Advertisement

ರಾತ್ರೋರಾತ್ರಿ ತಲೆ ಎತ್ತುವ ಮಳಿಗೆಗಳು: ಆಕ್ರೋಶ

03:28 PM Apr 10, 2023 | Team Udayavani |

ಮದ್ದೂರು: ಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಅಂಗಡಿಗಳ ಕಾರುಬಾರು ಮಿತಿಮೀರಿದ್ದು ರಾತ್ರೋರಾತ್ರಿ ತಲೆ ಎತ್ತುತ್ತಿರುವ ಅಂಗಡಿಗಳಿಂದ ಪಾದಚಾರಿ ಹಾಗೂ ವಾಹನ ಸಂಚಾರ ದಟ್ಟಣೆಗೂ ತೊಡಕ್ಕುಂಟಾಗುತ್ತಿದೆ. ಆದರೆ, ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ.

Advertisement

ಪಟ್ಟಣದ ಪ್ರವಾಸಿ ಮಂದಿರದಿಂದ ಕೊಲ್ಲಿ ವೃತ್ತದವ ರೆಗೂ ಅನಧಿಕೃತ ಅಂಗಡಿ ತಲೆ ಎತ್ತಿದ್ದು ಇದುವರೆಗೂ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯಧೋರಣೆ ಅನುಸರಿಸುತ್ತಿರುವುದು ಕಂಡು ಬಂದಿದೆ.

ಫ‌ುಟ್ಪಾತ್‌ನಲ್ಲಿ ಯಾರೂ ಚಕಾರವೆತ್ತುತ್ತಿಲ್ಲ: ಹೂ, ಟೀ, ಬಟ್ಟೆ, ತರಕಾರಿ, ನಂದಿನಿ ಪಾರ್ಲರ್‌, ಚಪ್ಪಲಿ, ಗೋಬಿ, ಪಾನಿಪೂರಿ, ಕಬ್ಬಿನ ಜ್ಯೂಸ್‌, ಅಂಗಡಿಗಳು ಪೇಟೀಬೀದಿ ಮಾರ್ಗದು ದ್ದಕ್ಕೂ ತಲೆಎತ್ತಿವೆ. ರಾಜಕೀಯ ಪ್ರಭಾವ ಬಳಸಿ ಕೆಲ ವ್ಯಕ್ತಿಗಳು ಕ್ರೇನ್‌ ಯಂತ್ರದ ಮೂಲಕ ತಾತ್ಕಾಲಿಕ ಅಂಗಡಿ ಪೆಟ್ಟಿಗೆಗಳನ್ನು ರಸ್ತೆ ಬದಿಯ ಫ‌ುಟ್ಪಾತ್‌ನಲ್ಲಿ ನಿರ್ಮಿಸಿದ್ದಾರೆ. ಆದರೆ, ಇದುವರೆಗೂ ಯಾರೊ ಬ್ಬರೂ ಚಕಾರವೆತ್ತದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಬಾಡಿಗೆ: ಸಂಜಯ ಚಿತ್ರಮಂದಿರ ವೃತ್ತ, ರಾಮಮಂದಿರ ಉದ್ಯಾನವನ, ಮಹಿಳಾ ಸರ್ಕಾರಿ ಕಾಲೇಜು ಹಾಗೂ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ಕೆಲ ವ್ಯಕ್ತಿಗಳು ಅನಧಿಕೃತವಾಗಿ ಅಂಗಡಿ ನಿರ್ಮಾಣ ಮಾಡುವ ಜತೆಗೆ ದಿನನಿತ್ಯ ವ್ಯಾಪಾರ ವಹಿವಾಟು ನಡೆಸುವವರಿಗೆ ಅಂಗಡಿ ಮಳಿಗೆಗಳನ್ನು ಅಧಿಕ ಬಾಡಿಗೆ ನೀಡುವ ಮೂಲಕ ಪ್ರತಿ ತಿಂಗಳು ಬಾಡಿಗೆ ಬಾಚುತ್ತಿರುವುದು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಎಲ್ಲೆಂದರಲ್ಲಿ ಅಂಗಡಿ ತಲೆ ಎತ್ತುತ್ತಿರುವುದರಿಂದ ಪೇಟೇಬೀದಿ ಮಾರ್ಗದುದ್ದಕ್ಕೂ ಸಂಚಾರ ದಟ್ಟಣೆ ಮಿತಿ ಮೀರಿದೆ.

ಫ‌ುಟ್ಪಾತ್‌ಗಳು ಅನಧಿಕೃತ ಅಂಗಡಿಗಳ ಕೈವಶವಾಗಿರುವ ಹಿನ್ನೆಲೆ ಪಾದಚಾರಿಗಳು ರಸ್ತೆಮಧ್ಯೆ ಸಂಚರಿಸಬೇಕಾದ ಅನಿವಾರ್ಯತೆ ಬಂದೊದಗಿದೆ.

Advertisement

ನಿರ್ಲಕ್ಷ್ಯ: ಫ‌ುಟ್ಪಾತ್‌ನಲ್ಲಿ ಸಂಚರಿಸುತ್ತಿದ್ದ ವಯೋ ವೃದ್ಧರು, ಮಹಿಳೆಯರು, ಶಾಲಾ ವಿದ್ಯಾರ್ಥಿಗಳು ಕಿರಿದಾದ ರಸ್ತೆಯಲ್ಲೇ ಸಂಚರಿಸುವಂತಾಗಿದೆ.

ವ್ಯಾಪಾರ ವಹಿವಾಟು ನಡೆಸುವ ಪ್ರಮುಖ ಮಾರ್ಗವಾಗಿರುವ ಪೇಟೇಬೀದಿಯಲ್ಲಿ ಹಲವಾರು ಅದ್ವಾನ ಕಾಣಸಿಗುತ್ತಿದ್ದು ಸ್ಥಳೀಯ ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಣಕ್ಕೂ ಕ್ರಮವಹಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿ 300ಕ್ಕೂ ಅಧಿಕ ಬೀದಿಬದಿ ವ್ಯಾಪಾರಸ್ಥರಿದ್ದು ಈಗಾಗಲೇ ಇಲಾಖೆ ವತಿಯಿಂದ ಗುರುತಿನ ಚೀಟಿ, ಪ್ರಮಾಣಪತ್ರ ವಿತರಿಸಿ ಸರ್ಕಾರದ ಹಲವು ಯೋಜನೆಗಳನ್ನು ಒದಗಿಸಿದೆ. ಇವರನ್ನು ಹೊರತುಪಡಿಸಿ ಹಲವಾರು ಖಾಸಗಿ ವ್ಯಕ್ತಿಗಳು ವ್ಯಾಪಾರ ಕೇಂದ್ರವಾಗಿರುವ ಪೇಟೇಬೀದಿ ಮಾರ್ಗದುದ್ದಕ್ಕೂ ತಾತ್ಕಾಲಿಕ ಅಂಗಡಿ ತೆರೆದು ವ್ಯಾಪಾರ, ವಹಿವಾಟು ನಡೆಸುತ್ತಿದ್ದಾರೆ.

ಹಬ್ಬ ಹರಿದಿನಗಳಲ್ಲಂತೂ ಗ್ರಾಹಕರು, ಸಾರ್ವಜನಿಕರು ಪೇಟೇಬೀದಿಯಲ್ಲಿ ಸಂಚರಿಸುವುದು ದುಸ್ತರವಾಗಿದೆ. ಎಲ್ಲೆಂದರಲ್ಲಿ ನಿಲ್ಲುವ ಬೈಕ್‌, ಗೂಡ್ಸ್‌ ಆಟೋ, ಸರಕು ಸಾಗಾಣಿಕೆ ವಾಹನದ ಜತೆಗೆ ಎಲ್ಲೆಂದರಲ್ಲಿ ವ್ಯಾಪಾರ ನಡೆಸುವುದರಿಂದ ಜನದಟ್ಟಣೆ ಮಿತಿಮೀರಿದೆ. ಕಿರಿದಾದ ರಸ್ತೆಯಲ್ಲಿ ಸಂಚರಿಸುವ ವೇಳೆ ಹಲವಾರು ಅಪಘಾತ ಸಂಭವಿಸುತ್ತಿರುವ ಉದಾಹರಣೆ ಸಾಕಷ್ಟಿದ್ದು ಕೂಡಲೇ ಪೊಲೀಸ್‌ ಹಾಗೂ ಚುನಾಯಿತ ಪ್ರತಿನಿಧಿಗಳು ಪುರಸಭೆ ಇಲಾಖೆಯೊಟ್ಟಿಗೆ ಕೈಜೋಡಿಸಿ ಅನಧಿಕೃತ ಅಂಗಡಿಗಳಿಗೆ ಕಡಿವಾಣ ಹಾಕಬೇಕಿದೆ.

ಪಟ್ಟಣದ ಪೇಟೇಬೀದಿ ಮಾರ್ಗದುದ್ದಕ್ಕೂ ಅನಧಿಕೃತ ಅಂಗಡಿ ನಿರ್ಮಿಸುತ್ತಿರುವ ಸಂಬಂಧ ಸಾರ್ವಜನಿಕರಿಂದ ದೂರು ಬಂದಿದೆ. ಈ ಬಗ್ಗೆ ಪಟ್ಟಿ ತಯಾರಿಸಿ ಚುನಾವಣೆ ಮುಗಿದ ಬಳಿಕ ತೆರವು ಮಾಡಲಾಗುವುದು. ● ಅಶೋಕ್‌, ಮದ್ದೂರು ಪುರಸಭೆ ಮುಖ್ಯಾಧಿಕಾರಿ

ಪೇಟೇಬೀದಿ ಮಾರ್ಗದುದ್ದಕ್ಕೂ ಅನಧಿಕೃತ ಅಂಗಡಿ ರಾತ್ರೋರಾತ್ರಿ ತಲೆ ಎತ್ತುತ್ತಿದ್ದು ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕಿದೆ. ● ವಿ.ಸಿ.ಉಮಾಶಂಕರ್‌, ಕಸ್ತೂರಿ ಕರ್ನಾಟಕ ಜನಪರ ಜಿಲ್ಲಾಧ್ಯಕ್ಷ

-ಎಸ್‌.ಪುಟ್ಟಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next