Advertisement

ಕಾಪುವಿನಲ್ಲಿ ನಿಯಂತ್ರಣಕ್ಕೆ ಬಾರದ ಬೀದಿ ನಾಯಿಗಳ ಕಾಟ ; ಸಾರ್ವಜನಿಕರಿಗೆ ಭೀತಿ

11:08 PM Oct 02, 2019 | Sriram |

ಕಾಪು: ಕಾಪು ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟ ದಿನದಿಂದ ಹೆಚ್ಚಾಗುತ್ತಿದೆ. ಇಲ್ಲಿನ ಪೇಟೆಯಲ್ಲಿ ಅಲೆದಾಡುವ ಬೀದಿ ನಾಯಿಗಳು ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸುತ್ತಿದ್ದು, ನಾಗರಿಕರಿಗೆ ನಿರ್ಭೀತಿಯಿಂದ ನಡೆದಾಡುವುದು ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಅದರೊಂದಿಗೆ ಹುಚ್ಚು ನಾಯಿಗಳ ಭೀತಿಯೂ ಹೆಚ್ಚಾಗಿದೆ.

Advertisement

ಹುಚ್ಚು ನಾಯಿ ಕಡಿತ
ಕಾಪು ಪೇಟೆಯಲ್ಲಿ ಬೀದಿ ನಾಯಿಗಳ ಜೊತೆಗೆ ಹುಚ್ಚು ನಾಯಿಗಳ ಹಾವಳಿಯೂ ಹೆಚ್ಚಾಗಿದೆ. ಸೆ. 25 ರಂದು ಒಂದೇ ದಿನ 10 ಕ್ಕೂ ಹೆಚ್ಚು ಮಂದಿ ನಾಗರಿಕರು ಮತ್ತು 30ಕ್ಕೂ ಹೆಚ್ಚು ಬೀದಿ ನಾಯಿಗಳು ಮತ್ತು ಸಾಕು ನಾಯಿಗಳಿಗೆ ಹುಚ್ಚು ನಾಯಿ ಕಡಿದಿದ್ದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಳಗೊಂಡಿದೆ.

ಎಲ್ಲೆಲ್ಲಿ ಬೀದಿ ನಾಯಿ ಕಾಟ ಪುರಸಭಾ ವ್ಯಾಪ್ತಿಯ ಕಾಪು ಪೇಟೆ, ಭಾರತ್‌ನಗರ, ಕಲ್ಯ, ಬಡಗು ಕಲ್ಯ, ತೆಂಕು ಕಲ್ಯ, ಉಳಿಯಾರಗೋಳಿ, ಮಲ್ಲಾರು, ಮೂಳೂರು ಪರಿಸರಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಅದರೊಂದಿಗೆ ಕಲ್ಯ, ಭಾರತ್‌ ನಗರ ಪ್ರದೇಶದಲ್ಲಿ ಹುಚ್ಚು ನಾಯಿಯ ಭೀತಿ ಹೆಚ್ಚಾಗಿದೆ.

ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಸೆಪ್ಟಂಬರ್‌ ತಿಂಗಳೊಂದರಲ್ಲೇ ಸುಮಾರು 25 ರಿಂದ 30 ಮಂದಿ ಹುಚ್ಚು ನಾಯಿ ಕಡಿತಕ್ಕೊಳಗಾಗಿ ಚುಚ್ಚುಮದ್ದು ಪಡೆದಿದ್ದಾರೆ.

500ಕ್ಕೂ ಅಧಿಕ ನಾಯಿಗಳ ಗುರುತು
ಪುರಸಭೆ ವ್ಯಾಪ್ತಿಯಲ್ಲಿ 500ಕ್ಕೂ ಅಧಿಕ ಬೀದಿ ನಾಯಿಗಳನ್ನು ಗುರುತಿಸಲಾಗಿದ್ದು, ಅವುಗಳ ನಿಯಂತ್ರಣಕ್ಕೆ ಪುರಸಭೆ ಹಿಂದೆಯೇ ಕಾರ್ಯೋನ್ಮುಖವಾಗಿತ್ತು. ಬೀದಿನಾಯಿಗಳ ಜತೆಗೆ ಸಾಕು ನಾಯಿಗಳ ನಿಯಂತ್ರಣಕ್ಕೂ ಕ್ರಮ ತೆಗೆದುಕೊಳ್ಳಲಾಗಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪುರಸಭೆಯು ತಿಳಿಸಿದೆ.

Advertisement

ನಿಯಂತ್ರಣಕ್ಕೆ ಮನವಿ
ಬೀದಿ ನಾಯಿಗಳ ಬಗ್ಗೆ ಹಿಂದಿನ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವನೆ ಮಾಡಿ, ಬೀದಿ ನಾಯಿಗಳ ನಿಯಂತ್ರಣ ಮಾಡುವಂತೆ ಒತ್ತಾಯಿಸಲಾಗಿತ್ತು. ಅದರಂತೆ ಬೀದಿ ನಾಯಿಗಳ ನಿಯಂತ್ರಣದ ಜತೆಗೆ, ಪಶು ಸಂಗೋಪನಾ ಇಲಾಖೆಯ ಮೂಲಕ ಬೀದಿ ನಾಯಿಗಳಿಗೆ ವಿಶೇಷ ಚುಚ್ಚು ಮದ್ದು ನೀಡುವಂತೆ ಪುರಸಭೆಯ ಮುಖ್ಯಾಧಿಕಾರಿಗಳನ್ನು ಒತ್ತಾಯಿಸಲಾಗಿದೆ.
-ಅರುಣ್‌ ಶೆಟ್ಟಿ ಪಾದೂರು,
ಸದಸ್ಯರು, ಕಾಪು ಪುರಸಭೆ

ನಿಯಂತ್ರಣಕ್ಕೆ ತುರ್ತು ಕ್ರಮ
ಬೀದಿ ನಾಯಿಗಳ ನಿಯಂತ್ರಣಕ್ಕೆ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ನೀಡುವ ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡಲಾಗಿದ್ದು, ಬೀದಿ ನಾಯಿಗಳ ನಿಯಂತ್ರಣಕ್ಕೆ ಅತಿ ಶೀಘ್ರದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು.
-ವೆಂಕಟರಮಣಯ್ಯ,
ಪ್ರಭಾರ ಮುಖ್ಯಾಧಿಕಾರಿ, ಕಾಪು ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next