Advertisement

ವಾಟ್ಸಾಪ್‌ನಿಂದ ದಲಿತರ ಕೇರಿ ತನಕ; ಉ.ಪ್ರ.ದಲ್ಲಿ ಮೋದಿ ಅಲೆ ಬಗೆ

10:36 AM Mar 13, 2017 | |

900 ರ್ಯಾಲಿ, 67,000 ಕಾರ್ಯಕರ್ತರು, 10,000 ವಾಟ್ಸಾಪ್‌ ಗ್ರೂಪ್‌! ಇವೆಲ್ಲದರ ಒಟ್ಟು ಫ‌ಲಶ್ರುತಿ 325 ಸೀಟು! ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿನ ಬಿಜೆಪಿಯ ಚಾರಿತ್ರಿಕ ಗೆಲುವಿನ ಹಿಂದಿನ ಗುಟ್ಟು ಇದು. 2014ರ ಸಂಸತ್‌ ಚುನಾವಣೆ ಮುಗಿದ ಬಳಿಕವೇ ಬಿಜೆಪಿ, ಇಲ್ಲಿನ ವಿಧಾನಸಭಾ ಗದ್ದುಗೆ ಮೇಲೆ ಕಣ್ಣಿಟ್ಟಿತ್ತು. 2 ವರ್ಷದ ಸತತ ರಣತಂತ್ರದಲ್ಲಿ ಬಿಜೆಪಿ ರೂಪಿಸಿದ ಅನೂಹ್ಯ ಯೋಜನೆಗಳು ಇಲ್ಲಿ ಹತ್ತಾರು.

Advertisement

1. ಟೆಕ್‌ ಟೀಂನ ಕ್ಷಣ ಕ್ಷಣದ ಅಪ್‌ಡೇಟ್‌
ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಪ್ರಚಾರಕ್ಕಾಗಿಯೇ 25 ಮಂದಿ ತಾಂತ್ರಿಕ ನಿಪುಣರನ್ನು ಪಕ್ಷ ನಿಯೋಜಿಸಿತ್ತು. ಅಲ್ಲದೆ, 6 ಪ್ರಾಂತ್ಯಗಳಲ್ಲಿ 21 ಮಂದಿ, 90 ಜಿಲ್ಲಾ ಘಟಕಗಳಲ್ಲಿ 15, ಪ್ರತಿ ಕ್ಷೇತ್ರಕ್ಕೆ 10 ಮಂದಿ ತಂತ್ರಜ್ಞರ ತಂಡ ನಿರಂತರ ಕೆಲಸ ಮಾಡಿದೆ. ಇವರೆಲ್ಲರೂ ಸೇರಿ ರಚಿಸಿದ್ದ 10,344 ವಾಟ್ಸಾéಪ್‌ ಗ್ರೂಪ್‌, 4 ಫೇಸ್‌ಬುಕ್‌ ಸಮೂಹಗಳಲ್ಲಿ ಮೋದಿ ಭಾಷಣ, ವಿಡಿಯೋ, ಸರ್ಕಾರಿ ಯೋಜನೆ ಮಾಹಿತಿಗಳು ಸತತ ಹರಿದಾಡಿದ್ದವು. ಪಕ್ಷದ ಪ್ರತಿಕ್ಷಣದ ಕಾರ್ಯಕ್ರಮಗಳೂ ಇಲ್ಲಿ ಅಪ್‌ಡೇಟ್‌ ಆಗಿದ್ದವು. ಅಲ್ಲದೆ, ಸರ್ಕಾರ ಹೇಗಿರಬೇಕು? ಜನ ಯಾವ ಯೋಜನೆ ನಿರೀಕ್ಷಿಸುತ್ತಾರೆ? ಎಂಬ ಸರ್ವೆಯನ್ನೂ ಈ ಗ್ರೂಪ್‌ಗ್ಳೇ ಮಾಡಿದ್ದು, ಇದನ್ನು ಆಧರಿಸಿಯೇ ಬಿಜೆಪಿ ಪ್ರಣಾಳಿಕೆ ಸಿದ್ಧಗೊಳಿಸಿತ್ತು.

2. ಕೈಹಿಡಿದ ಹತ್ತಾರು ಯಾತ್ರೆಗಳು: 
ಮಾಜಿ ಸಂಸದ, ಬೌದ್ಧ ಸನ್ಯಾಸಿ ಧಮ್ಮ ವಿರಿಯೋ ಅವರ ಧಮ್ಮ ಚೇತನಾ ಯಾತ್ರಾ ಕಳೆದವರ್ಷದ ಏಪ್ರಿಲ್‌ನಲ್ಲಿ ಚಾಲನೆಗೊಂಡಿತು. ಉ.ಪ್ರ. ನೆಲದಲ್ಲಿ ಮೋದಿಯ ಕನಸುಗಳನ್ನು ಬಿತ್ತಿದ್ದೇ ಈ ಯಾತ್ರೆ. ದಲಿತ- ಜಾಟ್ವಾ ಕಾಲೋನಿಗಳಲ್ಲಿ ಸಾಗಿದ ಯಾತ್ರೆ ಬಿಎಸ್ಪಿ ಮಾಯಾವತಿ ಅವರ ವೋಟ್‌ಬ್ಯಾಂಕ್‌ ಅನ್ನು ಸೆಳೆಯಿತು. ಅಮಿತ್‌ ಶಾ ಕೂಡ ಪಾಲ್ಗೊಂಡಿದ್ದ ಯಾತ್ರೆಯಲ್ಲಿ ಒಟ್ಟು 453 ಸಭೆಗಳಾಗಿದ್ದವು. ಇದೇ ವೇಳೆ ಪಕ್ಷದ ಸದಸ್ಯತ್ವಕ್ಕೂ ಚಾಲನೆ ನೀಡಿ, 9.14 ಯುವಕರಿಗೆ ಸದಸ್ಯತ್ವ, ಗುರುತಿನ ಚೀಟಿ ನೀಡಲಾಯಿತು. ಕಾಲೇಜುಗಳ 6,235 ಕ್ಯಾಂಪುಗಳಲ್ಲಿ ಸದಸ್ಯತ್ವ ನೀಡಲಾಗಿತ್ತು. 

ನವೆಂಬರ್‌ನಲ್ಲಿನ ಪರಿವರ್ತನಾ ಯಾತ್ರೆ 403 ವಿಧಾನಸಭಾ ಕ್ಷೇತ್ರಗಳ ಮೂಲಕ ಸಾಗಿತ್ತು. ಸಹರಾನ್‌ಪುರ್‌, ಝಾನ್ಸಿ, ಬಲ್ಲಿಯಾ ಮತ್ತು ಸೋನ್‌ಭದ್ರಾ- ಎಲ್ಲೆಲ್ಲಿ ಬಿಜೆಪಿ ದುರ್ಬಲವಿತ್ತೋ, ಅಲ್ಲೆಲ್ಲಾ ಈ ಯಾತ್ರೆ ಮುನ್ನುಗ್ಗಿತು. ಈ ವೇಳೆ ಪಕ್ಷದ ಸದಸ್ಯತ್ವ 50.65 ಲಕ್ಷ ದಾಟಿತು. 34 ಜಿಲ್ಲೆಗಳಲ್ಲಿ ನಡೆದ ಕಮಲ್‌ ಮೇಳವೂ ಬೃಹತ್‌ ಮಟ್ಟದ ಸಂಘಟನೆಗೆ ಕಾರಣವಾಯಿತು.  

3. ಕ್ಲಿಕ್‌ ಆದ ಕಾಲೇಜುಸಭಾ: 
ಯುವಕರನ್ನು ಸೆಳೆಯಲು ಒಟ್ಟು 1,650 ಕಡೆಗಳಲ್ಲಿ ಕಾಲೇಜು ಸಭಾ ನಡೆಸಿದ್ದೇ ಪಕ್ಷದ ದೊಡ್ಡ ಯಶಸ್ಸಿನ ಹೆಜ್ಜೆ. ಈ ಕೆಲಸಕ್ಕಾಗಿಯೇ 2,058 ಕಾಲೇಜು ರಾಯಭಾರಿಗಳನ್ನು ನೇಮಿಸಲಾಯಿತು. 88 ಯುವ ಸಮ್ಮೇಳನಗಳು ನಡೆದವು. ವಿಡಿಯೋ ಕಾನ್ಫರೆನ್ಸ್‌ ಮೂಲಕ ಅಮಿತ್‌ ಶಾ ವಿದ್ಯಾರ್ಥಿಗಳಲ್ಲಿ ಪ್ರಶ್ನಾವಳಿಗಳಲ್ಲಿ ಪಾಲ್ಗೊಂಡು, ಪ್ರಭಾವ ಬೀರಿದ್ದರು.

Advertisement

4. ಇರಾನಿಯ ಉಡಾನ್‌: 
ಅತ್ತ ಅಮಿತ್‌ ಶಾ ಯುವಕರನ್ನು ಸೆಳೆದರೆ, ಇತ್ತ ಸ್ಮತಿ ಇರಾನಿ ಉಡಾನ್‌ಕಾರ್ಯಕ್ರಮದ ಮೂಲಕ ಯುವತಿಯರನ್ನು ಸಂಘಟಿಸಿದರು. 77 ಮಹಿಳಾ ಸಮ್ಮೇಳನಗಳಲ್ಲಿ ಸ್ಮೃತಿ ಇರಾನಿ ವಿಡಿಯೋ ಕಾನ್ಫರೆನ್ಸಿನಲ್ಲಿ ಪಾಲ್ಗೊಂಡಿದ್ದರು. 

5. ಒಬಿಸಿಗೆ ಸಮ್ಮೇಳನ
ಬಿಎಸ್ಪಿಯ ಮತಬ್ಯಾಂಕ್‌ ಆಗಿದ್ದ ಒಬಿಸಿ ಸಮುದಾಯದ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ 200 ಕಡೆಗಳಲ್ಲಿ ಹಿಂದುಳಿದ ವರ್ಗಗಳ ಸಮ್ಮೇಳನ ಸಂಘಟಿಸಿತ್ತು. ಅಲ್ಲದೆ, 18 ಸ್ವಾಭಿಮಾನಿ ಸಮ್ಮೇಳನಗಳೂ ಒಬಿಸಿ ಮಂದಿಗೆ ಬಿಜೆಪಿ ಮೇಲೆ ಪ್ರೀತಿ ಹುಟ್ಟಲು ಕಾರಣವಾದವು. 

6. ರಾತ್ರಿ ವೇಳೆ ಬೆಂಕಿ ಹಚ್ಚಿ ಸಭೆ!: 
ದಟ್ಟ ಚಳಿಗಾಲದ ರಾತ್ರಿಯಲ್ಲಿ ಉ.ಪ್ರ.ದ ಮಂದಿ ಬಿಜೆಪಿಯ ಬಯಲುರಿ ಸಭೆಗಳಲ್ಲಿ (ಬೊನ್‌ಫೈರ್‌ ಮೀಟಿಂಗ್‌) ಪಾಲ್ಗೊಂಡು ಪಕ್ಷಕ್ಕೆ ಹತ್ತಿರವಾದರು. ಚುನಾವಣೆಗೂ ಮುನ್ನ ಒಟ್ಟು 3,564 ಬಯಲುರಿ ಸಭೆಗಳು ನಡೆದಿವೆ.

7. ಹೊಲದ ಮಣ್ಣೇ ತಿಲಕ!
ಬಿಜೆಪಿ ಶಾಸಕರು, ಸಂಸದರು ಸಂಘಟಿಸಿದ ಮಾತಿ ತಿಲಕ್‌ ಪ್ರತಿಗ್ಯಾ ರ್ಯಾಲಿಯಲ್ಲಿ, ರೈತರ ಹೊಲದ ಮಣ್ಣಿನ ತಿಲಕ ಹಚ್ಚಿಕೊಂಡು, ಅನ್ನದಾತರನ್ನು ಸಂಘಟಿಸುವ ಕೆಲಸ ಮಾಡಿದ್ದೂ ಪಕ್ಷದ ಒಳ್ಳೆಯ ನಿರ್ಧಾರವೇ. 

8. ಮೋದಿ ರ್ಯಾಲಿ
ಚುನಾವಣಾ ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆ ಆರಂಭಗೊಂಡ ರ್ಯಾಲಿ, ಪ್ರಚಾರ ಮುಗಿವ ಹೊತ್ತಿಗೆ ರ್ಯಾಲಿಗಳ ಸಂಖ್ಯೆ 900ಕ್ಕೆ ಮುಟ್ಟಿತು. ಸ್ವತಃ ಮೋದಿ ಪಾಲ್ಗೊಂಡಿದ್ದ ರ್ಯಾಲಿಗಳ ಸಂಖ್ಯೆ 23!

9. ಸದಸ್ಯತ್ವ ಅಭಿಯಾನ
ಕಳೆದವರ್ಷ ವಿಶೇಷ ಸದಸ್ಯತ್ವ ಅಭಿಯಾನದಲ್ಲಿ 2.03 ಕೋಟಿ ಮಂದಿ ಪಕ್ಷದ ಸದಸ್ಯತ್ವ ಪಡೆದರು. 67 ಸಾವಿರ ಸಕ್ರಿಯ ಕಾರ್ಯಕರ್ತರು ಪಕ್ಷಕ್ಕೆ ಬಲ ತುಂಬಿದರು. ಸುಮಾರು 88 ಸಾವಿರ ಮಂದಿಗೆ ಬಿಜೆಪಿಯ ಸಿದ್ಧಾಂತ ಬೋಧಿಸಿ, ಸೆಳೆಯಲಾಯಿತು. ರಾಜ್ಯದ 1,47,401 ಬೂತ್‌ಗಳಲ್ಲಿ ಪ್ರತಿ ಬೂತ್‌ಗೂ 20 ಮಂದಿ ಕಾರ್ಯಕರ್ತರನ್ನು ನಿಯೋಜಿಸಿತ್ತು. 16.91 ಕೋಟಿ ಜನ ಆಜೀವನ್‌ ಸಹಯೋಗ್‌ ನಿಧಿಗೆ ನೆರವಾಗಿದ್ದಾರೆ.

10. ಯುಪಿ ಕೆ ಮನ್‌ ಕಿ ಬಾತ್‌:
ಮೋದಿ, ಅಮಿತ್‌ ಶಾ ಭಾಷಣವುಳ್ಳ 75 ವಿಡಿಯೋ ವ್ಯಾನುಗಳು ರಾಜ್ಯಾದ್ಯಂತ ಸಂಚರಿಸಿ, ಮತದಾರರನ್ನು ಸೆಳೆದಿವೆ. ಅಲ್ಲದೆ, ಜನರಿಂದ ಅಭಿಪ್ರಾಯ ಸಂಗ್ರಹಿಸಿ, ಪಕ್ಷವನ್ನು ಗಟ್ಟಿ ಮಾಡುವ ಪ್ರಯತ್ನಕ್ಕೂ ಇದೇ ವ್ಯಾನುಗಳೇ ನೆರವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next