ಕಾಪು: ಎರಡೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ರಾಜ್ಯದಲ್ಲಿ ಒಂದೇ ಸಮನಾಗಿದ್ದು ಧರ್ಮದ ಹೆಸರಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುತ್ತಿವೆ. ಧರ್ಮ, ಧರ್ಮಗಳನ್ನು ಒಡೆಯಲು ಹವಣಿಸುತ್ತಿವೆ. ಜಿಲ್ಲಾಧಿಕಾರಿಗೇ ರಕ್ಷಣೆ ಇಲ್ಲವೆಂದ ಮೇಲೆ ಜನಧಿಸಾಮಾನ್ಯರ ರಕ್ಷಣೆ ಮಾಡುವವರಾರು ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು. ಸೋಮವಾರ ಕಾಪುವಿನ ಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ ಉಡುಪಿ ಜಿಲ್ಲಾ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿಯ ಕೂಸು; ಕಾಂಗ್ರೆಸ್‌ನಿಂದ ಪಾಲನೆ !
ಮರಳು ಮಾಫಿಯಾ ಬಿಜೆಪಿಯ ಕೂಸು. ಕಾಂಗ್ರೆಸ್ ಅದನ್ನು ಬೆಳೆಸುತ್ತಿದೆ. ಪ್ರತಿಯೊಂದು ವ್ಯವಸ್ಥೆಯಲ್ಲೂ ಲೂಟಿ ನಡೆಯುತ್ತಿದೆ. ಆಡಳಿತದಲ್ಲಿ ಬಿಗಿ ನಿಲುವುಗಳಿಲ್ಲ. ಮಹಿಳೆಯರು ಮುಕ್ತವಾಗಿ ಓಡಾಡಲೂ ಆಗುತ್ತಿಲ್ಲ. ಇಂತಹಾ ಪಕ್ಷಗಳನ್ನು ಕರಾವಳಿಯ ತಿಳಿವಳಿಕೆಯುಳ್ಳ ಜನತೆ ಅರ್ಥೈಸಿಕೊಳ್ಳಬೇಕಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಕಾರ್ಯಕರ್ತರು ಒಂದು ವರ್ಷದ ಅವಧಿಯನ್ನು ಪಕ್ಷಕ್ಕಾಗಿ ನೀಡಬೇಕು. ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೇರಿಸಿದಲ್ಲಿ ಕರಾವಳಿಯ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ತಮ್ಮ ಸರಕಾರವು ನೀಡಲಿದೆ ಎಂದು ಕುಮಾರಸ್ವಾಮಿ ಹೇಳಿದರು. ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ, ಈ ರಾಜ್ಯ ದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು ಅದಿರು, ಮರಳನ್ನು ಲೂಟಿ ಮಾಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷಗಳನ್ನು ಸೋಲಿಸಲು ಜನತೆ ಜೆಡಿಎಸ್‌ಗೆ ಮತ ನೀಡಬೇಕು ಎಂದರು.
ಜೆಡಿಎಸ್ ಹಿರಿಯ ನಾಯಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್ ಮಾತನಾಡಿ, ಬಿಜೆಪಿ ಮತ್ತು ಕಾಂಗ್ರೆಸ್ ಸರಕಾರಗಳ ವೈಫಲ್ಯವನ್ನು ನಾವು ಕಂಡಿದ್ದೇವೆ. ಅದರ ಲಾಭವನ್ನು ಜೆಡಿಎಸ್ ಮುಂದಿನ ವರ್ಷದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಡೆದುಕೊಳ್ಳಬೇಕಿದೆ. ಉಡುಪಿ ಜಿಲ್ಲೆಯಲ್ಲಿ ಕನಿಷ್ಠ ಎರಡು ಸ್ಥಾನಗಳನ್ನಾದರೂ ಜೆಡಿಎಸ್ ತನ್ನದಾಗಿಸಿಕೊಳ್ಳಬೇಕು ಎಂದರು.
ಜೆಡಿಎಸ್ ಹಿರಿಯ ನಾಯಕರಾದ ಮಾಜಿ ಸಚಿವ ಅಮರನಾಥ ಶೆಟ್ಟಿ, ಎಂ.ಬಿ. ಸದಾಶಿವ, ರಾಜ್ಯ ಕಾರ್ಯದರ್ಶಿ ಇಕ್ಬಾಲ್ ಅಹಮ್ಮದ್, ಶಾಲಿನಿ ಶೆಟ್ಟಿ ಕೆಂಚನೂರು, ಕಾಪು ಕ್ಷೇತ್ರ ಜೆಡಿಎಸ್ ಅಧ್ಯಕ್ಷ ಸುಧಾಕರ ಶೆಟ್ಟಿ ಹೆಜಮಾಡಿ ಮತ್ತು ಜಿಲ್ಲಾ ಜೆಡಿಎಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ವಾಸುದೇವ ರಾವ್ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಪ್ರಸ್ತಾವನೆಗೈದರು. ಶಿವಾನಂದ ಬಾಯಾರು ಕಾರ್ಯಕ್ರಮವನ್ನು ನಿರ್ವಹಿಸಿದರು.