Advertisement

ಬಿಡುಗಡೆಯಾಗದ ಹಣ: ಆಶ್ರಯ ಯೋಜನೆ ಮನೆಗಳು ಅಪೂರ್ಣ

03:54 PM Oct 14, 2019 | sudhir |

ಹೆಬ್ರಿ: ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತದ ಆಶ್ರಯ ಯೋಜನೆಯಡಿಯಲ್ಲಿ ಮಂಜೂರಾದ ಮನೆಗಳು ಪೂರ್ಣಗೊಳ್ಳದೆ ಊಟಕ್ಕೆ ಇಲ್ಲದ ಉಪ್ಪಿನ ಕಾಯಿಯಂತಾಗಿವೆ.

Advertisement

ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಮಂಜೂರಾದ ಹೆಚ್ಚಿನ ಮನೆಗಳಿಗೆ ಎರಡು ವರ್ಷ ಕಳೆದರೂ ಪೂರ್ಣ ಪ್ರಮಾಣದ ಹಣ ಬಿಡುಗಡೆಯಾಗದೆ ಫ‌ಲಾನುಭವಿಗಳು ಸಂಕಷ್ಟದಲ್ಲಿದ್ದಾರೆ. ಕೆಲವರು ಮನೆ ಕಟ್ಟಲು ಅಡಿಪಾಯ ಹಾಕಿ ವರ್ಷವೇ ಕಳದಿದೆ. ಇನ್ನು ಕೆಲವರು ಗೋಡೆ ಆಗಿ ಮುಂದಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಕುಚ್ಚಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಫ‌ಲಾನುಭವಿಯೋರ್ವರಿಗೆ ಮನೆಗೆ ಅನುದಾನ ಬಿಡುಗಡೆಯಾಗಿ 2 ವರ್ಷವಾದರೂ ಇನ್ನೂ ಹಣ ಬಂದಿಲ್ಲ. ಮೊದಲ ಕಂತು ಬಂತು ಎಂದು ಪಂಚಾಂಗ ಹಾಕಿದರು. ಆದರೆ ಮುಂದಿನ ಹಣ ಬಾರದೆ ವಾಸಿಸಲು ಮನೆಯೂ ಇಲ್ಲದೆ ಪಂಚಾಂಗದ ಸಮೀಪ ಶೆಡ್‌ವೊಂದನ್ನು ಕಟ್ಟಿಕೊಂಡು ಕಳೆದ ಒಂದು ವರ್ಷದಿಂದ ವಾಸಿಸುತ್ತಿದ್ದಾರೆ. ಕೆಲವರಿಗೆ ಮೊದಲ ಕಂತಿನ ಹಣ ಮಾತ್ರ ಬಿಡುಗಡೆಯಾಗಿದ್ದು, ಉಳಿದ ಕಂತುಗಳು ಬಿಡುಗಡೆಯಾಗಿಲ್ಲ.

ಮನೆ ಕಟ್ಟಿದರೆ ಸಮಸ್ಯೆ
ಆಶ್ರಯ ಯೋಜನೆ ಜಿ.ಪಿ.ಎಸ್‌. ಆಧಾರಿತ ಭೌತಿಕ ಪ್ರಗತಿ ಪರಿಶೀಲಿಸಿ ಹಣ ಬಿಡುಗಡೆಯಾಗುವುದರಿಂದ ಪ್ರತಿಯೊಂದು ಹಂತದ ಕಾಮಗಾರಿಯನ್ನು ನೋಡಿ ಅದರ ಪ್ರಕಾರ ಹಣ ಬಿಡುಗಡೆ ಮಾಡಲಾಗುತ್ತದೆ. ಒಂದು ವೇಳೆ ಹಣ ಮತ್ತೆ ಪಡೆಯುತ್ತೇನೆ ಎಂದು ಸಾಲ ಮಾಡಿ ಮನೆ ಮುಂದುವರಿಸಿದರೆ ಆಶ್ರಯ ಯೋಜನೆಯಲ್ಲಿ ಬರುವ ಹಣ ಬರುವುದಿಲ್ಲ. ಈ ಕಾರಣದಿಂದ ಹೆಚ್ಚಿನವರು ಪಂಚಾಂಗ, ಗೋಡೆ ನಿರ್ಮಿಸಿ ಮುಂದಿನ ಹಣಬಿಡುಗಡೆಗೆ ಕಾಯುತ್ತಿದ್ದಾರೆ.

ಎಲ್ಲೆಲ್ಲಿ ಸಮಸ್ಯೆ?
ಹೆಬ್ರಿ ತಾಲೂಕಿನ ಕುಚ್ಚಾರು ಗ್ರಾ.ಪಂ. ವ್ಯಾಪ್ತಿಯಲ್ಲಿ 2017- 18ನೇ ಸಾಲಿನಲ್ಲಿ ಒಟ್ಟು 61 ಮನೆಗಳಿಗೆ ಅನುದಾನ ಬಿಡುಗಡೆಯಾಗಿದ್ದು ಅದರಲ್ಲಿ 21ಮನೆಗಳು ಪೂರ್ಣಗೊಂಡಿವೆ. 40 ಮನೆಗಳು ಬಾಕಿ ಇವೆ. ಇದರಲ್ಲಿ ಅರಣ್ಯ ಅಥವಾ ಬೇರೆ ಬೇರೆ ಕಾರಣಗಳಿಂದ 17 ಮನೆಗಳ ಅರ್ಜಿಗಳು ತಿರಸ್ಕೃತಗೊಂಡಿದ್ದು, 23ಮನೆಗಳು ಅರ್ಧದಲ್ಲಿ ನಿಂತಿವೆ.

ಶಿವಪುರ ಪಂಚಾಯತ್‌ ವ್ಯಾಪ್ತಿಯಲ್ಲಿ ಹಿಂದಿನ ಬಾರಿಯೇ ಹಲವು ಮನೆಗಳು ಅರ್ಧದಲ್ಲಿ ನಿಂತಿದ್ದು 2017-18ನೇ ಸಾಲಿನಲ್ಲಿ ಸುಮಾರು 10 ಮನೆಗಳು ಅಪೂರ್ಣವಾಗಿವೆ. ನಾಡಾ³ಲು ಗ್ರಾ.ಪಂ. ವ್ಯಾಪ್ತಿಯಲ್ಲಿ 2017-18ನೇ ಸಾಲಿನಲ್ಲಿ ಬಿಡುಗಡೆಯಾದ ಒಟ್ಟು 12 ಮನೆಗಳಲ್ಲಿ 6 ಮನೆಗಳು ಪೂರ್ಣಗೊಂಡು 2 ಮನೆಗಳು ತಿರಸ್ಕೃತಗೊಂಡು 4 ಮನೆಗಳು ಬಾಕಿ ಇವೆ. ಹೆಬ್ರಿ ಗ್ರಾ.ಪಂ.

Advertisement

ವ್ಯಾಪ್ತಿಯಲ್ಲಿ 2015-16ರಲ್ಲಿ ಅನುದಾನ ಬಿಡುಗಡೆಯಾದ ಮನೆಗಳಲ್ಲಿ ಸುಮಾರು 22 ಮನೆಗಳು ಪ್ರಗತಿಯಲ್ಲಿದ್ದು ಕೆಲವೊಂದು ಮನೆಗಳು ದಾಖಲೆ ಸರಿಯಿಲ್ಲ ಎಂಬ ಕಾರಣಕ್ಕೆ ನಿಂತಿವೆ. ಇದೇ ರೀತಿ ಮುದ್ರಾಡಿ, ವರಂಗ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೂಡ ಸಮಸ್ಯೆಗಳಿವೆ.

ಕೆಲವೊಂದು ಸಮಸ್ಯೆಗೆ ಜನರೇ ಕಾರಣ
ಆರ್‌ಟಿಸಿ ತೋರಿಸಿ ಈ ಪರಿಸರದಲ್ಲಿ ಮನೆ ಕಟ್ಟುವುದಾಗಿ ಹೇಳಿ ಬಳಿಕ ಕುಮ್ಕಿ ಜಾಗದಲ್ಲಿ ಪಂಚಾಂಗ ಹಾಕಿದ ಬಗ್ಗೆ ದೂರುಗಳು ಬಂದು ಹಣ ಬಿಡುಗಡೆಯಾಗದಿದ್ದರೆ ಇದಕ್ಕೆ ಜನರೇ ಕಾರಣ ಎಂಬುದು ಅಧಿಕಾರಿಗಳ ಅಭಿಪ್ರಾಯ.

ಉಸ್ತುವಾರಿ ಸಚಿವರ ಗಮನಕ್ಕೆ
ಕೆಲವೊಂದು ಮನೆಗಳಿಗೆ ಒಂದು ಅಥವಾ ಎರಡು ಕಂತಿನ ಹಣ ಬಿಡುಗಡೆಯಾಗಿದೆ. ಉಳಿದ ಮನೆಗಳಿಗೆ ಬಿಡುಗಡೆಯಗಿಲ್ಲ. ಈ ಬಗ್ಗೆ ಜಿ.ಪಂ. ಸಿಇಒ ಅವರು ನಿಗಮಕ್ಕೆ ವರದಿ ಸಲ್ಲಿಸಬೇಕು. ಇದನ್ನು ಮಾಡದ ಕಾರಣ ವಿಳಂಬವಾಗಿದೆ. ಇತ್ತೀಚೆಗೆ ಭೇಟಿ ನೀಡಿದ ಉಸ್ತುವಾರಿ ಸಚಿವರ ಗಮನಕ್ಕೂ ವಿಷಯವನ್ನು ತಂದಿದ್ದು ಇನ್ನೆರಡು ದಿನಗಳಲ್ಲಿ ವರದಿ ಕಳುಹಿಸಿ ಸಮಸ್ಯೆ ಬಗೆಹರಿಸಲಾಗುವುದು.
-ವಿ. ಸುನಿಲ್‌ ಕುಮಾರ್‌, ಶಾಸಕರು, ಕಾರ್ಕಳ

ಸಂಬಂಧಪಟ್ಟವರು ಗಮನಹರಿಸಿ
ಆಶ್ರಯ ಯೋಜನೆಯಡಿಯಲ್ಲಿ ಮನೆಯ ಅಡಿಪಾಯ ಹಾಕಿ ಮೊದಲ ಕಂತಿನ ಹಣ ಬಿಡುಗಡೆಯಾಗಿದೆ. ಈಗ ಡೀಮ್ಡ್ ಫಾರೆಸ್ಟ್‌ ಎಂದು ಹಣಬಿಡುಗಡೆ ಆಗುತ್ತಿಲ್ಲ ಎನ್ನುತ್ತಿದ್ದಾರೆ. ಇಂತಹ ಹಲವು ಮನೆಗಳಿವೆ. ಬಡತನದಿಂದ ಜೀವನ ನಡೆಸುವವರಿಗೆ ವಾಸಿಸಲು ಒಂದು ಸೂರು ಸಿಕ್ಕಿತು ಎಂದು ನಿಟ್ಟುಸಿರುಬಿಟ್ಟವರು ಈಗ ಹಣಕ್ಕಾಗಿ ಪಂಚಾಯತ್‌ಗೆ ದಿನನಿತ್ಯ ಹೋಗಬೇಕಾದ ಪರಿಸ್ಥಿತಿ ಇದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು.
-ಶ್ರೀಕಾಂತ್‌ ಪೂಜಾರಿ, ಸಾಮಾಜಿಕ ಕಾರ್ಯಕರ್ತರು, ಕುಚ್ಚಾರು

ದಾಖಲೆ ಸರಿ ಇದ್ದವರಿಗೆ ಹಣ ಬಿಡುಗಡೆ
94ಸಿ ಅಡಿಯಲ್ಲಿ ಜಾಗ ಪಡೆದವರು, ಡೀಮ್ಡ್ ಫಾರೆಸ್ಟ್‌, ಕುಮ್ಕಿ ಜಾಗ ಹಾಗೂ ಮರಳು ಸಮಸ್ಯೆ ಇರುವ ಕಾರಣ ಕೆಲವೊಂದು ಮನೆಗಳು ಪೂರ್ಣಗೊಂಡಿಲ್ಲ. ಉಳಿದಂತೆ ದಾಖಲೆ ಸರಿಯಿದ್ದವರಿಗೆ ಜಿ.ಪಿ.ಎಸ್‌. ಮೂಲಕ ಹಂತ ಹಂತವಾಗಿ ಹಣ ಬಿಡುಗಡೆಯಾಗಿದೆ.
-ವಿಜಯ, ಪಿಡಿಒ,ಹೆಬ್ರಿ ಗ್ರಾ.ಪಂ.

– ಉದಯ್‌ ಕುಮಾರ್‌ ಹೆಬ್ರಿ

Advertisement

Udayavani is now on Telegram. Click here to join our channel and stay updated with the latest news.

Next