Advertisement
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಗುರುವಾರ ನಡೆದ ಪೌರತ್ವ ಕಾಯಿದೆ ವಿರೋಧಿ ಸಭೆಯಲ್ಲಿ ಅಮೂಲ್ಯ ಲಿಯೊನ ಎಂಬ ಯುವತಿ ವೇದಿಕೆಯಲ್ಲೇ ಪಾಕಿಸ್ಥಾನ ಜಿಂದಾಬಾದ್ ಎಂಬ ಘೋಷಣೆ ಕೂಗಿದ ಘಟನೆ ಈಗ ವ್ಯಾಪಕ ಚರ್ಚೆಗೊಳಗಾಗಿದೆ. ಇದರ ಬೆನ್ನಿಗೆ ಟೌನ್‌ಹಾಲ್ ಎದುರು ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಆದ್ರಾ ಎಂಬ ಯುವತಿ ಆಜಾದಿ ಕಾಶ್ಮೀರ ಫಲಕ ಪ್ರದರ್ಶಿಸಿ, ಇದೇ ಮಾದರಿಯ ಘೋಷಣೆಯನ್ನು ಕೂಗಿದ್ದಾಳೆ. ಈ ಎರಡೂ ಘಟನೆಗಳಲ್ಲಿ ಸಾಮ್ಯತೆಗಳಿವೆ.
Related Articles
Advertisement
ಇತ್ತೀಚೆಗೆ ದೇಶದ ಉಳಿದ ರಾಜ್ಯಗಳಿಗೂ ಇಂಥದೊಂದು ಪ್ರವೃತ್ತಿ ವಿಸ್ತರಣೆಯಾಗಿರುವುದು ಸರ್ವಥಾ ಒಪ್ಪುವಂಥದ್ದಲ್ಲ, ಜತೆಗೆ ಕಳವಳಕಾರಿ ಸಹ. ಅದರಲ್ಲೂ ಪೌರತ್ವ ಕಾಯಿದೆ ವಿರೋಧಿ ಪ್ರತಿಭಟನೆೆಗಳಲ್ಲಿ ಅನೇಕ ಬಾರಿ ಪಾಕ್ ಪರವಾದ ಘೋಷಣೆ, ಪಾಕ್ ಗುಣಗಾನಗಳು ನಡೆದಿರುವುದು ಪ್ರತಿಭಟನೆಯ ನೈಜ ಉದ್ದೇಶವನ್ನು ಪ್ರಶ್ನಿಸುವಂತೆ ಮಾಡಿದೆ.
ಪ್ರಜಾತಂತ್ರದಲ್ಲಿ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ವಿರೋಧವೂ ಪ್ರಜಾತಂತ್ರದ ಒಂದು ಅವಿಭಾಜ್ಯ ಅಂಗ. ಸರಕಾರದ ಕ್ರಮಗಳು, ನೀತಿಗಳನ್ನು ಟೀಕಿಸಲು ಸರ್ವಥಾ ಅವಕಾಶವಿದೆ. ಪ್ರಜಾತಂತ್ರ ವ್ಯವಸ್ಥೆಯು ಒಪ್ಪುವಂತೆ ಪ್ರತಿಭಟಿಸಲೂ, ವಿರೋಧಿಸಲು ಅಡ್ಡಿಯಿಲ್ಲ. ಯಾರೂ ತಡೆಯುವುದಿಲ್ಲ. ಈ ಹಕ್ಕನ್ನು ಸಂವಿಧಾನವೇ ಕೊಟ್ಟಿದೆ. ಆದರೆ ಸರಕಾರವನ್ನು ವಿರೋಧಿಸುವುದಕ್ಕೂ ದೇಶವನ್ನು ವಿರೋಧಿಸುವುದಕ್ಕೂ ವ್ಯತ್ಯಾಸವಿದೆ. ಸರಕಾರದ ನೀತಿಯನ್ನು ವಿರೋಧಿಸುವ ಭರದಲ್ಲಿ ಶತ್ರು ದೇಶವನ್ನು ಹೊಗಳುವುದು ಅಥವಾ ಶತ್ರು ದೇಶದ ಪರವಾಗಿ ಘೋಷಣೆಗಳನ್ನು ಕೂಗುವುದು ಆಪರಾಧವಲ್ಲದೇ ಮತ್ತೇನೂ ಅಲ್ಲ. ಅದರಲ್ಲಿ ರಾಜಕೀಯ ಹುಡುಕುವುದೂ ಬೇಕಿಲ್ಲ, ಅಗತ್ಯವೂ ಇಲ್ಲ. ದೇಶದ ಭದ್ರತೆ, ಅಖಂಡತೆಗೆ ಸಂಬಂಧಪಟ್ಟಿರುವ ವಿಚಾರ ಇದು. ಪಕ್ಷ ರಾಜಕೀ ಯದ ಭಿನ್ನಾಭಿಪ್ರಾಯಗಳೂ ಇರಕೂಡದು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೆರಡೂ ಬೆಂಗಳೂರಿನಲ್ಲಿ ಗುರುವಾರ ನಡೆದ ಘಟನೆಯನ್ನು ಖಂಡಿಸಿರುವುದು ಪ್ರಬುದ್ಧತೆಯ ನಡೆ. ದೇಶದ ಅಖಂಡತೆಯ ವಿಷಯದಲ್ಲಿ ರಾಜಕೀಯ ಒಮ್ಮತ ಇರುವುದೇ ಆತ್ಯಂತ ದೊಡ್ಡ ಬಲ.
ಇತ್ತೀಚೆಗಿನ ದಿನಗಳಲ್ಲಿ ಹೀಗೆ ದೇಶ ವಿರೋಧಿ ಘೋಷಣೆ ಕೂಗುತ್ತಿರುವವರೆಲ್ಲಾ ಈಗಷ್ಟೇ ಓದು ಮುಗಿಸಿದಂಥ ಯುವಜನರು. ಅವರ ಅದ್ದೂರಿ ಜೀವನ ಶೈಲಿಗಳೆಲ್ಲಾ ಕಂಡರೆ, ಅವರ ಈ ಎಲ್ಲ ಖರ್ಚುವೆಚ್ಚಗಳಿಗೆ ಹಣ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆ ಮೂಡುವುದು ಸಹಜ. ಇಂಥ ಯುವಜನರನ್ನು ಗುರುತಿಸಿ ಅವರನ್ನು ಅನಗತ್ಯವಾಗಿ ದೇಶ ವಿರೋಧಿ ಚಟುವಟಿಕೆಗಳಿಗೆ ತೊಡಗುವಂತೆ ಪ್ರೇರೇಪಿಸುವ ವ್ಯವಸ್ಥಿತ ತಂತ್ರವೇ? ಯಾವುದಾ ದರೂ ನಿರ್ದಿಷ್ಟ ವ್ಯಕ್ತಿ ಅಥವಾ ಸಂಘಟನೆಗಳು ಇದರ ಹಿಂದೆ ಇವೆಯೇ?- ಈ ಕಾಣದ ಕೈಗಳನ್ನು ಶೀಘ್ರವೇ ರಾಜ್ಯ ಸರಕಾರ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ನಮ್ಮ ದೇಶವನ್ನು ಅಥವಾ ಸರಕಾರವನ್ನು ಟೀಕಿಸುವುದಕ್ಕೆಂದೇ ನಮ್ಮ ವೈರಿ ದೇಶಗಳನ್ನು ಹೊಗಳುವುದು ಸರ್ವಥಾ ಯಾರೂ ಒಪ್ಪುವಂಥದ್ದಲ್ಲ ; ಒಪ್ಪುವುದೂ ಸಲ್ಲ.