ಬೈಂದೂರು: ಸರಕಾರ ಆಡಳಿತ ಸುಧಾರಣೆಯಾಗಬೇಕು, ತಾಂತ್ರಿಕವಾಗಿ ಮೇಲ್ದರ್ಜೆಗೇರಬೇಕು, ಜನರಿಗೆ ಉತ್ತಮ ಸೇವೆ ದೊರೆಯಬೇಕು ಎನ್ನುವ ಉದ್ದೇಶದಿಂದ ಹೊಸ ಹೊಸ ತಂತ್ರಾಂಶಗಳನ್ನು ಆಡಳಿತ ವ್ಯವಸ್ಥೆಯಲ್ಲಿ ಅಳವಡಿಸುತ್ತಿದೆ. ಆದರೆ ಈ ತಂತ್ರಾಂಶಗಳ ಗೊಂದಲದ ಪರಿಣಾಮ ನೋಂದಣಿ ಇಲಾಖೆ ಯಲ್ಲಿ ಒಟ್ಟು 14,000 ಸ್ಥಿರಾಸ್ತಿ ಕಡತಗಳು ಕಾವೇರಿ ತಂತ್ರಾಂಶದಿಂದ ಇ-ಸ್ವತ್ತು ನೋಂದಣಿ ಯಾಗದೆ ಬಾಕಿ ಉಳಿದಿವೆ.
ಅಧಿಕಾರಿಗಳಲ್ಲಿ ಸಮನ್ವಯದ ಕೊರತೆ:
ಅಗತ್ಯ ಕೆಲಸಕ್ಕೆ ಭೂ ವಿಕ್ರಯ ಮಾಡಿದ ಗ್ರಾಮೀಣ ಭಾಗದ ಜನರು ಈ ಗೊಂದಲದಿಂದ ಶುಲ್ಕ ನೀಡಿ ನೋಂದಣಿಯಾಗಿದ್ದರೂ ಕಾವೇರಿ ತಂತ್ರಾಂಶವನ್ನು ಸರಿಪಡಿಸದ ಇಲಾಖೆಯ ಕಾರ್ಯವೈಖರಿಯಿಂದ ಬೇಸತ್ತು ಹೋಗುವಂತಾಗಿದೆ. ಮಾತ್ರವಲ್ಲದೆ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆ ಯಾದರೆ ಜನಪ್ರತಿನಿಧಿಗಳು ಮಾತ್ರ ಜಾಣ ಮೌನ ವಹಿಸುತ್ತಿದ್ದಾರೆ.
ಇಲ್ಲಿನ ಪ್ರಸ್ತುತ ಸಮಸ್ಯೆಗಳೇನು?:
ಭೂ ಪರಿವರ್ತನೆಯಾದ ಸ್ಥಿರಾಸ್ತಿಗಳನ್ನು ನೋಂದಣಿ ಇಲಾಖೆಯಲ್ಲಿ ಪಂಚತಂತ್ರ ಮತ್ತು ಕಾವೇರಿ ತಂತ್ರಾಂಶದ ಸಂಯೋಜನೆಯಲ್ಲಿ ನೋಂದಾಯಿಸಲಾಗುತ್ತದೆ. ಬಳಿಕ ಆನ್‌ಲೈನ್ ತಂತ್ರಾಂಶದ ಮೂಲಕ ಗ್ರಾಮ ಪಂಚಾಯತ್‌ಗೆ ರವಾನೆಯಾಗುತ್ತದೆ. ಆದರೆ ಕಳೆದ ಆರೇಳು ತಿಂಗಳುಗಳಿಂದ ಕೃಷಿಯೇತರ ಸ್ಥಿರಾಸ್ತಿಗಳ ನೋಂದಣಿಯಾದ ದಸ್ತಾವೇಜುಗಳ ಮಾಹಿತಿಯು ಗ್ರಾಮ ಪಂಚಾಯತ್‌ಗೆ ವರ್ಗಾವಣೆಯಾಗಿರು ವುದಿಲ್ಲ. ಇದರಿಂದ ಸಾರ್ವಜನಿಕರಿಗೆ ಸಾಲ ಪಡೆ ಯಲು, ಕಟ್ಟಡ ನಿರ್ಮಿಸಲು ಅಥವಾ ಯಾವುದೇ ಅಭಿವೃದ್ಧಿಗೂ ಅವಕಾಶ ಇಲ್ಲದಂತಾಗಿದೆ. ಈ ಕುರಿತು ಇಲಾಖೆಯನ್ನು ವಿಚಾರಿಸಿದರೆ ತಂತ್ರಾಂಶ ದೋಷ ಎನ್ನುತ್ತಾರೆ. ಜತೆಗೆ ಗುರುತಿನ ಚೀಟಿ ಪಡೆದು ನೋಂದಣಿ ಬಳಿಕ ರವಾನೆ ಮಾಡುವ ಪ್ರಯತ್ನವು ಸಫಲವಾಗಿಲ್ಲ. ಇಂತಹ ಸಾವಿರಾರು ಕಡತಗಳು ನೋಂದಣಿ ಸಮಸ್ಯೆಯಿಂದ ಬಾಕಿ ಉಳಿದಿವೆ.
ಇದರ ಜತೆ ಕಾಡುವ ಇನ್ನೊಂದು ಸಮಸ್ಯೆ ಎಂದರೆ ಗುರುತಿನ ಚೀಟಿ ಪಡೆಯಲು 18 ವರ್ಷ ಮೇಲ್ಪಟ್ಟಿರಬೇಕು. ಒಂದು ವೇಳೆ ಸ್ಥಿರಾಸ್ತಿಯಲ್ಲಿ ಹಕ್ಕು ಪಡೆಯುವ ವ್ಯಕ್ತಿ ಅಪ್ರಾಪ್ತನಾಗಿದ್ದರೆ 18 ವರ್ಷ ತುಂಬುವ ವರೆಗೆ ಕಾಯಬೇಕು ಎನ್ನುವ ಗೊಂದಲ ಇದೆ. ಸಂವಿಧಾನ ನೀಡಿದ ಆಸ್ತಿ ಹಕ್ಕು ಉಲ್ಲಂಘನೆಗೆ ದಾರಿ ಮಾಡಿ ಕೊಟ್ಟಂತಿದೆ. ಬೈಂದೂರಿನಲ್ಲಿ 150ಕ್ಕೂ ಅಧಿಕ ಇಂತಹ ಪ್ರಕರಣಗಳಿವೆ. ಹೀಗಾಗಿ ಜಿಲ್ಲಾಡಳಿತ ಸಮರ್ಪಕ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವತ್ರಿಕ ಅಭಿಪ್ರಾಯವಾಗಿದೆ.
ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯವ್ಯಾಪಿ ಈ ಸಮಸ್ಯೆ ಕಳೆದ ಆರು ತಿಂಗಳುಗಳಿಂದ ಇದೆ. ತಂತ್ರಾಂಶ ಗೊಂದಲದ ಕಾರಣ ಬಾಕಿ ಉಳಿದಿದ್ದು ಈಗಾಗಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು ಶೀಘ್ರ ಸರಿಪಡಿಸಲಾಗುವುದು.
-ಶ್ರೀಧರ್, ಜಿಲ್ಲಾ ನೋಂದಣಾಧಿಕಾರಿ
– ಅರುಣ ಕುಮಾರ್ ಶಿರೂರು