Advertisement

ಜೀವಕ್ಕೇ ಬ್ರೇಕ್‌ ಹಾಕುವ ಅವೈಜ್ಞಾನಿಕ ಬ್ಯಾರಿಕೇಡ್‌

03:08 PM Oct 05, 2017 | Team Udayavani |

ಪುತ್ತೂರು : ಅವೈಜ್ಞಾನಿಕ ಬ್ಯಾರಿಕೇಡ್‌ಗಳು ಜೀವ ಬಲಿ ಪಡೆಯುತ್ತಿವೆ. ವೇಗ ನಿಯಂತ್ರಿಸಲೆಂದು ಅಳವಡಿಸುವ ಉದ್ದೇಶ ಸರಿ. ಆದರೆ ಎಲ್ಲಿ ಮತ್ತು ಹೇಗೆ ಬ್ಯಾರಿಕೇಡ್‌ ಹಾಕಬೇಕು ಎಂಬುದನ್ನೇ ಇಲಾಖೆ ಮರೆತಂತಿದೆ.

Advertisement

ಮಂಗಳೂರಿನಿಂದ ಪುತ್ತೂರು ಮಾರ್ಗವಾಗಿ ಸುಳ್ಯದವರೆಗೆ ಹಲವು ಕಡೆಗಳಲ್ಲಿ ಬ್ಯಾರಿಕೇಡ್‌ ಗಳನ್ನು ಕಾಣಬಹುದು. ಜನಜಂಗುಳಿ ಹೆಚ್ಚಿರುವ ಕಡೆ, ವಾಹನ ಹಾಗೂ ಜನರನ್ನು ನಿಯಂತ್ರಿಸುವ ಅನಿವಾರ್ಯತೆ ಇದೆ. ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಸಾಗುತ್ತಿರುತ್ತವೆ. ಒಳರಸ್ತೆಯಿಂದ ಏಕಾಏಕೀ ಹೆದ್ದಾರಿಗಿಳಿಯುವ ವಾಹನಗಳು ಮತ್ತು ಜನರು
ಅಪಘಾತಕ್ಕೆ ಕಾರಣವಾಗುತ್ತಾರೆ. ಒಳರಸ್ತೆಗಾದರೆ ಹಂಪ್ಸ್‌ ನಿರ್ಮಿಸಬಹುದು. ಆದರೆ ಹೆದ್ದಾರಿಗೆ ಹಂಪ್ಸ್‌ ನಿರ್ಮಿಸುವಂತಿಲ್ಲ. ಆದ್ದರಿಂದ ಬ್ಯಾರಿಕೇಡ್‌ ಅಳವಡಿಸಲಾಗುತ್ತಿದೆ.

ವರದಿ ಮೇಲೇ ಅನುಮಾನ
ಭಾರತದ ಮೋಟಾರ್‌ ವಾಹನ ಅಧಿನಿಯಮ ಹಾಗೂ ಕರ್ನಾಟಕ ಪೊಲೀಸ್‌ ಅಧಿನಿಯಮದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ಬ್ಯಾರಿಕೇಡ್‌ ಅಳವಡಿಸಲು ಆದೇಶ ಹೊರಡಿಸುವ ಅಧಿಕಾರ ಪೊಲೀಸ್‌ವರಿಷ್ಠಾಧಿಕಾರಿಗಿದೆ. ಇವರು ಸ್ಥಳೀಯ ಠಾಣಾಧಿಕಾರಿಗಳಿಗೆ ಸೂಚಿಸಿ, ಬ್ಯಾರಿಕೇಡ್‌ ಅಳವಡಿಸುತ್ತಾರೆ. ಹಾಗೆಂದು ಏಕಾಏಕಿ ಬ್ಯಾರಿಕೇಡ್‌ ಹಾಕುವಂತಿಲ್ಲ.
ಇದಕ್ಕೆ ಮೊದಲು ಅಪಘಾತದ ಸಂಖ್ಯೆ, ಒಳರಸ್ತೆ, ಜಂಕ್ಷನ್‌, ಬಸ್‌ ಹತ್ತುವ ಜನರ ಪ್ರಮಾಣ ಮೊದಲಾದವುಗಳ ಅಧ್ಯಯನಮಾಡಿ, ವರದಿ ಸಿದ್ಧಪಡಿಸಬೇಕು. ಇದೀಗ ಈ ಅಧ್ಯಯನದ ಮೇಲೆಯೇ ಸಣ್ಣ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಪುತ್ತೂರಿನ ಮುಕ್ರಂಪಾಡಿ ಬಳಿಯಲ್ಲಿ ಹಾಕಿರುವ ಬ್ಯಾರಿಕೇಡ್‌ಗೆ ಎರಡು ದಿನಗಳ ಹಿಂದೆ ಒಂದು ಜೀವ ಬಲಿಯಾಯಿತು.
ಇಂದಿಗೂ ಆ ಮೃತದೇಹದ ಗುರುತು ಪತ್ತೆಯಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಫುಟ್‌ಪಾತ್‌ ಇಲ್ಲದೇ ಇರುವುದು.

ಹಲವು ಕಡೆ ಹೆದ್ದಾರಿಯ ಬದಿಯಲ್ಲಿ ಪಾದಚಾರಿಗಳಿಗೆ ನಡೆದಾಡಲು ಸ್ಥಳವಿಲ್ಲ. ಇದ್ದ ಸ್ವಲ್ಪ ಜಾಗವನ್ನು ರಸ್ತೆ ಆಕ್ರಮಿಸಿರುತ್ತದೆ. ಇಂತಹ ಸ್ಥಳದಲ್ಲಿ ಬ್ಯಾರಿಕೇಡ್‌ ಅಳವಡಿಸಿದರೆ, ಜನರು ನಡೆದಾಡುವುದು ಎಲ್ಲಿ? ಇನ್ನೂ ಕೆಲವೆಡೆ ಬ್ಯಾರಿಕೇಡ್‌ನ‌ ಬದಿಯಲ್ಲಿ ಪೊದೆ ಬೆಳೆದು, ಜನರಿಗೆ ನಡೆದಾಡಲು ಸಾಧ್ಯವಾಗುವುದಿಲ್ಲ. ರಸ್ತೆ ನಡುವಿಗೆ ಜನರು ಬರಲೇಬೇಕಾಗುವುದು.

Advertisement

ರಾರಾಜಿಸುವ ಜಾಹೀರಾತು
ಠಾಣಾ ವ್ಯಾಪ್ತಿಗೆ ಬ್ಯಾರಿಕೇಡ್‌ ಪೂರೈಸುವಷ್ಟು ಅನುದಾನ ಪೊಲೀಸ್‌ ಇಲಾಖೆಯಲ್ಲಿಲ್ಲ. ಆದ್ದರಿಂದ ದಾನಿಗಳ ಮೊರೆ ಹೋಗಿದೆ. ಪರಿಣಾಮ ಪ್ರತಿ ಬ್ಯಾರಿಕೇಡ್‌ನಲ್ಲಿ ಜಾಹೀರಾತುಗಳು ರಾರಾಜಿಸುತ್ತಿರುತ್ತವೆ. ಅಪಘಾತ ನಿಯಂತ್ರಣಕ್ಕೆಂದು ಹಾಕುವ ಬ್ಯಾರಿಕೇಡ್‌, ಚಾಲಕರ ಗಮನವನ್ನು ಬೇರೆಡೆ ಆಕರ್ಷಿಸುತ್ತಿದೆ. ಇದೂ ಅಪಘಾತಕ್ಕೆ ದಾರಿಯಾಗುತ್ತಿದೆ. 

ಅಪಘಾತಕ್ಕೆ ಕಾರಣ
ಹಂಪ್ಸ್‌ ನಿರ್ಮಾಣಕ್ಕೆ ಈ ಹಿಂದೆ ಸುಪ್ರೀಂ ಕೋರ್ಟ್‌ ಆಕ್ಷೇಪ ವ್ಯಕ್ತಪಡಿಸಿತ್ತು. ಅಪಘಾತ ನಿಯಂತ್ರಿಸಬೇಕಾದ ಹಂಪ್‌ಗ್ಳೇ ಅಪಘಾತ ಸೃಷ್ಟಿಸುತ್ತಿದ್ದವು. ಇದಕ್ಕೆ ಮುಖ್ಯ ಕಾರಣ ಹಂಪ್‌ ಗಳ ಸುತ್ತ ಬಿಳಿ ಬಣ್ಣ ಬಳಿಯದಿರುವುದು, ಸ್ಟಿಕ್ಕರ್‌ ಹಾಕದಿರುವುದು ಹಾಗೂ ಅವೈಜ್ಞಾನಿಕವಾಗಿ ನಿರ್ಮಿಸಿರುವುದು. ಇದಕ್ಕೆ ಪರ್ಯಾಯವಾಗಿ ಹಾಕಲಾದ ಬ್ಯಾರಿಕೇಡ್‌ಗಳು ಇದೀಗ ಹಂಪ್‌ಗಳ ಹಾದಿಯನ್ನೇ ಹಿಡಿಯುತ್ತಿವೆ. ಪೊಲೀಸ್‌ ಇಲಾಖೆ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಬ್ಯಾರಿಕೇಡ್‌ಗೆ ಪರ್ಯಾಯವಾಗಿ ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕಾದೀತು.

ಪರಿಶೀಲನೆ ನಡೆಸಿ ಕ್ರಮ
ಬ್ಯಾರಿಕೇಡ್‌ಗಳನ್ನು ಸಾಕಷ್ಟು ಹಿಂದೆಯೇ ಅಳವಡಿಸಲಾಗಿದೆ. ಆಗಿನ ಸ್ಥಿತಿಯನ್ನು ಅಧ್ಯಯನ ಮಾಡಿ, ಬ್ಯಾರಿಕೇಡ್‌ ಹಾಕಲಾಗಿದೆ. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಲಾಗುವುದು. ಈ ಬಗ್ಗೆ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಸುಧೀರ್‌ ಕುಮಾರ್‌ ರೆಡ್ಡಿ,
ಎಸ್ಪಿ, ದ.ಕ.

ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next