Advertisement

ರಚನೆಯಾಗದ ಆಡಳಿತ ಮಂಡಳಿ: ತೊಂದರೆ

08:55 PM Jul 21, 2019 | Lakshmi GovindaRaj |

ಎಚ್‌.ಡಿ.ಕೋಟೆ: ಕಳೆದ ಆಗಸ್ಟ್‌ ತಿಂಗಳಿನಲ್ಲಿ ಪುರಸಭೆ ಚುನಾವಣೆ ನಡೆದು ಸೆ.3ರಂದು ಫಲಿತಾಂಶ ಪ್ರಕಟವಾಗಿ ಒಂದು ವರ್ಷ ಸಮೀಪಿಸುತ್ತಿದ್ದರೂ, ಇನ್ನೂ ಆಡಳಿತ ಮಂಡಳಿ ರಚನೆಯಾಗದ ಪರಿಣಾಮ ಇಲ್ಲಿನ ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಜನ ಸಾಮಾನ್ಯರ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ. ಇದರಿಂದ ಪಟ್ಟಣದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಪಟ್ಟಣ ಪಂಚಾಯ್ತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಬಡ್ತಿ ಹೊಂದಿದ ಪರಿಣಾಮ ಪಟ್ಟಣದಿಂದ 3 ಕಿ.ಮೀ ವ್ಯಾಪ್ತಿಯ ಚಾಕಹಳ್ಳಿ, ಶಾಂತಿಪುರ, ಸಿದ್ದಲಿಂಗಪುರ, ಕೃಷ್ಣಾಪುರ, ವಡ್ಡರಗುಡಿ, ಯರಹಳ್ಳಿ, ಹ್ಯಾಂಡ್‌ಪೋಸ್ಟ್‌ ಗ್ರಾಮಗಳು ಪುರಸಭೆಗೆ ಸೇರ್ಪಡೆಯಾಗಿವೆ. ಅದರಲ್ಲೂ ಪಟ್ಟಣ ಪಂಚಾಯ್ತಿ ಇದ್ದಾಗ 13 ವಾರ್ಡ್‌ಗಳು ಮಾತ್ರ ಇದ್ದವು. ಪುರಸಭೆಯಾದ ನಂತರ ವಾರ್ಡ್‌ಗಳ ಪುನರ್‌ ವಿಂಗಡಣೆ ಆದ ನಂತರ 23 ವಾರ್ಡ್‌ಗಳಿಗೆ ಹೆಚ್ಚಿದೆ. ಅದರೆ, ಪುರಸಭೆಯ ಪೌರಕಾರ್ಮಿಕರ ಸಂಖ್ಯೆ ಹೆಚ್ಚಳವಾಗಿಲ್ಲ, ಪರಿಣಾಮ ಸ್ವಚ್ಛತೆಯ ಕೆಲಸ ನಡೆಯುತ್ತಿಲ್ಲ.

ಟೆಂಡರ್‌ ಪ್ರಕ್ರಿಯೆ ನಡೆದಿಲ್ಲ: ಇನ್ನೂ ಕಳೆದ ಆರೇಳು ತಿಂಗಳ ಹಿಂದೆ ಮುಖ್ಯಮಂತ್ರಿಗಳು 5 ಕೋಟಿ ರೂ. ಅನುದಾನ ಬಿಡುಗಡೆ ಯಾದರೂ ಇನ್ನೂ ಟೆಂಡರ್‌ ಪ್ರಕ್ರಿಯೆ ಕೂಡ ಆಗಿಲ್ಲ. ಇದರಿಂದಾಗಿ ಎಲ್ಲಾ ವಾರ್ಡ್‌ಗಳ ರಸ್ತೆಗಳು ಡಾಂಬರು ಭಾಗ್ಯ ಕಾಣದೇ ಧೂಳುಮಯವಾಗಿವೆ.

ಸದಸ್ಯರಾದರೂ ಅಧಿಕಾರ ಇಲ್ಲ: ನೂತನ ಸದಸ್ಯರಾಗಿ ಆಯ್ಕೆಯಾದರೂ ಮಿಸಲಾತಿ ಗೊಂದಲ ಹಾಗೂ ಇನ್ನಿತರ ಕಾರಣಗಳಿಂದಾಗಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯದಿರುವುದರಿಂದ ಯಾವ ಸಭೆಗಳು ನಡೆಯುತ್ತಿಲ್ಲ. ಇತ್ತ ಕುಡಿಯುವ ನೀರು, ಬೀದಿದೀಪ, ಚರಂಡಿ, ಸ್ವಚ್ಛತೆ ಸೇರಿ ನೂತನ ಜನಪ್ರತಿನಿಧಿಗಳ ಮುಂದೆ ಸಾಲು ಸಾಲು ಸಮಸ್ಯೆಗಳ ಸರಮಾಲೆಯೇ ಇದ್ದರೂ, ಸಭೆಗಳು ನಡೆದು ನಡವಳಿ ಅಂಗೀಕಾರವಾಗದ ಕಾರಣ ಅಭಿವೃದ್ಧಿ ಕಾರ್ಯ ಹಾಗೂ ಆಡಳಿತತ್ಮಾಕವಾಗಿ ಯಾವುದೇ ನಿರ್ಧಾರಗಳನ್ನು ತಗೆದುಕೊಳ್ಳಲು ಸಾಧ್ಯವಾಗಿಲ್ಲ. ವಾರ್ಡ್‌ ಸಮಸ್ಯೆ, ಮೂಲಸೌಕರ್ಯ ಏನೇ ಇದ್ದರೂ ಅಧಿಕಾರಿಗಳಿಗೆ ಹೇಳಬೇಕಾದ ಅಸಹಾಯಕ ಪರಿಸ್ಥಿತಿ ತಲೆದೂರಿದೆ.

ಅಧಿಕಾರಿಗಳ ಗೈರು: ಆಡಳಿತ ಮಂಡಳಿ ರಚನೆ ಆಗದಿರುವುದರಿಂದ ಯಾವುದೇ ಸಮಸ್ಯೆ ಹಾಗೂ ಕೆಲಸ ಈಡೇರಿಕೆಗಾಗಿ ಪುರಸಭೆ ಕಚೇರಿಗೆ ಹೊದರೇ, ಅಧಿಕಾರಿಗಳು ಸರಿಯಾಗಿ ಸಿಗುತ್ತಿಲ್ಲ. ಈ ಸಂಬಂಧ ಕಚೇರಿಯ ಸಿಬ್ಬಂದಿಯಾರನ್ನಾದರೂ ಪ್ರಶ್ನಿಸಿದರೇ, ಸಾಹೇಬರೂ ಡೀಸಿ ಆಫೀಸ್‌ಗೆ ಹೋಗಿದ್ದಾರೆ. ಎಂಜಿನಿಯರ್‌ ವಿಡಿಯೋ ಕಾನ್ಪರೇನ್ಸ್‌ಗೆ ಹೋಗಿದ್ದಾರೆ. ಇನ್ನೂ ಆ ವಿಭಾಗದ ನೌಕರ ಡಿಎಂಎ ಕಚೇರಿಗೆ ಹೋಗಿದ್ದಾರೆ. ಹೀಗೆ ಅಧಿಕಾರಿಗಳ ಗೈರಿಗೆ ಇಲ್ಲ ಸಲ್ಲದ ಸಬೂಬು ಹೇಳುತ್ತಾರೆ.

Advertisement

ಕೆಲಸಕ್ಕಾಗಿ ಜನರ ಅಲೆದಾಟ: ಈ ಅವ್ಯವಸ್ಥೆಯ ಬಗ್ಗೆ ಪುರಸಭೆ ಚುನಾಯಿತ ಜನಪ್ರತಿನಿಧಿಗಳಿಗೆ ತಿಳಿದಿದ್ದರೂ, ಇನ್ನೂ ಆಡಳಿತ ಮಂಡಳಿ ರಚನೆಯಾಗಿ ಅಧಿಕಾರ ಸಿಗದ ಕಾರಣ, ವಾರ್ಡ್‌ ಸಮಸ್ಯೆ, ಮೂಲ ಸೌಲಭ್ಯಗಳ ಬಗ್ಗೆ ಎಲ್ಲವನ್ನು ಅಧಿಕಾರಿಗಳಿಗೆ ಹೇಳಬೇಕಾದ ಅನಿವಾರ್ಯ ಸ್ಥಿತಿ ಇದೆ. ಇದರಿಂದ ಇಲ್ಲಿ ಎಲ್ಲವೂ ಪುರಸಭೆ ಅಧಿಕಾರಿಗಳೇ ಎಂಬಂತಾಗಿದ್ದು, ಪುರಸಭೆಗೆ ಬರುವ ಜನ ಸಾಮಾನ್ಯರ, ವರ್ತಕರ ಕೆಲಸ ಕಾರ್ಯಗಳು ಆಗದೆ ದಿನನಿತ್ಯ ಅಲೆಯುವಂತಾಗಿದೆ.

ಅನುದಾನ ಆಯೋಮಯ: ಪಟ್ಟಣದಲ್ಲಿ ಹಳೆಯ ನಡವಳಿಗಳನ್ನೇ ದಾಳವಾಗಿಸಿಕೊಂಡಿರುವ ಇಲ್ಲಿನ ಅಧಿಕಾರಿಗಳು, ಪ್ರಭಾರ ಆಡಳಿತಾಧಿಕಾರಿಗಳಿಂದ ಆಡಳಿತಾತ್ಮಕ ಮಂಜೂರಾತಿ ಗಿಟ್ಟಿಸಿ ತಮಗೆ ಬೇಕಾದ ಕಡೆ, ಪ್ರಭಾವಿಗಳು ವಾಸಿಸುವ ಕಡೆಗಳಲ್ಲಿ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ. ಇನ್ನೂ ಜೆಸಿಬಿ ಯಂತ್ರ ಮತ್ತು ಸ್ವಚ್ಛತೆ ಹಾಗೂ ಸರ್ವೇಕ್ಷಣ್‌ ಹೆಸರಲ್ಲಿ ತಮಗಿಷ್ಟ ಬಂದಂತೆ ಓರ್ವ ಗುತ್ತಿಗೆದಾರನ ಹೆಸರಿನಲ್ಲಿ ಕಳೆದ ಐದಾರೂ ತಿಂಗಳಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಅನುದಾನ ಖರ್ಚು ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಈಗಿನ ಪರಿಸ್ಥಿತಿಯಲ್ಲಿ ಸರ್ಕಾರವೇ ಇಂದೋ, ನಾಳೆಯೋ ಎಂಬ ದುಸ್ಥಿತಿಯಲ್ಲಿರುವುದರಿಂದ ಪುರಸಭೆಗೆ ಆಡಳಿತ ಮಂಡಳಿ ರಚನೆ ಆಗುವುದನ್ನು ಇನ್ನಷ್ಟು ದಿನ ಕಾಯಬೇಕು. ಇತ್ತ ಪುರಸಭೆ ಆಡಳಿತಾಧಿಕಾರಿಯಾಗಿರುವ ಹುಣಸೂರು ಉಪವಿಭಾಗಾಧಿಕಾರಿಗಳು ಇತ್ತ ತಿರುಗಿಯೂ ನೋಡಿಲ್ಲ. ಹೀಗಾಗಿ ಇನ್ನಾದರೂ ಕ್ಷೇತ್ರದ ಶಾಸಕರು, ಸಂಸದರು ಹಾಗೂ ಜಿಲ್ಲಾಧಿಕಾರಿಗಳು ಪುರಸಭೆಗೆ ಭೇಟಿ ನೀಡಿ, ಪುರಸಭೆ ಕಾರ್ಯ ಚಟುವಟಿಕೆಯನ್ನು ಖುದ್ದು ಪರಿಶೀಲಿಸಿ ಸೂಕ್ತ ಕ್ರಮಕೈಗೊಂಡು ಜನಸಾಮಾನ್ಯರ ಅಲೆದಾಟ ತಪ್ಪಿಸಬೇಕಿದೆ.

ನಾನು ವಾಸಸ್ಥಳ ಕೇಳಿಕೊಂಡು ಪುರಸಭೆಗೆ ಹೋದರೆ ನಿಮ್ಮ ಮನೆಯ ಕಂದಾಯ ಕಟ್ಟಿ ಬಾ ಅಂತಾರೇ, ಅದೇ ರೀಯಲ್‌ ಎಸ್ಟೇಟ್‌ನವರಿಗೆ ಒಂದೇ ದಿನದಲ್ಲಿ ಖಾತೆ ಮಾಡಿ ಕೊಡ್ತಾರೆ. ಪುರಸಭೆಯಲ್ಲಿ ಲಂಚವತಾರ ತಾಂಡವವಾಡುತ್ತಿದೆ. ಮಧ್ಯವರ್ತಿಗಳ ಕಾಟ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಿ.
-ಪ್ರಸಾದ್‌, ನಗರ ನಿವಾಸಿ

ನಮಗೆ ಇನ್ನೂ ಆಡಳಿತ ಸಿಕ್ಕಿಲ್ಲ. ಅದರೂ ನಾವೇ ರೀಸ್ಕ್ ತಗೆದುಕೊಂಡು ವಾರ್ಡ್‌ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಿ ಕೆಲಸ ತಗೆದುಕೊಳ್ಳುತ್ತಿದ್ದೇವೆ. ಅದರೂ ವಾರ್ಡ್‌ನಲ್ಲಿ ಸ್ವಚ್ಛತೆ, ಕುಡಿಯುವ ನೀರು, ಕರೆಂಟ್‌ ಸಮಸ್ಯೆ ಇದೆ. ವಾರ್ಡ್‌ನಲ್ಲಿ ಯಾವುದೇ ಅನುದಾನ ಬಳಕೆಯಾಗಿಲ್ಲ.
-ನಂಜಪ್ಪ, ಪುರಸಭೆ ಸದಸ್ಯ

ವಾರ್ಡ್‌ನಲ್ಲಿ ಸಮಸ್ಯೆಗಳು ಹೆಚ್ಚಾಗಿವೆ. ಚುನಾಯಿತ ಸದಸ್ಯರ ಕೂಗಿಗೆ ಸ್ಪಂದನೆಯಿಲ್ಲ, ಇಲ್ಲಿ ಅಧಿಕಾರಿಗಳದ್ದೇ ದರ್ಬಾರೂ ಎಂಬಂತಾಗಿದ್ದು, ಅವರಿಗೆ ಇಷ್ಟ ಬಂದಂತೆ ಕೆಲಸ ಮಾಡುತ್ತಿದ್ದಾರೆ. ಪರಿಸರ ಎಂಜಿನಿಯರ್‌ ಇನ್ನೂ ಕಚೇರಿ ಪರಿಸರದಲ್ಲೇ ಇದ್ದಾರೇ, ವಾರ್ಡ್‌ಗಳ ಪರಿಸರ ಹೇಗಿದೆ ಎಂದು ಬಂದು ನೋಡಿಲ್ಲ.
-ಪುಟ್ಟಬಸವ ನಾಯ್ಕ, ಮಾಜಿ ಅಧ್ಯಕ್ಷ, ಹಾಲಿ ಸದಸ್ಯ

ಆಡಳಿತ ಮಂಡಳಿ ಅಧಿಕಾರಕ್ಕೆ ಬಾರದಿದ್ದರೂ ವಾರ್ಡ್‌ ಸದಸ್ಯರ ಸಲಹೆ ಪಡೆದು ಕೆಲಸ ಮಾಡಿಸುತ್ತಿದ್ದೇವೆ. ಯಾವುದೇ ಸಮಸ್ಯೆ ಕಂಡರೂ ತಕ್ಷಣ ಸ್ಪಂದಿಸುತ್ತಿದ್ದೇವೆ. ವಾರ್ಡ್‌ಗಳಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇನ್ನೂ ಕೆಲವು ಟೆಂಡರ್‌ ಹಂತದಲ್ಲಿವೆ.
-ಡಿ.ಎನ್‌.ವಿಜಯಕುಮಾರ್‌, ಸಿಒ, ಪುರಸಭೆ, ಎಚ್‌.ಡಿ.ಕೋಟೆ

* ಬಿ.ನಿಂಗಣ್ಣಕೋಟೆ

Advertisement

Udayavani is now on Telegram. Click here to join our channel and stay updated with the latest news.

Next