ಚಿಂತಾಮಣಿ: ಪ್ರತಿ 15 ದಿನಗಳಿಗೊಮ್ಮೆ ಹಣ ಪಾವತಿಸುವುದಾಗಿ ಖಾಸಗಿ ನೀರು ಸರಬರಾಜುದಾರರಿಗೆ ಒಡಂಬಡಿಕೆ ಮಾಡಿಕೊಟ್ಟು ಅದರಂತೆ ಹಣ ಪಾವತಿಸದೆ ನಿರ್ಲಕ್ಷಿಸುತ್ತಿರುವುದರಿಂದ ನಿತ್ಯ ನಗರಕ್ಕೆ ನೀರು ಸರಬರಾಜು ಮಾಡುವವರು ಸಂಕಷ್ಟಕ್ಕೀಡಾಗಿದ್ದು, ಬಿಲ್‌ನ ಹಣ ಪಡೆಯಲುನಗರಸಭೆ ಕಚೇರಿಯ ಸುತ್ತ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಶಾಸಕರಾಗಲಿ, ಅಧಿಕಾರಿಗಳಾಗಲಿ ಗಮನಹರಿಸುತ್ತಿಲ್ಲವೆಂಬ ಆರೋಪ ಕೇಳಿಬರುತ್ತಿದೆ.
ದಿನ ನಿತ್ಯ ಸುಮಾರು 200ಕ್ಕೂ ಹೆಚ್ಚಿನ ಟ್ಯಾಂಕರುಗಳಷ್ಟು ನೀರು ಸರಬರಾಜು ಮಾಡುತ್ತಿರುವ ಖಾಸಗಿ ನೀರು ಸರಬರಾಜುದಾರರಿಗೆ ಕೇವಲ ಪ್ರತಿ ಟ್ಯಾಂಕರ್ ಗೆ 350 ರೂ. ಮಾತ್ರ ನೀಡುತ್ತಿದ್ದು, ಅದನ್ನು ಸಹ ನಿಗದಿತ ಅವದಿಗೆ ನೀಡುತ್ತಿಲ್ಲ. ನೀರಿಲ್ಲದೆಸೊರಗುತ್ತಿರುವ ನಗರದ ಜನತೆಗೆ ಅತಿ ಕಡಿಮೆ ದರದಲ್ಲಿ ನೀರು ಪೂರೈಕೆ ಮಾಡಿ ಮಾನವೀಯತೆ ತೋರುತ್ತಿರುವ ಸರಬರಾಜುದಾರರಿಗೆ ಸಕಾಲಕ್ಕೆ ಹಣ ಪಾವತಿಸದ ಕಾರಣದಿಂದ ಈಗಾಗಲೇ ನೀರನ್ನು ಸರಬರಾಜು ಮಾಡುತ್ತಿದ್ದವರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿರುವುದರಿಂದ ನೀರಿಗೆ ಹಾಹಾಕಾರ ಶುರುವಾಗಿದೆ.
3-4 ತಿಂಗಳಿಂದ ಬಾಕಿ: ಸಕಾಲಕ್ಕೆ ಹಣ ಪಾವತಿ ಮಾಡದಿರುವುದರಿಂದ ಲಕ್ಷಾಂತರ ರೂ. ವಿದ್ಯುತ್ ಬಿಲ್‌ನ್ನು ಪಾವತಿಸಲಾಗದ ದುಃಸ್ಥಿತಿಒಂದೆಡೆಯಾದರೆ, ಮತ್ತೂಂದೆಡೆ ಕುಟುಂಬದ ಪೋಷಣೆಯೂ ಸಹ ಸೇರಿರುವುದರಿಂದ ಹಣ ಕೈಗೆ ಬಾರದೆ ಆರ್ಥಿಕವಾಗಿ ಸಮಸ್ಯೆಗಳಿಗೆ ತುತ್ತಾಗುತ್ತಿದ್ದರೂ ನಗರಸಭೆಯ ಅಧಿಕಾರಿಗಳು ಬಿಲ್ ಪಾವತಿಗೆ ಮುಂದಾಗಿಲ್ಲ. ಇಂದು ನಾಳೆ,ನಾಡಿದ್ದು ಎನ್ನುತ್ತಾ ಕಾಲಹರಣ ಮಾಡುತ್ತಾ 50 ಲಕ್ಷಕ್ಕೂ ಹೆಚ್ಚಿನ ಹಣ ಸರಬರಾಜುದಾರರಿಗೆ ನೀಡಬೇಕಿದ್ದು, ಕಳೆದ 3-4 ತಿಂಗಳುಗಳಿಂದಬಾಕಿ ಉಳಿಸಿಕೊಂಡಿರುವ ನಗರಸಭೆಯು ಇನ್ನಾದರೂ ಹಣ ಬಿಡುಗಡೆಗೆ ಮುಂದಾಗಬೇಕಿದೆ.
ಕಡಿಮೆ ಬೆಲೆಗೆ ಮಾರಾಟ: 5 ಸಾವಿರ ಲೀಟರ್ ಒಂದು ಟ್ಯಾಂಕರ್‌ಗೆ ಖಾಸಗಿಯಾಗಿ 700 ರಿಂದ 900 ರೂ.ವರೆಗೆ ನಗರದಲ್ಲಿ ಮಾರಾಟಮಾಡುತ್ತಿದ್ದು, ಆ ಬೆಲೆಯಲ್ಲಿ ಅರ್ಧದಷ್ಟು ಬೆಲೆಗೆ ನಾವು ನೀರನ್ನು ಪೂರೈಕೆ ಮಾಡುತ್ತಿದ್ದರೂ ಸಕಾಲದಲ್ಲಿ ಹಣ ಪಾವತಿಸದಿದ್ದರೆ ಹೇಗೆ? ಬಂಡವಾಳವನ್ನು ಹಾಕಿ ಮಾನವೀಯತೆ ದೃಷ್ಟಿಯಿಂದ ನೀರು ಸರಬರಾಜು ಮಾಡುತ್ತಿದ್ದು, ಅದನ್ನು ನಿಗದಿತ ವೇಳೆಗೆ ಹಣನೀಡಿ ಸ್ಪಂದಿಸದಿದ್ದರೆ ಹೇಗೆಂಬ ಪ್ರಶ್ನೆ ಸರಬರಾಜುದಾರರಿಂದ ವ್ಯಕ್ತವಾಗುತ್ತಿದೆ. ಕೂಡಲೇ ನಗರಸಭೆ ಪೌರಾಯುಕ್ತರು ಹಣ ಪಾವತಿಸಲು ಗಮನ ಹರಿಸಬೇಕೆಂದು ಸರಬರಾಜುದಾರರು ಆಗ್ರಹಿಸುತ್ತಿದ್ದಾರೆ.