ಬರಗೂರು: ಅವೈಜ್ಞಾನಿಕವಾಗಿ ಕೋಡಿ ನಿರ್ಮಾಣ ಮಾಡಿದ ಪರಿಣಾಮ ಕೆರೆ ಏರಿಯಲ್ಲಿ 2 ಕಡೆ ಬಿರುಕು ಬಿದ್ದು ನೀರು ವ್ಯರ್ಥವಾಗುತ್ತಿದ್ದು, ಸಣ್ಣ ನೀರಾವರಿ ಇಲಾಖೆ ಬೇಜವಾಬ್ದಾರಿ ಖಂಡಿಸಿ ರೈತರು ಪ್ರತಿಭಟನೆ ನಡೆಸಿದರು.
ಕಾರೇಹಳ್ಳಿ ಗ್ರಾಮದ ಸುತ್ತಮುತ್ತಲ ರೈತರಿಗೆ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆ 1.25 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ನಡೆಸುತ್ತಿದೆ. 73.13 ಎಕರೆ ವಿಸ್ತೀರ್ಣ ಹೊಂದಿರುವ ಕೆರೆ ಅಭಿವೃದ್ಧಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಕೆರೆ ಏರಿ ನಿರ್ಮಾಣ ಹಂತದಲ್ಲಿ ಜೇಡಿ ಮಣ್ಣು ಹಾಕದಿರುವುದರಿಂದ ಬಿರುಕು ಮೂಡಿ ನೀರು ವ್ಯರ್ಥವಾಗುತ್ತಿದೆ. ಭಾರೀ ಮಳೆ ಬಂದರೆ ಕೆರೆ ಒಡೆಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಎಪಿಎಂಸಿ ಅಧ್ಯಕ್ಷ ನರಸಿಂಹೇ ಗೌಡ, ಕೆರೆ ಏರಿಗೆ ಬಳಸಿದ ಮಣ್ಣು ಉತ್ತ ಮವಾಗಿರದಿರುವುದರಿಂದಬಿರುಕು ಮೂಡಿದೆ. 10 ವರ್ಷದಿಂದ ಮಳೆ ಇಲ್ಲದೇ ಜನರು ಕಷ್ಟಪಡುತ್ತಿದ್ದರು. ಈ ಬಾರಿ ಮಳೆ ಬಂದು ಕರೆ ತುಂಬುವ ಸ್ಥಿತಿ ಇದ್ದರೂ ಕಳಪೆ ಕಾಮಗಾರಿಯಿಂದ ಆಸೆಗೆ ತಣ್ಣೀರು ಎರಚಿದಂತಾಗಿದೆ.
73 ಎಕರೆ ವಿಸ್ತೀರ್ಣದಲ್ಲಿ ನೀರು ನಿಂತರೆ ಪಕ್ಕದಲ್ಲಿರುವ ಸೋಲಾರ್ ಪ್ಲಾಂಟ್ ಜಲಾವೃತವಾಗುತ್ತದೆ. ಹೀಗಾಗಿ ಕೇವಲ 2 ಅಡಿ ಕೆರೆ ಕೋಡಿ ಎತ್ತರ ಮಾಡಿದ್ದಾರೆ ಎಂದು ಆರೋಪಿದರು. ಅಲ್ಪ ಪ್ರಮಾಣ ದಲ್ಲಿ ಮಳೆ ಬಂದರೂ ನೀರು ವ್ಯರ್ಥವಾಗಲಿದೆ. 6 ಅಡಿಗೆ ಕೋಡಿ ಎತ್ತರಿಸು ವಂತೆ ಒತ್ತಾಯಿಸಿದರು.
ಮುಖಂಡ ಕೆ.ಎನ್. ನರಸಿಂಹಪ್ಪ, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಡಿ. ಹನುಮೇಗೌಡ, ದ್ವಾರಕೀಶ್, ಕೆ.ಸಿ. ಕೃಷ್ಣೇಗೌಡ, ಮಾರಣ್ಣ, ಶ್ರೀರಾಮೇಗೌಡ, ಗಿರೀಶ್, ಶ್ರೀಧರ್, ದೊಡ್ಡಣ್ಣ ಇತರರಿದ್ದರು.