Advertisement
ಕಾರ್ಕಳ: ಕಾರ್ಕಳ ಹೆಸರಿಗೆ ತಕ್ಕಂತೆ ಕರಿಯಕಲ್ಲಿನ ನಾಡು. ಕಲ್ಲು ಹೇರಳವಾಗಿರುವ ಕಾರಣ ಕಲ್ಲು ಕೋರೆ ಸಂಖ್ಯೆಯೂ ಅಧಿಕವಾಗಿದೆ. ಸೈಜ್ ಕಲ್ಲು, ಬೇಲಿ ಕಂಬ ಕಲ್ಲು, ಚಪ್ಪಡಿ ಕಲ್ಲು ತೆಗೆಯುವ ಅನೇಕ ಕೋರೆಗಳು ಕಾರ್ಕಳದಲ್ಲಿ ಕಂಡುಬರುತ್ತಿವೆಯಾದರೂ ಅನುಮತಿ ಹೊಂದಿರುವ ಕೋರೆಗಳ ಸಂಖ್ಯೆ ವಿರಳ. ಪರವಾನಿಗೆ ಪಡೆದಿರುವ ಕೋರೆಗಳಿಗಿಂತ ಅನಧಿಕೃತ ಕೋರೆಗಳ ಸಂಖ್ಯೆಯೇ ಅಧಿಕ. ಕಾನೂನು ಬಾಹಿರವಾಗಿ ಕೋರೆ ನಡೆಸುವುದು ಅಕ್ರಮವಾದರೆ, ಕಲ್ಲು ಒಡೆಯಲು ಸ್ಫೋಟಕ ಬಳಸುವುದು ಅಪಾಯಕಾರಿ.
ಕಾರ್ಕಳ, ಹೆಬ್ರಿ ತಾಲೂಕಿನ 56 ಗ್ರಾಮಗಳಲ್ಲಿ ಬಹುತೇಕ ಎಲ್ಲ ಗ್ರಾಮಗಳಲ್ಲೂ ಕಲ್ಲಿನ ಕೋರೆಯಿದೆ. ಗಣಿ ಇಲಾಖೆ ಮಾಹಿತಿ ಪ್ರಕಾರ ಕಾರ್ಕಳದ 45, ಹೆಬ್ರಿಯ 6 ಕ್ರಷರ್, ಕೋರೆಗಳನ್ನು (ಅದೂ ನವೀಕರಣ ಹಂತದಲ್ಲಿದೆ ಎಂಬ ಗುಮಾನಿ) ಹೊರತುಪಡಿಸಿದಲ್ಲಿ ಉಳಿದವುಗಳು ಅನಧಿಕೃತವೇ ಎಂದು ಹೇಳಲಾಗುತ್ತಿದೆ. ಕಾರ್ಕಳ ತಾಲೂಕಿನ ಕಲ್ಯಾ ಮತ್ತು ಕುಕ್ಕುಂದೂರು ಗ್ರಾಮ ಪಂಚಾಯತ್‌ನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕೋರೆಗಳಿದ್ದರೆ, ಶಿರ್ವ, ನಿಟ್ಟೆ, ಸಾಂತೂರು, ನಂದಳಿಕೆ, ಕಣಜಾರು, ಪಳ್ಳಿ, ಸೂಡಾ, ರೆಂಜಾಳ, ಬೆಳ್ಮಣ್, ಎರ್ಲಪಾಡಿ, ಕಡ್ತಲ, ಇನ್ನಾ, ನೀರೆ, ಮಿಯಾರು ಮೊದಲಾದ ಗ್ರಾಮಗಳ ಪಟ್ಟಾ ಭೂಮಿ ಹಾಗೂ ಸರಕಾರಿ ಭೂಮಿಗಳಲ್ಲಿ ಕ್ವಾರಿಗಳು ಕಾರ್ಯಾಚರಿಸುತ್ತಿವೆ. ಕಾರ್ಕಳ, ಹೆಬ್ರಿ ಉಭಯ ತಾಲೂಕಿನಲ್ಲಿ ಒಟ್ಟು 200ಕ್ಕಿಂತಲೂ ಕೋರೆ ಹಾಗೂ 25ಕ್ಕೂ ಅಧಿಕ ಕ್ರಷರ್‌ಗಳಿವೆ. ಸ್ಫೋಟಕ ಎಲ್ಲಿಂದ ?
ಕಲ್ಲು ಒಡೆಯಲು ಅಮೋನಿಯಂ ನೈಟ್ರೇಟ್ ಮತ್ತು ಡಿಟೋನೇಟರ್, ಜಿಲೆಟಿನ್ ಬಳಕೆ ಮಾಡಲಾಗುತ್ತಿದೆ. ಸ್ಫೋಟಕ ದಾಸ್ತಾನು ಹೊಂದಲು ಮತ್ತು ಸ್ಫೋಟಿಸಲು ಅನುಮತಿ ಪಡೆದಿರುವವರು ಇಡೀ ಜಿಲ್ಲೆಯಲ್ಲಿ ಬೆರಳೆಣಿಕೆ ಮಂದಿ (ಮಣಿಪಾಲ ಹಾಗೂ ಶಿರ್ವ ಮೂಲದ ಪರಿಣತರು). ಇವರು ಸ್ಫೋಟಿಸುವ ವೇಳೆ ಸಾಕಷ್ಟು ಮುಂಜಾಗ್ರತ ಕ್ರಮ ವಹಿಸುತ್ತಾರೆ ಮತ್ತು ಅದಕ್ಕೆ ಬೇಕಾದ ಅಗತ್ಯ ಪರಿಕರಗಳು ಅವರಲ್ಲಿರುವುದು. ಕಾರ್ಕಳ, ಹೆಬ್ರಿ ಭಾಗದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕ್ರಷರ್‌ಗಳು ನಡೆಯುತ್ತಿರುವಾಗ ಸ್ಫೋಟಕ ಎಲ್ಲಿಂದ ತಂದು ಬಳಸುತ್ತಾರೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಗಣಿ ಇಲಾಖಾಧಿಕಾರಿಗಳ ಗಮನಕ್ಕೆ ಬಾರದೇ ಸ್ಫೋಟಿಸಲಾಗುತ್ತಿದೆಯೇ ಅಥವಾ ಅವರ ಸಹಕಾರದೊಂದಿಗೆ ನಡೆಯುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕರದ್ದು. ನಿಯಮದನ್ವಯ ಶಾಲೆ, ವಸತಿ ಪ್ರದೇಶಗಳಲ್ಲಿ ಕೋರೆ ನಡೆಸಲು ಅನುಮತಿ ಇಲ್ಲ. ನಿಗದಿತ ಸಮಯಕ್ಕೆ ಬಂಡೆಗಳನ್ನು ಪರವಾನಿಗೆ ಪಡೆದ ಪರಿಣತ ಸ್ಫೋಟಿಸಬೇಕೆಂಬ ನಿಯಮವಿದೆ.
Related Articles
ತಾಲೂಕಿನ ಬಹುತೇಕ ಎಲ್ಲ ಗ್ರಾಮಗಳಲ್ಲೂ ಅನಧಿಕೃತ ಕ್ರಷರ್, ಕ್ವಾರಿಗಳು ಕಾರ್ಯಾಚರಿಸುತ್ತಿವೆ. ರಾಜಕೀಯ ಕೃಪಾಕಟಾಕ್ಷದಿಂದಾಗಿ ಇಂತಹ ಕ್ವಾರಿಗಳು ಎಗ್ಗಿಲ್ಲದೇ ನಡೆಯುತ್ತಿವೆ, ಗಣಿ, ಪೊಲೀಸ್, ಅರಣ್ಯ ಇಲಾಖೆಗೆ ಕ್ರಷರ್, ಕೋರೆ ಮಾಲಕರಿಂದ ಮಾಮೂಲಿ ಸಂದಾಯವಾಗುತ್ತಿದೆ. ಹೀಗಾಗಿ ನಿರಂತರ, ನಿರಾತಂಕವಾಗಿ ಸ್ಫೋಟಕ ಬಳಸಲಾಗುತ್ತಿದೆ ಎನ್ನುವ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ಅಲ್ಲದೇ ಇಲಾಖಾಧಿಕಾರಿಗಳ ಮನೆ ಮತ್ತು ಅವರು ಹೇಳಿದಂತಹ ಸ್ಥಳಗಳಿಗೆ ಉಚಿತವಾಗಿ ಕಲ್ಲು ಪೂರೈಕೆಯಾಗುವ ನಿದರ್ಶನವೂ ಇದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.
Advertisement
ಎಎಸ್‌ಪಿ ದಾಳಿಅಣ್ಣಾಮಲೈ ಕಾರ್ಯವನ್ನು ಮುಂದುವರಿಸಿರುವ ಎಎಸ್‌ಪಿ ಪಿ. ಕೃಷ್ಣಕಾಂತ್ ಡೀಮ್ಡ್ ಫಾರೆಸ್ಟ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಅನೇಕ ಕ್ರಷರ್‌ಗಳ ಮೇಲೆ ದಾಳಿ ನಡೆಸಿ ಕ್ರಷರ್ ಮಾಲಕರಿಗೆ ಬಿಸಿ ಮುಟ್ಟಿಸಿದ್ದರು. ಕ್ವಾರಿಗಳು ಅಪಾಯಕಾರಿ
ಕಾರ್ಕಳದಲ್ಲಿ ಕ್ವಾರಿ ಸಂಖ್ಯೆಯೂ ಅತ್ಯಧಿಕ. ಕ್ವಾರಿ ಗುಂಡಿಗಳನ್ನು ಮಣ್ಣಿನಿಂದ ಮುಚ್ಚದೇ ಹಾಗೆ ಬಿಟ್ಟಲ್ಲಿ ಮಳೆಗಾಲದಲ್ಲಿ ನೀರು ತುಂಬಿ ಅಪಾಯಕಾರಿಯಾಗಿ ಪರಿಣಮಿಸಬಹುದು. ಮಕ್ಕಳು, ಜಾನುವಾರುಗಳು ಅಂತಹ ಗುಂಡಿಗಳಿಗೆ ಬೀಳುವ ಪ್ರಮೇಯ ಹೆಚ್ಚು. ಕಾರ್ಕಳದಿಂದ ಅಕ್ರಮವಾಗಿ ಎಂ. ಸ್ಯಾಂಡ್ ಅವ್ಯಾಹತವಾಗಿ ಹೊರಜಿಲ್ಲೆಗಳಿಗೆ ಲಾರಿ ಮೂಲಕ ಸಾಗಾಟವಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಇದರ ವಿರುದ್ಧವೂ ಕ್ರಮಕೈಗೊಳ್ಳಬೇಕೆಂಬ ಆಗ್ರಹ ಕೇಳಿಬರುತ್ತಿದೆ. ಹಿಂದೆ ಅಣ್ಣಾಮಲೈಯಿಂದ ದಾಳಿ
2014ರಲ್ಲಿ ಅಜೆಕಾರು ಸೇರಿದಂತೆ ಕಾರ್ಕಳದ ಹಲವೆಡೆ ಕ್ವಾರಿಗಳಿಗೆ ಬಳಸುವ ಉದ್ದೇಶದಿಂದ ಯಾವುದೇ ಪರಿವಾನಿಗೆ ಇಲ್ಲದೇ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಭಾರಿ ಪ್ರಮಾಣದ ಸ್ಫೋಟಕವನ್ನು ಅಂದಿನ ಎಎಸ್‌ಪಿ ಅಣ್ಣಾಮಲೈ ಪತ್ತೆ ಹಚ್ಚಿದ್ದರು. 1 ಕೋಟಿ. ರೂ. ಮೌಲ್ಯದ ಅಮೋನಿಯಂ ನೈಟ್ರೇಟ್ ಮತ್ತು ಎಲೆಕ್ಟ್ರಿಕ್ ಡಿಟೋನೇಟರ್, ಜಿಲೆಟಿನ್ ಪತ್ತೆ ಹಚ್ಚಿ ಸ್ಫೋಟಕ ದಾಸ್ತಾನಿರಿಸಿದವರ ವಿರುದ್ಧ ಕ್ರಮ ಕೈಗೊಂಡಿದ್ದರು. ಆತಂಕದಲ್ಲಿ ಸ್ಥಳೀಯರು
ವ್ಯಾಪಕವಾಗಿ ಸ್ಫೋಟಕ ಬಳಕೆ ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ ಕೋರೆ ಸಮೀಪದಲ್ಲಿನ ಮನೆಯವರು ಆತಂಕದಲ್ಲೇ ದಿನದೂಡಬೇಕಾದ ಪರಿಸ್ಥಿತಿ ಇದೆ. ಸ್ಫೋಟಕ ಬಳಸಿ ಕಲ್ಲುಬಂಡೆಗಳನ್ನು ಒಡೆಯುವ ಕಾರಣ ಮನೆಗಳಿಗೆ ತೊಂದರೆಯಾಗುವುದು ಮಾತ್ರವಲ್ಲದೇ ಅವಘಡ ಸಂಭವಿಸುವ ಸಾಧ್ಯತೆಯೂ ಇದೆ. 2019ರ ಮೇ ತಿಂಗಳಲ್ಲಿ ಹೆಬ್ರಿ ಭಾಗದ ಕ್ವಾರಿಯೊಂದರಲ್ಲಿ ಸ್ಫೋಟ ಸಂಭವಿಸಿ ಓರ್ವ ಕಾರ್ಮಿಕ ಮೃತಪಟ್ಟಿದ್ದ ನಿದರ್ಶನವೂ ಕಣ್ಣಮುಂದಿದೆ. ಮುಂದೆ ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಪರಿಶೀಲನೆ
ಅನಧಿಕೃತ ಕ್ರಷರ್, ಕೋರೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಈಗಾಗಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೂಚಿಸಿದ್ದೇನೆ. ಅಧಿಕೃತ ಮಾಡಲು ಸಾಧ್ಯವಿರುವಂತಹ ಕ್ರಷರ್‌ಗಳನ್ನು ಅಧಿಕೃತಗೊಳಿಸುವಂತೆ ಮತ್ತು ಅಕ್ರಮ ಸ್ಫೋಟಕ ಬಳಕೆ ಕುರಿತಂತೆ ಪರಿಶೀಲನೆ ಮಾಡಲಾಗುವುದು.
-ಜಿ.ಜಗದೀಶ್,
ಜಿಲ್ಲಾಧಿಕಾರಿ ನಿಯಮಾವಳಿ
ಗಣಿ ಮತ್ತು ಭೂ ವಿಜ್ಞಾನ ನಿಯಮಾವಳಿಯಂತೆ ಕೋರೆಗಳು ಕಾರ್ಯನಿರ್ವಹಿಸಬೇಕು. ತಪ್ಪಿದಲ್ಲಿ ಅಂತಹ ಗಣಿ ಗುತ್ತಿಗೆದಾರರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಲಾಗುವುದು.
-ಪುರಂದರ ಹೆಗ್ಡೆ,
ತಹಶೀಲ್ದಾರರು, ಕಾರ್ಕಳ ಪ್ರಕರಣ ದಾಖಲು
ಕಳೆದ ಒಂದು ವರ್ಷದಲ್ಲಿ ಅನಧಿಕೃತ ಕೋರೆಗಳ ಮೇಲೆ 25 ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಕ್ರಷರ್, ಕೋರೆಗಳು ಕಾರ್ಯನಿರ್ವಹಿಸುತ್ತಿದ್ದಲ್ಲಿ ಸಾರ್ವಜನಿಕರು ತಮ್ಮ ಗಮನಕ್ಕೆ ತರುವಂತೆ ವಿನಂತಿ ಮಾಡುತ್ತಿದ್ದೇನೆ. ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಗೌತಮ್ ಶಾಸ್ತ್ರೀ, ಭೂ ವಿಜ್ಞಾನಿ
ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಉಡುಪಿ -ರಾಮಚಂದ್ರ ಬರೆಪ್ಪಾಡಿ