Advertisement

ಅವೈಜ್ಞಾನಿಕ ಕಾಮಗಾರಿ: ಚರಂಡಿ ನೀರು ಹರಿವಿಗೆ ತಡೆ

09:59 AM May 03, 2018 | Team Udayavani |

ಮಹಾನಗರ : ನಗರದ ಬಹುತೇಕ ಭಾಗಗಳಲ್ಲಿ ವೈಜ್ಞಾನಿಕವಾದ ಒಳಚರಂಡಿ, ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಹಲವು ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದು, ಈ ಸಮಸ್ಯೆಗಳಿಗೆ ಇನ್ನೂ ಪರಿಹಾರ ದೊರೆತಿಲ್ಲ. ಇದಕ್ಕೆ ಪರಿಹಾರ ಕಂಡುಹಿಡಿಯಬೇಕಾಗಿದ್ದ ಸಂಬಂಧಪಟ್ಟ ಇಲಾಖೆ ಇನ್ನಷ್ಟು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿದೆ.

Advertisement

ಉರ್ವ ಮಾರ್ಕೆಟ್‌ ಕಡೆಯಿಂದ ಸುಲ್ತಾನ್‌ ಬತ್ತೇರಿ ಕಡೆಗೆ ಸಾಗುವ ದಾರಿಯಲ್ಲಿ ಪಾಲಿಕೆ ವತಿಯಿಂದ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಈ ಭಾಗದ ಜನರು ಸಂಕಷ್ಟ ಎದುರಿಸಬೇಕಾದ ದಿನ ಸನ್ನಿಹಿತವಾಗುತ್ತಿದೆ. ಪ್ರಸ್ತುತ ಇಲ್ಲಿ ಚರಂಡಿ ನೀರು ಸಮೀಪದ ತೋಡಿಗೆ ಹೋಗುತ್ತಿದ್ದು, ಮಳೆ ಗಾಲದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾಗುತ್ತಿರಲಿಲ್ಲ. ಈಗ ಇಲ್ಲಿನ ಒಳಚರಂಡಿ ವ್ಯವಸ್ಥೆ ಸರಿಯಿಲ್ಲ ಎಂಬುದಾಗಿ ಪಾಲಿಕೆ ಅಧಿಕಾರಿಗಳ ನೇತೃತ್ವದಲ್ಲಿ ಒಳಚರಂಡಿ ಕಾಮಗಾರಿ ನಡೆಸಲಾಗುತ್ತಿದೆ. ಆದರೆ ಈಗಾಗಲೇ ಅಲ್ಲಿದ್ದ ಮಳೆ ನೀರು ಹರಿಯುವ ಚರಂಡಿಗೆ ಅಡ್ಡಲಾಗಿ ಕಾಮಗಾರಿ ಮಾಡಲಾಗುತ್ತಿದೆ. ಇದರಿಂದ ಮಳೆಗಾಲದಲ್ಲಿ ಮಳೆ ನೀರು ರಸ್ತೆಯಲ್ಲೇ ಹರಿಯಲಿದೆ ಎಂಬುದು ಜನರ ಅಳಲು.

ಕಾಮಗಾರಿಯಿಂದ ಚರಂಡಿ ನೀರು ಹರಿಯಲು ತಡೆಯಾಗಲಿದೆ ಎನ್ನುತ್ತಾರೆ ಸ್ಥಳೀಯರು. ತಮ್ಮ ಜನಪ್ರತಿನಿಧಿಗಳಿಗೆ ತಿಳಿಸಿದರೆ ಅದು ತನ್ನ ಜಾಗವಲ್ಲ ಎಂದು ಒಬ್ಬರನ್ನೊಬ್ಬರು ಹಳಿಯುವುದರಲ್ಲೇ ಸಮಯ ಕಳೆಯುತ್ತಿದ್ದಾರೆ. ಇದರಿಂದ ಸಮಸ್ಯೆಗೆ ಪರಿಹಾರ ಸಿಗುವ ದಾರಿ ಕಾಣುತ್ತಿಲ್ಲ. ಈ ನಡುವೆ ಅಧಿಕಾರಿಗಳು ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಕಾಮಗಾರಿಯನ್ನು ಮುಂದುವರಿಸುತ್ತಿದ್ದಾರೆ.

ಅಧಿಕಾರಿಗಳು ಕಾಮಗಾರಿ ಆರಂಭಿಸುವಾಗಲೇ ಸಮಸ್ಯೆಯ ಬಗ್ಗೆ ತಿಳಿಸಿದ್ದೇವೆ. ಆದರೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದೆ ಕಾಮಗಾರಿ ಆರಂಭಿಸಿದ್ದಾರೆ. ಇನ್ನೂ ಒಂದು ತಿಂಗಳೊಳಗೆ ಮಳೆಗಾಲ ಆರಂಭವಾಗಲಿದೆ. ಈ ಸಂದರ್ಭ ಚರಂಡಿ ನೀರು ಹರಿಯಲು ಸಮರ್ಪಕವಾದ ವ್ಯವಸ್ಥೆ ಇಲ್ಲದಿದ್ದರೆ ಮಳೆ ನೀರು ರಸ್ತೆಯಲ್ಲೇ ಹರಿಯಲಿದೆ. ಈಗಾಲೇ ಇದಕ್ಕೆ ಪರಿಹಾರ ಕಂಡುಕೊಳ್ಳದೆ ಇದ್ದರೆ ಮಳೆಗಾಲದಲ್ಲಿ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಸ್ಥಳೀಯರಾದ ಚಿನ್ಮಯ್‌.

ವಾರದಿಂದ ರಸ್ತೆ ಬಂದ್‌
ಈಗ ರಜಾ ಸಮಯವಾಗಿರುವುದರಿಂದ ಸುಲ್ತಾನ್‌ ಬತ್ತೇರಿ ಸಮುದ್ರ ಕಿನಾರೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಆದರೆ ಸುಲ್ತಾನ್‌ ಬತ್ತೇರಿ ಸಮುದ್ರಕ್ಕೆ ತೆರಳಲು ಇರುವ ಹತ್ತಿರದ ಮಾರ್ಗವಾದ ಈ ಜಾಗದಲ್ಲಿ ವಾರಗಳಿಂದ ಕಾಮಗಾರಿ ನಡೆಯುತ್ತಿರುವುದರಿಂದ ಈ ಮಾರ್ಗ ಸಂಪೂರ್ಣವಾಗಿ ಬಂದ್‌ ಆಗಿದೆ. ಇದರಿಂದ ವಾಹನಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆ ಭಾಗಕ್ಕೆ ಹೋಗುವ ಜನರು ಸುತ್ತು ಬಳಸಿ ದೂರದ ದಾರಿಯಾಗಿ ಸಾಗಬೇಕಾಗಿದೆ. 

Advertisement

ಸೂಕ್ತ ವ್ಯವಸ್ಥೆ ಕಲ್ಪಿಸಿ
ಚರಂಡಿ ನೀರು ಹರಿಯಲು ಒಳಚರಂಡಿ ಕಾಮಗಾರಿ ನಡೆಯುತ್ತಿರುವುದು ಸಂತಸದ ವಿಚಾರ. ಆದರೆ ಕಾಮಗಾರಿಯನ್ನು ಚರಂಡಿ ನೀರು ಹರಿಯದಂತೆ ಅಡ್ಡಲಾಗಿ ಮಾಡುತ್ತಿರುವುದು ಸರಿಯಲ್ಲ. ಮಳೆಗಾಲದಲ್ಲಿ ಈ ರಸ್ತೆಗಳು ಮುಳುಗಡೆಯಾಗುವುದು ಖಚಿತ. ಆ ಬಗ್ಗೆ ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ.
– ರಾಧಾಕೃಷ್ಣ,
ಸ್ಥಳೀಯರು

ಪರ್ಯಾಯ ವ್ಯವಸ್ಥೆ
ಚರಂಡಿ ನೀರು ಹರಿಯಲು ಇರುವ ಸಮಸ್ಯೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಪರ್ಯಾಯ ಕ್ರಮ ಕೈಗೊಳ್ಳಲಾಗುವುದು. ಒಳಚರಂಡಿ ಕಾಮಗಾರಿ ಮುಕ್ತಾಯದ ವೇಳೆ ಈ ಸಮಸ್ಯೆ ಪರಿಹಾರವಾಗಲಿದೆ.
– ರಘುಪಾಲ್‌,
ಎಂಜಿನಿಯರ್‌

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next