆರು. ತಲಪಾಡಿ ಯಿಂದ ಮಂಗಳೂರು ಸಂಪರ್ಕಿಸುವ ಕಲ್ಲಾಪುವರೆಗೆ ಎರಡೂ ಬದಿಯಲ್ಲಿ 33 ಬಸ್ ತಂಗುದಾಣಗಳ ಆವಶ್ಯಕತೆ ಯಿದ್ದು, ಖಾಸಗಿಯಾಗಿ ಐದು ಬಸ್ ತಂಗುದಾಣಗಳಿದ್ದರೆ, ಸ್ಥಳೀಯಾಡಳಿತ ಸಂಸ್ಥೆ ನಿರ್ಮಿಸಿರುವ ಮೂರು ಬಸ್ ತಂಗುದಾಣಗಳಿವೆ. ಉಳಿದಂತೆ ಹೆಚ್ಚಿನ ಬಸ್ ತಂಗು ದಾಣಗಳಲ್ಲಿ ಪ್ರಯಾಣಿಕರು ಬೇಸಗೆ ಕಾಲದಲ್ಲಿ ಬಿಸಿಲಿನಲ್ಲಿ ಮತ್ತು ಮಳೆಗಾಲದಲ್ಲಿ ಮಳೆಗೆ ಬಸ್‌ಗೆ ಕಾಯುವ ಸ್ಥಿತಿ ಹೆದ್ದಾರಿ ಬದಿಯದ್ದು.
Related Articles
Advertisement
ಮಳೆಗಾಲಕ್ಕಿಂತ ಮೊದಲು ತಂಗುದಾಣ ಅಗತ್ಯ
ಕಲ್ಲಾಪು, ತೊಕ್ಕೊಟ್ಟು ಓವರ್‌ಬ್ರಿಡ್ಜ್, ಅಂಬಿಕಾರಸ್ತೆ, ಕಾಪಿಕಾಡು, ಕೊಲ್ಯ, ಕೋಟೆಕಾರು ಕೆ.ಸಿ.ರೋಡ್, ಅಡ್ಕ, ಕೆಳಗಿನ ತಲಪಾಡಿ, ಸಂಕೊಳಿಗೆಯಲ್ಲಿ ಬಸ್ ತಂಗುದಾಣ ಅಗತ್ಯವಿದ್ದು, ಕೆಲವೆಡೆ ಒಂದು ಬದಿಯಲ್ಲಿ ತಂಗುದಾಣವಿದ್ದರೆ, ಇನ್ನೊಂದು ರಸ್ತೆಯಲ್ಲಿ ತಂಗುದಾಣ ನಿರ್ಮಾಣವಾಗಿಲ್ಲ. ಕೆಲವು ತಂಗುದಾಣಗಳಲ್ಲಿ ಸರ್ವಿಸ್ ರಸ್ತೆ ಇಲ್ಲದೆ ಬಸ್‌ಗೆ ಕಾಯುವವರು ವಿರುದ್ಧ ದಿಕ್ಕಿನಿಂದ ಬರುವ ವಾಹನಗಳಿಂದ ರಕ್ಷಣೆಯನ್ನು ಪಡೆಯುವ ಸ್ಥಿತಿ ಇಲ್ಲಿನದು.
ಸಮಸ್ಯೆಗೆ ಶೀಘ್ರ ಪರಿಹಾರ
ನೀಡಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಸಂದರ್ಭ ನವಯುಗ್ ಸಂಸ್ಥೆ ಕೋಟೆಕಾರ್ -ಬೀರಿ ಬಳಿ ನಿರ್ಮಿಸಿರುವ ಬಸ್ ತಂಗುದಾಣ ನಿಷ್ಪ್ರಯೋಜಕವಾಗಿದೆ. ನಿಲ್ದಾಣದಲ್ಲಿ ಬಸ್ ನಿಲ್ಲದ ಕಾರಣ ಜನರು ರಸ್ತೆ ಬದಿಯಲ್ಲೇ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಬೀರಿಯಲ್ಲಿ ತಲಪಾಡಿ ಕಡೆ ಹೋಗುವ ಜಂಕ್ಷನ್‌ನಲ್ಲಿಯೂ ಬಸ್ ತಂಗುದಾಣ ಅಗತ್ಯವಿದೆ. ಹೆದ್ದಾರಿ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಡಳಿತ ಕ್ರಮಕೈಗೊಂಡು ಪ್ರಯಾಣಿಕರ ಸಮಸ್ಯೆಗೆ ಶೀಘ್ರ ಪರಿಹಾರ ನೀಡಬೇಕು. – ವೆಂಕಟೇಶ್ ಬೀರಿ, ಸ್ಥಳೀಯ ನಿವಾಸಿ
ಕ್ರಮ ಕೈಗೊಳ್ಳಲಾಗುವುದು
ಹೆದ್ದಾರಿ ನಿರ್ಮಾಣದ ಸಂದರ್ಭದಲ್ಲಿ ಗುತ್ತಿಗೆ ಪಡೆದಿರುವ ಸಂಸ್ಥೆ ಯೋಜನ ವರದಿಯಲ್ಲಿ ನಮೂದಿಸಿದಂತೆ ತಂಗುದಾಣ ನಿರ್ಮಾಣ ಮಾಡಬೇಕು. ಕೆಲವು ಕಡೆ ಜಾಗದ ಕೊರತೆಯಿಂದ ಕಾಮಗಾರಿ ನಡೆಸಲು ಸಾಧ್ಯವಾಗಿಲ್ಲ. ಅವೈಜ್ಞಾನಿಕವಾಗಿರುವ ಬಸ್ ನಿಲ್ದಾಣದ ಕುರಿತು ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. – ಮಧುಕರ ವಟೋರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿ
-ವಸಂತ ಎನ್. ಕೊಣಾಜೆ