ಹುಬ್ಬಳ್ಳಿ: ರಾಜ್ಯದಲ್ಲಿ ಮಳೆ ತಗ್ಗಿದರೂ ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ಭಾರೀ ಪ್ರಮಾಣದ ನೀರಿನಿಂದ ಬೆಳಗಾವಿ ಜಿಲ್ಲೆ ಅಕ್ಷರಶಃ ಬೆಚ್ಚಿ ಬಿದ್ದಿದೆ. ಕೃಷ್ಣಾ, ಘಟಪ್ರಭಾ ಸಹಿತ ಸಪ್ತ ನದಿಗಳು ಉಕ್ಕೇರಿ ಜನರ ಜೀವನವನ್ನೇ ಅಲ್ಲೋಲ ಕಲ್ಲೋಲಗೊಳಿಸಿವೆ. 44 ಹಳ್ಳಿಗಳು ಜಲಾವೃತವಾಗಿವೆ. 7 ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. 100ಕ್ಕೂ ಹೆಚ್ಚು ಗ್ರಾಮಗಳು ಸಂಪರ್ಕ ಕಡಿತಗೊಂಡಿವೆ.
ಕೃಷ್ಣಾ, ವೇದಗಂಗಾ, ದೂಧಗಂಗಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳು ಅಬ್ಬರಿಸುತ್ತಿವೆ. ಕೃಷ್ಣಾ ನದಿಗೆ 2,77,703 ಕ್ಯೂಸೆಕ್ ನೀರು ಹರಿದು ಬರುತ್ತಿದ್ದರೆ, ಘಟಪ್ರಭಾ ನದಿಯ ಒಳಹರಿವು 50 ಸಾವಿರ ಕ್ಯೂಸೆಕ್ ತಲುಪಿದೆ.
ಆಲಮಟ್ಟಿಯಿಂದ 3 ಲಕ್ಷ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದ್ದು, ತೀರ ಪ್ರದೇಶದಲ್ಲಿ ಡಂಗುರ ಸಾರಲಾಗಿದೆ.
ನಾರಾಯಣಪುರ ಬಸವಸಾಗರ ಜಲಾಶಯದಿಂದ 3.20 ಲಕ್ಷ ಕ್ಯೂಸೆಕ್ ನೀರು ಬಿಟ್ಟಿದ್ದರಿಂದ ಲಿಂಗಸ್ಗೂರು ತಾಲೂಕಿನ 4, ರಾಯಚೂರು ತಾಲೂಕಿನ 17 ಗ್ರಾಮಗಳಿಗೆ ಜಲಕಂಟಕ ಎದುರಾಗಿದೆ. 15 ಗರ್ಭಿಣಿಯರನ್ನು ನಡುಗಡ್ಡೆಯಿಂದ ಸ್ಥಳಾಂತರಿಸಲಾಗಿದೆ.
ಮಲೆನಾಡಿನಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದರೂ ತುಂಗಭದ್ರಾ ನದಿ ಹರಿವು ಏರುತ್ತಲೇ ಇದೆ. ಟಿಬಿ ಡ್ಯಾಂನಿಂದ 1.47 ಲಕ್ಷ ಕ್ಯೂಸೆಕ್ ನೀರು ಬಿಟ್ಟಿದ್ದರಿಂದ ಹಂಪಿಯ ಕೆಲವು ಸ್ಮಾರಕಗಳು ಮುಳುಗಡೆಯಾಗಿವೆ. ನೀರಿನ ವೈಭವ ಕಣ್ತುಂಬಿಕೊಳ್ಳಲು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಕಂಪ್ಲಿ-ಗಂಗಾವತಿ ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.
ಎಲ್ಲಿ ಎಷ್ಟು ಹಾನಿ?
ಬೆಳಗಾವಿ ಜಿಲ್ಲೆ
– 38 ಹಳ್ಳಿಗಳು ಜಲಾವೃತ
– 6,160 ಮಂದಿ 427 ಕಾಳಜಿ ಕೇಂದ್ರಕ್ಕೆ
– 2,015 ಮಂದಿ ಸಂಬಂಧಿಕರ ಮನೆಗೆ
– 454 ಮನೆ ಕುಸಿತ
– 41 ಸೇತುವೆಗಳು ಮುಳುಗಡೆ
– 80ಕ್ಕೂ ಹೆಚ್ಚು ಗ್ರಾಮ ಸಂಪರ್ಕ ಕಡಿತ
– 3,243 ಹೆಕ್ಟೇರ್ ಕೃಷಿ ಹಾನಿ
– 1,529 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ
ಬಾಗಲಕೋಟೆ ಜಿಲ್ಲೆ
– 6 ಗ್ರಾಮ ಮುಳುಗಡೆ
– 1,177 ಮಂದಿ ಕಾಳಜಿ ಕೇಂದ್ರಕ್ಕೆ
– 805 ಜಾನುವಾರು ರಕ್ಷಣೆ
– 44 ಮನೆ ಕುಸಿತ
– 9 ಸೇತುವೆಗಳು ಜಲಾವೃತ
– 20ಕ್ಕೂ ಹೆಚ್ಚು ಹಳ್ಳಿಗಳ ಸಂಪರ್ಕ ಕಡಿತ
– 5,701 ಹೆಕ್ಟೇರ್ ಬೆಳೆ ಹಾನಿ