ಕುಂಟಿಕಾನ: ರಾಷ್ಟ್ರೀಯ ಹೆದ್ದಾರಿ 66ರ ಕುಂಟಿಕಾನ ಪರಿಸರದಲ್ಲಿ ಪ್ರತಿನಿತ್ಯವೆಂಬಂತೆ ಅಪಘಾತಗಳು ಸಂಭವಿಸುತ್ತಿದ್ದು, ಆತಂಕ ಮೂಡಿಸಿದೆ.
ಮುಖ್ಯವಾಗಿ ಕುಂಟಿಕಾನದ ಕದ್ರಿ ಅಗ್ನಿಶಾಮಕ ಠಾಣೆಯ ಎದು ರಿನಲ್ಲಿ ಹಾದು ಹೋಗುವ ಹೆದ್ದಾರಿಯ ಭಾಗ ಅಪಘಾತ ವಲಯವಾಗಿ ಗುರುತಿಸಿಕೊಳ್ಳುತ್ತಿದೆ. ಇಲ್ಲಿ ಹೆದ್ದಾರಿ ತಗ್ಗಿನಿಂದ ಕೂಡಿರುವುದೇ ಅಪಘಾತಕ್ಕೆ ಪ್ರಮುಖ ಕಾರಣ ಎಂಬುದು ಕಂಡು ಬರುತ್ತಿದೆ. ಕೆಪಿಟಿ ಮತ್ತು ಕೊಟ್ಟಾರಚೌಕಿ ಕಡೆಯಿಂದ ಬರುವ ವಾಹನಗಳು ಎತ್ತರದಿಂದ ತಗ್ಗಾದ ಕಡೆಗೆ ಅತ್ಯಂತ ವೇಗವಾಗಿ ಧಾವಿಸುತ್ತವೆ. ಆಗ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗುತ್ತವೆ.
ಈ ಭಾಗದ ಹೆದ್ದಾರಿಯ ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆ ಇದೆ. ಆದರೆ ಸರ್ವಿಸ್ ರಸ್ತೆ ಆರಂಭ/ ಕೊನೆಗೊಳ್ಳುವ ಸ್ಥಳದಲ್ಲಿ ಯಾವುದೇ ಸೂಚನ ಫಲಕಗಳು ಇಲ್ಲ. ಹಾಗಾಗಿ ವಾಹನಗಳ ಚಾಲಕರು ಗೊಂದಲಕ್ಕೀಡಾಗಿ ಏಕಾಏಕಿ ಬ್ರೇಕ್ ಹಾಕುತ್ತಾರೆ. ಇದರಿಂದಾಗಿಯೂ ಅಪಘಾತಗಳು ಸಂಭವಿಸುತ್ತಿವೆ. ಪಾದಚಾರಿಗಳು ರಸ್ತೆ ದಾಟುವುದು ಕೂಡ ಇಲ್ಲಿ ತುಂಬಾ ಅಪಾಯಕಾರಿಯಾಗಿದೆ. ಈ ಹಿಂದೆ ಇಲ್ಲಿ ಡೈವರ್ಷನ್ ಇತ್ತು. ಆಗ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದವು. ಡೈವರ್ಷನ್‌ನ್ನು ಮುಚ್ಚಿರುವುದರಿಂದ ಅಪಘಾತಗಳ ಸಂಖ್ಯೆ ಈ ಹಿಂದಿಗಿಂತ ಸ್ವಲ್ಪ ಕಡಿಮೆಯಾಗಿದೆಯಾದರೂ ಆಗಾಗ್ಗೆ ಅಪಘಾತಗಳು ನಡೆಯುತ್ತಲೇ ಇವೆ. ಈ ಸ್ಥಳ ಅಪಾಯಕಾರಿ ಎಂದು ಸೂಚಿಸುವ ರೆಡ್ ಸಿಗ್ನಲ್ ಲೈಟ್ ಅನ್ನು ಇಲ್ಲಿ ಅಳವಡಿಸಲಾಗಿದೆ. ಆದರೆ ವಾಹನ ಸವಾರರು, ಚಾಲಕರು ಇದನ್ನು ಗಮನಿಸಿ ವಾಹನದ ವೇಗ ತಗ್ಗಿಸುವುದಿಲ್ಲ ಎನ್ನುತ್ತಾರೆ ಸ್ಥಳೀಯರು.
ಅಗ್ನಿಶಾಮಕ ಠಾಣೆಯ ಎದುರೇ ಈ ‘ಆ್ಯಕ್ಸಿಡೆಂಟ್ ಸ್ಪಾಟ್’ ಇದೆ. ಅಪಘಾತ ನಡೆದರೆ ಅಗ್ನಿಶಾಮಕ ಸಿಬಂದಿ ಹಗಲು ರಾತ್ರಿಯೆನ್ನದೆ ಜೀವ ಉಳಿಸಲು ಮುಂದಾಗುತ್ತಿದ್ದಾರೆ. ಇತ್ತೀಚೆಗೆ ನಡೆದ ಅಪಘಾತದಲ್ಲಿ ಅಗ್ನಿಶಾಮಕ ದಳ ಓರ್ವ ಸಿಬಂದಿಯೇ ಮೃತಪಟ್ಟಿದ್ದರು.
ಪರಿಹಾರವೇನು?
ಹೆದ್ದಾರಿ ನಿರ್ಮಾಣ ಅಸಮರ್ಪಕವಾಗಿರುವುದರಿಂದಲೇ ಅಪಘಾತಗಳು ಇಲ್ಲಿ ಹೆಚ್ಚಾಗಿ ಸಂಭವಿಸುತ್ತಿವೆ ಎಂಬುದು ಸ್ಥಳೀಯರ ಅಭಿಪ್ರಾಯ. ವಾಹನಗಳ ವೇಗದ ಮಿತಿಯನ್ನು ಕಡಿಮೆ ಮಾಡಿಸುವುದು ಸದ್ಯಕ್ಕೆ ಇರುವ ಪರಿಹಾರ. ಅದಕ್ಕಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸಬಹುದು ಅಥವಾ ವೈಜ್ಞಾನಿಕ ರೀತಿಯ ಹಂಪ್ಸ್ ಹಾಕಬಹುದು. ವಾಹನ ಸವಾರರು, ಚಾಲಕರ ಗಮನ ಸೆಳೆಯುವಂತಹ ರೀತಿಯಲ್ಲಿ ಮುನ್ನೆಚ್ಚರಿಕೆ ಫಲಕಗಳನ್ನು ಅಳವಡಿಸ ಬಹುದು ಎಂದು ಸ್ಥಳೀಯ ವಾಹನ ಚಾಲಕರು ಸಲಹೆ ನೀಡಿದ್ದಾರೆ.
-ಸಂತೋಷ್ ಬೊಳ್ಳೆಟ್ಟು