Advertisement

ಅನರ್ಹ ಶಾಸಕರು: ಸ್ಪೀಕರ್‌ ಪಾತ್ರದ ಚರ್ಚೆ ಶುರು

11:34 PM Oct 25, 2019 | Lakshmi GovindaRaju |

ಬೆಂಗಳೂರು: ರಾಜ್ಯದ ಹದಿನೇಳು ಶಾಸಕರ ಅನರ್ಹತೆ “ಚೆಂಡು’ ಮತ್ತೆ ಸ್ಪೀಕರ್‌ ಅಂಗಳಕ್ಕೆ ಬರುತ್ತಾ? ಅನರ್ಹತೆ ರದ್ದಾಗುತ್ತಾ? ಉಪ ಚುನಾವಣೆ ಮುಂದೂಡಿಕೆ ಯಾಗುತ್ತಾ ಎಂಬ ವಿಚಾರ ಇದೀಗ ರಾಜ್ಯದ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. “ಅನರ್ಹತೆ ಸಂಬಂಧ ಹೊಸದಾಗಿ ನಿರ್ಧಾರ ತೆಗೆದುಕೊಳ್ಳಲು ಹಾಲಿ ಸ್ಪೀಕರ್‌ ಸಿದ್ಧ’ ಎಂಬ ಸ್ಪೀಕರ್‌ ಪರ ವಾದ ಮಾಡುತ್ತಿರುವ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಸುಪ್ರೀಂಕೋರ್ಟ್‌ ಮುಂದೆ ಹೇಳಿರುವುದು ಇಡೀ ಪ್ರಕರಣಕ್ಕೆ ಮತ್ತೂಂದು ಟ್ವಿಸ್ಟ್‌ ದೊರೆಯುವ ಲಕ್ಷಣಗಳು ಕಂಡುಬರುತ್ತಿವೆ.

Advertisement

ಅನರ್ಹತೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಪೂರ್ಣಗೊಂಡು, ತೀರ್ಪು ಕಾಯ್ದಿರಿಸಲಾಗಿದೆಯಾದರೂ ಒಂದೊಮ್ಮೆ ಸುಪ್ರೀಂಕೋರ್ಟ್‌ ಅನರ್ಹತೆ ಇತ್ಯರ್ಥ ಅಥವಾ ಮರು ಪರಿಶೀಲನೆಗೆ ಈಗಿನ ಸ್ಪೀಕರ್‌ ತೀರ್ಮಾನ ಕೈಗೊಳ್ಳಲಿ ಎಂಬ ತೀರ್ಪು ಕೊಟ್ಟಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸುತ್ತಿನ “ಆಟ’ ಪ್ರಾರಂಭವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ವಿಚಾರಣೆ ಪೂರ್ಣಗೊಂಡಿರುವುದು, ತೀರ್ಪು ಕಾಯ್ದಿರಿಸಿರುವುದರಿಂದ ಅನರ್ಹತೆಗೊಂಡ ಶಾಸಕರು ನಿರಾಳವಾಗಿದ್ದು, ಮತ್ತೆ ನಮ್ಮ ಪ್ರಕರಣ ಸ್ಪೀಕರ್‌ ಅಂಗಳಕ್ಕೆ ಬರಲಿದೆ, ನಮ್ಮ ಅನರ್ಹತೆ ರದ್ದಾಗಲಿದೆ.

ರಾಜೀನಾಮೆ ವಾಪಸ್‌ ಪಡೆಯಲೂ ಅವಕಾಶವಿದ್ದು, ರಾಜೀನಾಮೆ ವಾಪಸ್‌ ಪಡೆದರೆ ಉಪ ಚುನಾವಣೆ ರದ್ದಾಗುತ್ತದೆ, ನಾವು ಶಾಸಕರಾಗಿ ಮುಂದುವರಿಯಬಹುದು. ನಮ್ಮದೇ ಆದ ಒಂದು ಗುಂಪು ರಚಿಸಿಕೊಳ್ಳಬಹುದು. ಆ ನಂತರ ಬೇಕಾದರೆ ಮುಂದೆ ಪರಿಸ್ಥಿತಿ ನೋಡಿಕೊಂಡು ರಾಜೀನಾಮೆ ನೀಡಬಹುದೆಂಬ ಆಶಾಭಾವನೆ ಯಲ್ಲಿದ್ದಾರೆ. ಜನವರಿ ವೇಳೆಗೆ ರಾಜೀನಾಮೆ ನೀಡಿದರೆ ನಂತರ ಅಲ್ಲಿಂದ ಆರು ತಿಂಗಳು ಚುನಾವಣೆಗೆ ಕಾಲಾವಕಾಶ ಸಿಗುತ್ತದೆ. ಅಲ್ಲಿವರೆಗೂ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿ ನಂತರ ಉಪ ಚುನಾವಣೆಗೆ ಹೋಗಬಹುದು. ಆಗ ನಮಗೆ ಅನುಕೂಲವೆಂಬ ಭಾವನೆ ಅನರ್ಹತೆಗೊಂಡ ಶಾಸಕರದ್ದಾಗಿದೆ ಎಂದು ಮೂಲಗಳು ತಿಳಿಸಿವೆ.

ಸಾರ್ವತ್ರಿಕ ಚುನಾವಣೆ ಗುಮ್ಮ?: ಇದರ ನಡುವೆ, ರಾಜ್ಯದಲ್ಲಿ ಮುಂದಿನ ವರ್ಷದ ಪ್ರಾರಂಭದಲ್ಲೇ ರಾಜ್ಯ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಯೇ ಎದು ರಾಗಲಿದೆ. ಮಹಾರಾಷ್ಟ್ರ-ಹರಿಯಾಣ ಫ‌ಲಿತಾಂಶದಿಂದ ತಕ್ಷಣಕ್ಕೆ ಉಪ ಚುನಾವಣೆಗೆ ಹೋಗಲು ಬಿಜೆಪಿ ಕೇಂದ್ರ ನಾಯಕರಿಗೂ ಇಷ್ಟವಿಲ್ಲ. ಅನರ್ಹತೆ ರದ್ದು ನಂತರ ಸ್ವಲ್ಪ ಕಾಲ ಬಿಟ್ಟು ರಾಜೀನಾಮೆ ಕೊಡಿಸಿ ಅದು ಅಂಗೀಕಾರವಾದ ನಂತರ ಅವರಿಗೆ ಸಚಿವ ಸ್ಥಾನ ನೀಡಿ ಅವರನ್ನೂ ಒಪ್ಪಿಸಿ ಒಂದೇ ಬಾರಿ ಸಾರ್ವತ್ರಿಕ ಚುನಾವಣೆಗೆ ಹೋಗುವ ಕಾರ್ಯತಂತ್ರವೂ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ಟಾರೆ ಸುಪ್ರೀಂಕೋರ್ಟ್‌ ತೀರ್ಪಿನ ನಂತರಷ್ಟೇ ಸ್ಪಷ್ಟತೆ ಸಿಗಲಿದೆ.

ಲೆಕ್ಕಾಚಾರ: ಸಿದ್ದರಾಮಯ್ಯ ಪ್ರತಿಪಕ್ಷ ನಾಯಕನಾಗಿ ಮತ್ತೆ ಕಾಂಗ್ರೆಸ್‌ನಲ್ಲಿ ಪ್ರಬಲ ಆಗುತ್ತಿರುವುದರಿಂದ ಉಪ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಶ್ರಮ ಹಾಕಿಯೇ ತೀರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಚುನಾವಣೆ ಎದುರಿಸಲು ಕಠಿಣವಾಗಬಹುದು. ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸ ಮಾಡಿ ಜನರ ವಿಶ್ವಾಸ ಗಳಿಸಿ ಮತ ಬ್ಯಾಂಕ್‌ ಗಟ್ಟಿಗೊಳಿಸಿಕೊಂಡೇ ಚುನಾವಣೆಗೆ ಹೋಗುವುದು ಸೂಕ್ತ ಎಂಬ ಲೆಕ್ಕಾ ಚಾರ ಅವರದಾಗಿದ್ದು ಬಿಜೆಪಿ ವರಿಷ್ಠರ ಮುಂದೆಯೂ ಇದನ್ನು ಹೇಳಿಕೊಂಡಿದ್ದಾರೆಂದು ಹೇಳಲಾಗಿದೆ.

Advertisement

ಸುಪ್ರೀಂಕೋರ್ಟ್‌ನಲ್ಲಿ ನಮ್ಮ ಪರ ತೀರ್ಪು ಬರಲಿದೆ. ನಮ್ಮ ಪರ ತೀರ್ಪು ಬರುವ ವಿಶ್ವಾಸವಿದೆ. ಸ್ಪೀಕರ್‌ ಒಂದು ವಾರ ಗಡುವು ನೀಡಬೇಕಿತ್ತು, ಕೇವಲ ಮೂರು ದಿನ ಕೊಟ್ಟಿದ್ದರಿಂದ ಆನ್ಯಾಯವಾಗಿತ್ತು.
-ಆರ್‌.ಶಂಕರ್‌, ಅನರ್ಹ ಶಾಸಕ

ಇದೊಂದು ಐತಿಹಾಸಿಕ ತೀರ್ಪು ಆಗಲಿದೆ. ಲೀಗಲ್‌ ಜರ್ನಲ್‌ನಲ್ಲಿ ದಾಖಲಾಗುವ ಕೇಸ್‌ ಆಗಿ ಉಳಿಯ ಲಿದೆ. ಸೂರ್ಯಚಂದ್ರರು ಇರೋ ತನಕ ಈ ತೀರ್ಪು ಉಳಿಯಲಿದೆ. ನಮಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ.
-ಎಚ್‌.ವಿಶ್ವನಾಥ್‌, ಅನರ್ಹ ಶಾಸಕ

ಅನರ್ಹತೆ ಪ್ರಕರಣ ಹಾಲಿ ಸ್ಪೀಕರ್‌ ಮರುಪರಿಶೀಲನೆಗೆ ಬಂದಾಗ ಅನರ್ಹತೆ ರದ್ದು ಮಾಡಿದರೆ ಶಾಸಕರ ರಾಜೀನಾಮೆ ಅಂಗೀಕಾರ ಮಾಡಬೇಕಾಗುತ್ತದೆ. ಆಗ ಅವರೆಲ್ಲರೂ ಉಪ ಚುನಾವಣೆಗೆ ಸ್ಪರ್ಧಿಸಬಹುದು. ಅನರ್ಹತೆ ರದ್ದಾದ ಬಳಿಕ ಶಾಸಕರು ತಮ್ಮ ರಾಜೀನಾಮೆ ವಾಪಸ್‌ ಪಡೆದರೆ ಆಗ ಉಪ ಚುನಾವಣೆ ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದರೆ, ಸ್ಪೀಕರ್‌ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದರ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ.
-ಅಶೋಕ್‌ ಹಾರನಹಳ್ಳಿ, ಮಾಜಿ ಅಡ್ವೋಕೇಟ್‌ ಜನರಲ್‌

ಶಾಸಕರ ಅನರ್ಹತೆ ಪ್ರಕರಣವನ್ನು ಮತ್ತೆ ಹಾಲಿ ಸ್ಪೀಕರ್‌ ಮರುಪರಿಶೀಲನೆಗೆ ಸೂಚಿಸಿದಾಗ ಕಾನೂನು ತಜ್ಞರ ಅಭಿಪ್ರಾಯ ಪಡೆದು ಹಿಂದಿನ ಸ್ಪೀಕರ್‌ ತೀರ್ಮಾನವಾದ ಅನರ್ಹತೆ ರದ್ದು ಮಾಡಲೂಬಹುದು. ಒಂದೊಮ್ಮೆ ಅನರ್ಹತೆ ರದ್ದುಗೊಂಡ ನಂತರ ಅವರು ತಾವು ಶಾಸಕ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆ ವಾಪಸ್‌ ಪಡೆದರೆ ಶಾಸಕರಾಗಿ ಮುಂದುವರಿಯಬಹುದು. ಆಗ ಉಪ ಚುನಾವಣೆ ರದ್ದಾಗುತ್ತದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಈಗಾಗಲೇ ಅನರ್ಹತೆಗೊಂಡವರನ್ನು ಉಚ್ಚಾಟನೆ ಮಾಡಿರುವುದರಿಂದ ಅವರು ಒಂದು ಗುಂಪಾಗಿ ಸದನದಲ್ಲಿ ಗುರುತಿಸಿಕೊಳ್ಳಬಹುದು.
-ಎ.ಎಸ್‌.ಪೊನ್ನಣ್ಣ, ಹಿರಿಯ ವಕೀಲ

* ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next