ಸಕಲೇಶಪುರ: ಪಟ್ಟಣದ ಹೇಮಾವತಿ ಸೇತುವೆಯ ಒಂದು ಭಾಗದಲ್ಲಿ ಮಾತ್ರ ದುರಸ್ತಿ ಕಾಮಗಾರಿ ನಡೆಸಿ ಇನ್ನೊಂದು ಭಾಗದಲ್ಲಿ ದುರಸ್ತಿ ಕಾಮಗಾರಿ ನಡೆಸದ ಹಿನ್ನೆಲೆಯಲ್ಲಿ ಸಾರ್ವಜನಿಕರು ಗುತ್ತಿಗೆದಾರರು ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿಯಂತರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪೂರ್ವ ತಯಾರಿ ಇಲ್ಲದೇ ಸೇತುವೆಯ ಒಂದು ಭಾಗದಲ್ಲಿ ಲಘು ಡಾಂಬರಿಕರಣ ಕಾಮಗಾರಿಯನ್ನು ನಡೆಸಿದ್ದು ಇದರಿಂದ ಪಟ್ಟಣದಲ್ಲೆಡೆ ವಾಹನಗಳ ದಟ್ಟಣಿಯುಂಟಾಗಿ ಸುಗಮ ವಾಹನಗಳ ಸಂಚಾರಕ್ಕೆ ಅನಾನೂಕೂಲ ವಾಗಿತ್ತು. ಜೊತೆಗೆ ತೆಳುವಾಗಿ ಡಾಂಬರಿಕರಣ ಮಾಡಿದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ವಿರೋಧ ಕಂಡು ಬಂದಿತ್ತು. ಆದರೆ ರಸ್ತೆಯ ಮತ್ತೂಂದು ಭಾಗದಲ್ಲಿ ಕನಿಷ್ಠ ಇದೇ ರೀತಿ ಕಾಮಗಾರಿಯನ್ನು ಸಹ ಮಾಡಲು ಮುಂದಾಗದೇ ಅರ್ಧಕ್ಕೆ ಬಿಟ್ಟಿರುವುದರಿಂದ ಸಾರ್ವಜನಿಕರಲ್ಲಿ ಆಕ್ರೋಶ ಉಂಟಾಗಿದೆ. ಸೇತುವೆ ಈಗಾಗಲೇ ಸಂಪೂರ್ಣವಾಗಿ ಹದಗೆಟ್ಟಿದ್ದು ಭಾರೀ ವಾಹನಗಳು ಸಂಚರಿಸಿದಾಗ ಸೇತುವೆ ನಡುಗುವ ಅನುಭವವಾಗುತ್ತದೆ. ಮಂಗಳೂರಿನ ಬಿ.ಸಿ ರೋಡ್ ಸಮೀಪ ಸೇತುವೆ ಕುಸಿದಂತೆ ಈ ಸೇತುವೆಯೂ ಕುಸಿಯುವುದರಲ್ಲಿ ಅನುಮಾನ ವಿಲ್ಲ. ಜನಪ್ರತಿನಿಧಿಗಳು ಇತ್ತ ಗಮನವರಿಸಿ ಸೇತುವೆಯ ದುರಸ್ತಿ ಮಾಡಿಸಬೇಕಾಗಿದೆ.
Advertisement
ಕಳೆದ ನಾಲ್ಕು ವರ್ಷಗಳ ಹಿಂದೆ ಚೆನ್ನಾಗಿದ್ದ ಹೇಮಾವತಿ ಸೇತುವೆಯ ಮೇಲ್ಭಾಗದ ರಸ್ತೆಯನ್ನು ಏಕಾಏಕಿ ಯಂತ್ರಗಳ ಮುಖಾಂತರ ಕೆರೆದು ಹಾಕಿದ್ದು ನಂತರ ಸೇತುವೆಯನ್ನು ದುರಸ್ತಿ ಮಾಡದ ಹಾಗೇ ಬಿಡಲಾಗಿತ್ತು. ಹೇಮಾವತಿ ಸೇತುವೆ ತುಂಬಾ ಗುಂಡಿಮಯವಾಗಿದ್ದರಿಂದ ದ್ವಿಚಕ್ರ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅಪಘಾತಗಳು ಈ ಸೇತುವೆಯ ಮೇಲೆ ನಡೆದಿದ್ದರೂ ಸೇತುವೆಯ ಮೇಲಿನ ರಸ್ತೆಯನ್ನು ದುರಸ್ತಿ ಮಾಡಲು ಹೆದ್ದಾರಿ ಅಧಿಕಾರಿಗಳು ಮುಂದಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸೇತುವೆ ದುರಸ್ತಿಗೆ ಒತ್ತಾಯಿಸಿದ್ದರು.