Advertisement

ಅನರ್ಹ ಶಾಸಕ ಆರ್‌.ಶಂಕರ್‌ ಈಗ ಅತಂತ್ರ

11:03 PM Nov 15, 2019 | Lakshmi GovindaRaju |

ಹಾವೇರಿ: ಅಧಿಕಾರದಾಸೆಗಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿದು ಅನರ್ಹಗೊಂಡಿರುವ ರಾಣಿಬೆನ್ನೂರು ಕ್ಷೇತ್ರದ ಆರ್‌. ಶಂಕರ್‌ ಸ್ಥಿತಿ ಈಗ ಅಕ್ಷರಶಃ ಅಧೋಗತಿಗೆ ತಲುಪಿದೆ. ಇತ್ತ ಶಾಸಕ ಸ್ಥಾನವೂ ಇಲ್ಲ. ಅತ್ತ ಮರು ಚುನಾವಣೆಗೆ ಸ್ಪರ್ಧಿಸಲು ಟಿಕೆಟೂ ಇಲ್ಲದ ತ್ರಿಶಂಕು ಸ್ಥಿತಿ ಎದುರಾಗಿದೆ.

Advertisement

ಅನರ್ಹರಾದ ಶಾಸಕರಿಗೆ ಬಿಜೆಪಿ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡಿದ್ದು ಆ ಪ್ರಕಾರ ಆರ್‌. ಶಂಕರ್‌ಗೂ ಟಿಕೆಟ್‌ ಸಿಗುತ್ತದೆ ಎಂದು ಬಲವಾಗಿ ನಂಬಲಾಗಿತ್ತು. ಆದರೆ, ಬಿಜೆಪಿ ಆಂತರಿಕ ಸಮೀಕ್ಷೆಯಲ್ಲಿ ಆರ್‌. ಶಂಕರ್‌ ಗೆಲ್ಲುವುದು ಕಷ್ಟ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಬಿಜೆಪಿಯು ಶಂಕರ್‌ಗೆ ಟಿಕೆಟ್‌ ತಪ್ಪಿಸಿ, ಅರುಣಕುಮಾರ ಪೂಜಾರ ಅವರಿಗೆ ಟಿಕೆಟ್‌ ಘೋಷಿಸಿದೆ. ಇದರಿಂದ ಅನರ್ಹ ಶಾಸಕ ಶಂಕರ್‌ ಈಗ ಅತಂತ್ರರೂ ಆಗಿದ್ದಾರೆ.

ಶಾಸಕ ಸ್ಥಾನದಿಂದ ಅನರ್ಹರಾಗಿ ನಾಲ್ಕೈದು ತಿಂಗಳು ಅತಂತ್ರರಾಗಿದ್ದ ರಾಜ್ಯದ 17 ಶಾಸಕರಲ್ಲಿ ಆರ್‌.ಶಂಕರ್‌ ಹೊರತುಪಡಿಸಿ ಉಳಿದವರೆಲ್ಲ ನೆಲೆ ಕಂಡುಕೊಳ್ಳಲು ವೇದಿಕೆ ಸಜ್ಜು ಮಾಡಿಕೊಂಡಿದ್ದಾರೆ. ಅವರೆಲ್ಲರ ಹಾದಿ ಈಗ ಸುಗಮ ವಾಗಿದೆ. ಆದರೆ, ಶಂಕರ್‌ ರಾಜಕೀಯ ಹಾದಿ ಮಾತ್ರ ಇನ್ನಷ್ಟು ದುರ್ಗಮದತ್ತ ಸಾಗಿದ್ದು , ಏನು ಮಾಡಬೇಕೆಂದೇ ತೋಚದ ಪರಿಸ್ಥಿತಿ ಎದುರಾಗಿದೆ.

ಮೊದಲು ನಿರಾಸಕ್ತಿ: ಶಂಕರ್‌ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದೆ ಇರುವುದರಿಂದ ಸುಪ್ರೀಂ ಕೋರ್ಟ್‌ ತೀರ್ಪು ತಮ್ಮ ಪರವಾಗಿಯೇ ಬರುತ್ತದೆ. ತಮ್ಮ ಶಾಸಕ ಸ್ಥಾನ ಮುಂದುವರಿಯುತ್ತದೆ. ಹೀಗಾಗಿ ತಮ್ಮ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವುದೇ ಇಲ್ಲ ಎಂದುಕೊಂಡಿದ್ದರು. ಆದರೆ, ಸುಪ್ರೀಂ ಕೋರ್ಟ್‌ ಇವರ ಶಾಸಕ ಸ್ಥಾನದ ಅನರ್ಹತೆಯನ್ನೂ ಎತ್ತಿಹಿಡಿದಿದ್ದರಿಂದ ಶಂಕರ್‌ ದಿಗ್ಭ್ರಾಂತರಾಗಿದ್ದಾರೆ.

ಒಂದೂವರೆ ವರ್ಷದ ಹಿಂದಷ್ಟೇ ಚುನಾವಣೆಯಲ್ಲಿ ಹೋರಾಟ ಮಾಡಿ ಗೆದ್ದಿದ್ದು ಮತ್ತೆ ಚುನಾವಣೆಗೆ ಹೋದರೆ ಗೆಲುವು ಸುಲಭವಿಲ್ಲ ಎಂದು ಆಲೋಚಿಸಿದ ಶಂಕರ್‌, ಚುನಾವಣೆಗೆ ಧುಮುಕಲು ಮೊದಲು ನಿರಾಸಕ್ತಿ ತೋರಿದರು. ಮತ್ತೂಮ್ಮೆ ನ್ಯಾಯಾಲಯದ ಮೆಟ್ಟಿಲೇರುವ ಉತ್ಸಾಹ ತೋರಿದ್ದರು. ಈಗ ಅವರ ಆಲೋಚನೆ ಬದಲಾಗಿದ್ದು, ಚುನಾವಣೆಗೆ ನಿಲ್ಲುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದು ಟಿಕೆಟ್‌ಗಾಗಿ ಬಿಜೆಪಿ ಬೆನ್ನು ಹತ್ತಿದ್ದಾರೆ.

Advertisement

ಈಗೇಕೆ ಆಸಕ್ತಿ?: ಅನರ್ಹ ಶಾಸಕರಿಗೆ ಸರ್ಕಾರಿ ಲಾಭದಾಯಕ ಹುದ್ದೆ ಕೊಡುವಂತಿಲ್ಲ ಎಂದು ಕೋರ್ಟ್‌ ತೀರ್ಪಿನಲ್ಲಿ ತಿಳಿಸಿದೆ. ವಿಧಾನಪರಿಷತ್‌ ಸದಸ್ಯ ಸ್ಥಾನದ ನಾಮನಿರ್ದೇಶನ ಕಾನೂನಿನ ಪ್ರಕಾರ ಲಾಭದಾಯಕ ಹೌದೋ ಅಲ್ಲವೋ ಎಂಬುದು ಗೊಂದಲದಲ್ಲಿದೆ. ಇನ್ನು ಸಚಿವ ಸ್ಥಾನವಂತೂ ಸಿಗುವುದಿಲ್ಲ. ಸಿಎಂ ಯಡಿಯೂರಪ್ಪ ಅವರು ವಿಪ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ಕೊಡುವ ಭರವಸೆಯೇನೋ ನೀಡಿದ್ದಾರೆ.

ಆದರೆ, ಈ ಭರವಸೆಗೆ ಕಾನೂನು ಅಡ್ಡಿಯಾಗಬಹುದೇ ಎಂಬ ಆತಂಕವೂ ಅವರನ್ನು ಕಾಡುತ್ತಿದೆ. ತಮ್ಮ ಶಾಸಕ ಸ್ಥಾನ ಅನರ್ಹತೆ ಪ್ರಕರಣ ನ್ಯಾಯಾಲ ಯದಲ್ಲಿ ಮತ್ತೂಮ್ಮೆ ವಿಚಾರಣೆಯಾಗುವವರೆಗೂ ಅತಂತ್ರವಾಗಿಯೇ ಇರಬೇಕಾಗುತ್ತದೆ. ಮುಂದೆ ನ್ಯಾಯಾಲಯ ಶಾಸಕ ಸ್ಥಾನ ಅರ್ಹಗೊಳಿಸಿದರಷ್ಟೇ ಅ ಧಿಕಾರ ಸಿಗುತ್ತದೆ. ಇಲ್ಲದಿದ್ದರೆ ಅ ಧಿಕಾರ ಸಿಗಲ್ಲ. ಇಷ್ಟೆಲ್ಲ ಗೊಂದಲಕ್ಕೆ ಸಿಲುಕುವುದಕ್ಕಿಂತ ಬಿಜೆಪಿಯಿಂದ ಟಿಕೆಟ್‌ ಪಡೆದು ಚುನಾವಣೆಗೆ ಸ್ಪರ್ಧಿಸುವುದೇ ಸೂಕ್ತ.

ಇದರಿಂದ ತಮ್ಮ ಕ್ಷೇತ್ರವನ್ನೂ ಉಳಿಸಿಕೊಂಡಂತಾಗುತ್ತದೆ. ಇನ್ನೊಮ್ಮೆ ಜನರ ಬಳಿ ಹೋದಂತಾಗುತ್ತದೆಂಬ ನಿರ್ಧಾರಕ್ಕೆ ಆರ್‌.ಶಂಕರ್‌ ಬಂದಿದ್ದಾರೆ ಎನ್ನಲಾಗಿದ್ದು ಈಗ ಟಿಕೆಟ್‌ಗಾಗಿ ಬಿಜೆಪಿ ಮುಖಂಡರಿದ್ದಲ್ಲಿ ಅಲೆದಾ ಡುತ್ತಿದ್ದಾರೆ. ಬಿಜೆಪಿ ಈಗಾಗಲೇ ಟಿಕೆಟ್‌ ಘೋಷಿಸಿದ್ದು, ಅಕ್ಷರಶಃ ಅತಂತ್ರರಾಗಿ ಅಲೆದಾಡುತ್ತಿರುವ ಶಂಕರ್‌ಗೆ ಕೊನೆಯ ಘಳಿಗೆಯಲ್ಲಿ ಅದೃಷ್ಟ ಕೈಹಿಡಿಯುತ್ತದೆಯೋ, ಕೈಕೊಡುತ್ತದೆಯೋ ಎಂಬುದು ಕುತೂಹಲ ಕೆರಳಿಸಿದೆ.

ಕೈ ತಪ್ಪಲಿದೆಯೇ ಕ್ಷೇತ್ರ?: ಆರ್‌.ಶಂಕರ್‌ಗೆ ಬಿಜೆಪಿ ಟಿಕೆಟ್‌ ನೀಡದೇ ಇರುವುದರಿಂದ ಕ್ಷೇತ್ರ ಶಂಕರ್‌ ಕೈ ತಪ್ಪುವುದರಲ್ಲಿ ಎರಡು ಮಾತಿಲ್ಲ. ಬಿಜೆಪಿಯ ಭರವಸೆಯಂತೆ ಮುಂದೆ ಶಂಕರ್‌ ವಿಪ ಸದಸ್ಯರಾದರೂ, ಸಚಿವರಾದರೂ ಕ್ಷೇತ್ರದ ಮತದಾರರ ಪ್ರತಿನಿಧಿ ಅವರಾಗುವುದಿಲ್ಲ. ಉಪಚುನಾವಣೆಯಲ್ಲಿ ಗೆದ್ದವರು ಆ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಹೀಗಾಗಿ ಜನರಿಂದ ಪಡೆದುಕೊಂಡಿದ್ದ ಶಾಸಕ ಸ್ಥಾನವನ್ನು ಅವಧಿ ಪೂರ್ಣ ಅನುಭವಿಸಲಾಗದ ದುಸ್ಥಿತಿ ಅವರ ದ್ದಾಗುತ್ತದೆ. ಜನರು ಕೊಟ್ಟ ಅಧಿಕಾರ ಉಳಿಸಿಕೊಳ್ಳದೇ ಹೆಚ್ಚಿನ ಅಧಿ ಕಾರದ ಹಿಂದೆ ಹೋದ ಶಾಸಕರ ಗತಿ ಏನಾಗುತ್ತದೆ ಎಂಬುದಕ್ಕೆ ಆರ್‌.ಶಂಕರ್‌ ಇತರರಿಗೆ ಎಚ್ಚರಿಕೆಯ ಪಾಠವಾಗುವುದಂತೂ ಸತ್ಯ.

* ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next