Advertisement

ಅವೈಜ್ಞಾನಿಕ ಕಾಮಗಾರಿ ಮರಗಳ ಮಾರಣಹೋಮ!

05:50 AM May 28, 2018 | Team Udayavani |

ಪುತ್ತೂರು: ಮಾಣಿ- ಮೈಸೂರು ಹೆದ್ದಾರಿ ಕಾಮಗಾರಿ, ನಗರಸಭೆ ವ್ಯಾಪ್ತಿಯ ರಸ್ತೆ ವಿಸ್ತರಣೆ, ಗ್ರಾಮಾಂತರ ಭಾಗದ ರಸ್ತೆ ಅಭಿವೃದ್ಧಿ… ಇಂತಹ ಕಾಮಗಾರಿಗಳನ್ನು ಅವೈಜ್ಞಾನಿಕವಾಗಿ ಮಾಡುವುದರಿಂದ ಮರಗಳ ಮಾರಣ ಹೋಮ ಸಂಭವಿಸುವ ಭೀತಿ ಸೃಷ್ಟಿಯಾಗಿದೆ. ಪುತ್ತೂರು- ಸುಳ್ಯ ಸಹಿತ ಜಿಲ್ಲೆಯ ಗ್ರಾಮಾಂತರ ತಾಲೂಕುಗಳ ಹೆದ್ದಾರಿಗಳು ಗುಡ್ಡಗಾಡು ಪ್ರದೇಶ, ಅರಣ್ಯದ ನಡುವೆ ಸಾಗುತ್ತವೆ. ರಸ್ತೆ ವಿಸ್ತರಣೆ ಸಂದರ್ಭ ಕೆಲ ಮರಗಳನ್ನು ತೆರವು ಮಾಡುವುದು ಅನಿವಾರ್ಯ. ನೇರವಾಗಿ ಗುಡ್ಡ ಸವರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಗುಡ್ಡದ ಅಂಚಿನಲ್ಲಿರುವ ಮರಗಳು ಮಳೆ ರಭಸಕ್ಕೆ ರಸ್ತೆಗೆ ಉರುಳಿ ಬೀಳುವಂತಾಗಿವೆ.

Advertisement

ಸವಕಳಿ ತಡೆಗಟ್ಟುವ ದೃಷ್ಟಿಯಿಂದ ಗುಡ್ಡವನ್ನು ಜಾರು ಆಕೃತಿಯಲ್ಲಿ ತುಂಡರಿಸಬೇಕು. ನೇರವಾಗಿ ಗುಡ್ಡವನ್ನು ಸವರುವುದರಿಂದ, ಗುಡ್ಡ ಕುಸಿಯುತ್ತಾ ಬರುತ್ತವೆ. ಅಂಚಿನಲ್ಲಿರುವ ಮರಗಳು ರಸ್ತೆಗೆ ಅಡ್ಡ ಬೀಳುತ್ತವೆ. ಜೀವ ಹಾನಿ, ಆಸ್ತಿ ಹಾನಿ ಸಂಭವಿಸುವ ಅಪಾಯವೂ ಹೆಚ್ಚು. ಮಾಣಿ- ಮೈಸೂರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಲಾಗಿದೆ. ಅಲ್ಲಲ್ಲಿ ಗುಡ್ಡಗಳನ್ನು ಸವರುವ ಕೆಲಸವೂ ನಡೆಸಲಾಗಿದೆ. ಬಹುತೇಕ ಗ್ರಾಮಾಂತರ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಎಂಜಿನಿಯರ್‌ ಗಳು ಅವೈಜ್ಞಾನಿಕವಾಗಿ ಗುಡ್ಡ ಸವರಿದ್ದರಿಂದ ಸಮಸ್ಯೆ ಸೃಷ್ಟಿಯಾಗುವ ಭೀತಿ ಎದುರಾಗಿದೆ.

ಸಾಗರ್‌ ಎಫೆಕ್ಟ್ ಭೀತಿ!
ಸಾಗರ್‌ ಚಂಡಮಾರುತದ ಪರಿಣಾಮ ಮಳೆ ಶುರುವಾಗಿದೆ. ಗುಡುಗು- ಮಳೆಯ ಜತೆಗೆ ವಿಪರೀತ ಗಾಳಿ ತಾಂಡವ ಆಡುತ್ತಿದೆ. ಇದರ ಪ್ರಭಾವಕ್ಕೆ ಹಲವು ಮರಗಳು ಧರಾಶಾಹಿ ಆಗುವ ಹಂತಕ್ಕೆ ತಲುಪಿವೆ. ಹಲವು ಮರಗಳು ಆಗಲೇ ರಸ್ತೆಗೆ ಉರುಳಿ ಬಿದ್ದಿವೆ. ಇದನ್ನು ತೆರವು ಮಾಡುವ ಜತೆಗೆ, ಅಪಾಯ ಎದುರಾಗಲಿರುವ ಮರಗಳ ಬಗ್ಗೆಯೂ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಅಗತ್ಯವಿದೆ. ಮಳೆಗಾಲಕ್ಕೆ ಮೊದಲೇ ಈ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೆ ಚುನಾವಣಾ ಗಡಿಬಿಡಿಯಲ್ಲಿ ಯಾವುದೇ ಕೆಲಸಗಳು ನಡೆದಿಲ್ಲ.

ಗುಡ್ಡದ ಮಣ್ಣು ರಸ್ತೆಗೆ
ಗ್ರಾಮಾಂತರ ಭಾಗದಲ್ಲಿ ಗುಡ್ಡದ ಮಣ್ಣು ಮಳೆ ನೀರಿನೊಂದಿಗೆ ರಸ್ತೆಗೆ ಬರುತ್ತಿದೆ. ಸಂಪ್ಯದ ಆರ್ಯಾಪು ಹಿ.ಪ್ರಾ. ಶಾಲಾ ಮುಂಭಾಗದ ಹೆದ್ದಾರಿ ತೋಡಿನಂತಾಗಿ ರಸ್ತೆ ಸಂಚಾರಕ್ಕೆ ತೊಡಕಾಗಿದೆ. ಗುಡ್ಡವನ್ನು ಅವೈಜ್ಞಾನಿಕವಾಗಿ ಸವರಿದ್ದು, ರಸ್ತೆ ಬದಿಯಲ್ಲಿ ಮಣ್ಣು ಹಾಕಿದ್ದು, ಇದ್ದರೂ ಬಳಕೆಗೆ ಬಾರದ ಚರಂಡಿ ಎಲ್ಲವೂ ಸಮಸ್ಯೆಗೆ ಕಾರಣ. ಮೊದಲ ಮಳೆಗೆ ಇಷ್ಟು ಸಮಸ್ಯೆ. ಮುಂಗಾರು ಪ್ರವೇಶಿಸುವಾಗ ಹೇಗೋ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಬಿದ್ದ ಮೇಲಷ್ಟೇ…
ಮಾರ್ಚ್‌ – ಎಪ್ರಿಲ್‌ ಹೊತ್ತಿಗೆ ಅಪಾಯಕಾರಿ ಮರಗಳ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸುತ್ತಿದ್ದರೆ, ಇಷ್ಟರಲ್ಲಿ ಸೂಕ್ತ ವ್ಯವಸ್ಥೆ ಆಗಿರುತ್ತಿತ್ತು. ಮಳೆ ಬಂದ ಮೇಲೆ ಕೆಲ ಮರಗಳನ್ನು ಅಪಾಯಕಾರಿ ಎಂದು ಗುರುತಿಸಿ ಹೇಳುತ್ತಿದ್ದಾರೆ. ಇದರಿಂದ ನಾವೇನೂ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮರ ಬಿದ್ದ ಮೇಲಷ್ಟೇ ತೆರವು ಮಾಡುವ ಕೆಲಸ ಮಾಡಬೇಕು. ಇದನ್ನು ಪ್ರಕೃತಿ ವಿಕೋಪದಲ್ಲಿ ಸಂಭವಿಸಿದ ಘಟನೆ ಎಂದಷ್ಟೇ ನಾವು ಪರಿಗಣಿಸುತ್ತೇವೆ.
– ವಿ.ಪಿ. ಕಾರ್ಯಪ್ಪ, ವಲಯ ಅರಣ್ಯಾಧಿಕಾರಿ, ಪುತ್ತೂರು

Advertisement

— ಗಣೇಶ್‌ ಎನ್‌. ಕಲ್ಲರ್ಪೆ

Advertisement

Udayavani is now on Telegram. Click here to join our channel and stay updated with the latest news.

Next