ದೇವನಹಳ್ಳಿ: ಕಾಂಗ್ರೆಸ್ ಸರ್ಕಾರದ ಮಹಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಪಡಿತರ ಅಕ್ಕಿಗೆ ಬದಲಾಗಿ ಹಣ ನೀಡುತ್ತಿದೆ. ಅರ್ಹರಿಗೆ ನೇರವಾಗಿ ನಗದು ಪಾವತಿ (ಡಿಡಿಟಿ) ಮೂಲಕ ಹಣ ಪಾವತಿಯಾಗುತ್ತಿದೆ. ಆದರೆ, ಕೆಲ ತಾಂತ್ರಿಕ ಸಮಸ್ಯೆಗಳ ಕಾರಣ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 10 ಸಾವಿರಕ್ಕೂ ಅಧಿಕ ಪಡಿತರದಾರರಿಗೆ ಹಣ ಸಂದಾಯವಾಗಿಲ್ಲ.
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸದಿರುವುದೂ ಸೇರಿದಂತೆ ಹಲವು ತಾಂತ್ರಿಕ ಕಾರಣಗಳಿಂದ ಅನ್ನಭಾಗ್ಯದ ಹಣ ತಲುಪಿಲ್ಲ. ಕೆಲವರು ಬ್ಯಾಂಕ್ ಖಾತೆ ತೆರೆಯಲು, ಇ ಕೆವೈಸಿ ಲಿಂಕ್ ಮಾಡಿಸಲು ನಿತ್ಯ ಬ್ಯಾಂಕ್ ಮತ್ತು ಇಂಟರ್‌ನೆರ್ಟ್ ಸೆಂಟರ್‌ಗಳಿಗೆ ಅಲೆದಾಡುತ್ತಿದ್ದಾರೆ. ಬ್ಯಾಂಕ್ ಮಾತ್ರವಲ್ಲದೇ, ಅಂಚೆ ಕಚೇರಿಗಳಲ್ಲಿಯೂ ಖಾತೆ ಪ್ರಾರಂಭಿಸಬಹುದು. ಆ ಖಾತೆಗೆ ಆಧಾರ್ ಲಿಂಕ್ ಮಾಡಿದರೆ ಹಣ ಡಿಬಿಟಿ ಆಗುತ್ತದೆ. ಹಲವರು ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
ಬ್ಯಾಂಕ್ ಖಾತೆಗೆ ಆಧಾರ್‌ಸಂಖ್ಯೆ ಜೋಡಣೆ ಮಾಡಿಸಬೇಕು. ಇ ಕೆವೈಸಿ ಆಗದೆ ಫಲಾನುಭವಿಗಳಿಗೆ ಡಿಬಿಟಿ ಸಾಧ್ಯವಾಗುತ್ತಿಲ್ಲ. ಕುಟುಂಬದ ಮುಖ್ಯಸ್ಥರು ನಿಧನರಾಗಿದ್ದರೆ, ಮತ್ತೂಂದು ಖಾತೆ ತೆರೆದಿದ್ದರೆ ಅಂಥವರಿಗೆ ಹಣ ತಲುಪದೇ ವಾಪಸ್ ಬಂದಿದೆ. ಬ್ಯಾಂಕ್ ಗಳಲ್ಲಿ ಜನದಟ್ಟನೆ ಕಾರಣದಿಂದ ಖಾತೆ ಮಾಡಿಸಲು ಮತ್ತು ಇ ಕೆವೈಸಿ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಕೆಲ ಫಲಾನುಭವಿಗಳ ಅಳಲು. ಖಾತೆ ಹೊಂದಿದ್ದರೂ ಆಧಾರ್ ಜೋಡಣೆಯಾಗಿಲ್ಲ. ಇ ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಡಿ ಬಿಟಿ ಮೂಲಕ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆ ಸಾಧ್ಯವಾಗಿಲ್ಲ. ಅನ್ನಭಾಗ್ಯ ಯೋಜನೆಯ ಹಣವನ್ನು ಡೆಬಿಟ್ ಮಾಡಲು ಆರಂಭಿಸಿದಾಗ ಹಲವು ಕುಟುಂಬಗಳಿಗೆ ಇಕೆವೈಸಿ ಮಾಡಿಸಿರಲಿಲ್ಲ. ಇದರಿಂದ ಇವರ ಖಾತೆಗಳಿಗೆ ಹಣ ಜಮೆಯಾಗಿರಲಿಲ್ಲ. ಈ ಬಗ್ಗೆ ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮನವರಿಕೆ ಮಾಡಿಕೊಟ್ಟ ನಂತರ ಇ ಕೆ ವೈಸಿ ಪ್ರಕ್ರಿಯೆಗಳು ಹೆಚ್ಚಾದವು.
ಖಾತೆ, ಇ ಕೆವೈಸಿಗೆ ಜನದಟ್ಟಣೆ ಅಡ್ಡಿ : ಬ್ಯಾಂಕ್‌ಗಳಲ್ಲಿ ಜನದಟ್ಟಣೆ ಕಾರಣದಿಂದ ಖಾತೆ ಮಾಡಿಸಲು ಮತ್ತು ಇ ಕೆವೈ ಸಿ ಮಾಡಿಸಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್ ಖಾತೆಗೆ ಆಧಾರ್ ಕಡ್ಡಾಯ. ಇ ಕೆವೈಸಿ ಆಗದ ಫಲಾನುಭವಿಗಳಿಗೆ ಡಿಬಿಟಿ ಸಾಧ್ಯ ವಾಗುತ್ತಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 3 ತಿಂಗಳ ಅವಧಿಯಲ್ಲಿ 2.30 ಲಕ್ಷ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಹಣ ಸಂದಾಯವಾಗಿದೆ. ಅದರಲ್ಲಿ 10,000 ಜನರಿಗೆ ಡಿಬಿಟಿ ಮೂಲಕ ಹಣ ಸಂದಾಯವಾಗಿಲ್ಲ. ಜುಲೈ 2023ರ ಮಾಹೆಯಲ್ಲಿ 9,84,50,910 ರೂ.ಗಳನ್ನು ವರ್ಗಾವಣೆ ಮಾಡಲಾಗಿರುತ್ತದೆ. ಆಗಸ್ಟ್ 2023ರ ಮಾಹೆಯಲ್ಲಿ 10,71,15,130 ರೂ.ಗಳನ್ನು ಅರ್ಹರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಸೆಪ್ಟೆಂಬರ್ 2023ರ 11,05,62,930 ರೂ. ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 10 ಸಾವಿರ ಕುಟುಂಬಗಳಿಗೆ ಹಣ ಸಂದಾಯವಾಗಿಲ್ಲ. ಇ ಕೆವೈಸಿ ಮಾಡಿಸದಿರುವುದು, ಕೆಲವು ತಾಂತ್ರಿಕ ಸಮಸ್ಯೆಗಳಿಂದ ಹಣ ಸಂದಾಯವಾಗುತ್ತಿಲ್ಲ, ಹಂತ ಹಂತವಾಗಿ ಪಡಿತರ ಚೀಟಿದಾರರಿಗೆ ಹಣ ಸಂದಾಯ ಮಾಡಲಾಗುತ್ತದೆ. ಇ ಕೆವೈಸಿ ಮಾಡಿಸದೇ ಇರುವವರು ಕೂಡಲೇ ಮಾಡಿಸಬೇಕು.
– ಗಿರಿಜಾದೇವಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ
ಅನ್ನಭಾಗ್ಯ ಪಡಿತರ ಅಕ್ಕಿಯ ಹಣ ನಮ್ಮ ಖಾತೆಗೆ ಇನ್ನೂ ಸಂದಾಯವಾಗಿಲ್ಲ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಸೈಬರ್ ಸೆಂಟರ್‌ಗಳಿಗೆ ಅಲೆದಾಡಿ ಸುಸ್ತಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಇ ಕೆವೈಸಿ ಮಾಡಿಸಿದ್ದರೂ ಹಣ ಖಾತೆಗೆ ಜಮಾ ಆಗಿಲ್ಲ.
– ಸುಶೀಲಮ್ಮ, ಪಡಿತರ ಚೀಟಿ ಫಲಾನುಭವಿ
– ಎಸ್.ಮಹೇಶ್