ಹೊಸದಿಲ್ಲಿ: ಅನಧಿಕೃತ ರಜೆಯ ಮೇಲೆ ತೆರಳಿರುವ ಸುಮಾರು 13 ಸಾವಿರ ಸಿಬ್ಬಂದಿ ಯನ್ನು ಸೇವೆಯಿಂದ ವಜಾಗೊಳಿಸಲು ರೈಲ್ವೆ ಇಲಾಖೆ ಯೋಚಿಸಿದೆ. ಇಲಾಖೆಯ ಆಡಳಿತ ಸುಧಾರಣೆ, ಸಿಬ್ಬಂದಿಯ ನೈತಿಕತೆ ಹೆಚ್ಚಳಕ್ಕೆ ಕ್ರಮ ಮುಂತಾದ ಯೋಜನೆಗಳನ್ನು ಹಾಕಿ ಕೊಳ್ಳಲಾಗಿದ್ದು, ಅದರ ಒಂದು ಭಾಗವಾಗಿ, ಅನಧಿಕೃತ ರಜೆ ಹಾಕಿರುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ.
ಸದ್ಯಕ್ಕೆ ಇಲಾಖೆಯಲ್ಲಿ 13 ಲಕ್ಷ ನೌಕರರು ಇದ್ದು, ಇವರಲ್ಲಿ 13 ಸಾವಿರ ನೌಕರರು ದೀರ್ಘಕಾಲದಿಂದ ಸತತವಾಗಿ ಗೈರಾಗಿದ್ದಾರೆ. ಇಂಥ ಸಿಬ್ಬಂದಿಯನ್ನು ವಜಾಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಇಲಾಖೆ ಹೇಳಿದೆ.
ನೈತಿಕತೆ ಹೆಚ್ಚಿಸಲು ಸಲಹೆ: ರೈಲ್ವೆ ಸಿಬ್ಬಂದಿಯ ನೈತಿಕತೆ ಹಾಗೂ ಕರ್ತವ್ಯಪರತೆ ಗಳನ್ನು ಹೆಚ್ಚಿಸಲು, ನೂತನ ವೇತನ ಪರಿಷ್ಕರಣೆ ವ್ಯವಸ್ಥೆ, ಬೋನಸ್, ಪ್ರೋತ್ಸಾಹ ಧನ ಹಾಗೂ ಉತ್ತಮ ಸೇವೆ ಸಲ್ಲಿಸಿದ ನೌಕರರಿಗೆ ಗೌರವ ಪದಕ ನೀಡುವಂಥ ಕ್ರಮಗಳನ್ನು ಜಾರಿಗೆ ತರುವಂತೆ ರೈಲ್ವೆ ಸಮಿತಿ ಶಿಫಾರಸು ಮಾಡಿದೆ. ನೌಕರರ ತಂದೆ- ತಾಯಿಗೆ ರೈಲುಗಳಲ್ಲಿ ಉಚಿತ ಪ್ರಯಾಣ, ರೈಲು ಮಾರ್ಗಗಳನ್ನು 10 ವರ್ಷಗಳವರೆಗೆ ಅಪಘಾತ ಮುಕ್ತವಾಗಿ ನಿರ್ವಹಿಸಿದ ಟ್ರಾಕ್ ಮನ್, ಗ್ಯಾಂಗ್‌ಮನ್‌ಗಳ ಗುಂಪುಗಳಿಗೆ ನಗದು ಪುರಸ್ಕಾರ ನೀಡುವುದು ಸೇರಿ ಇನ್ನಿತರ ಶಿಫಾರಸು ನೀಡಲಾಗಿದೆ.
13 ಲಕ್ಷ ಇಲಾಖೆಯಲ್ಲಿರುವ ಒಟ್ಟು ನೌಕರರು
13 ಸಾವಿರ ಸತತವಾಗಿ ಗೈರಾಗಿರುವ ನೌಕರರು
ದೀರ್ಘಾವಧಿ ಗೈರು ಸಿಬ್ಬಂದಿ ವಜಾಕ್ಕೆ ಆದೇಶ
ಸಿಬ್ಬಂದಿ ಕರ್ತವ್ಯ ಪರತೆ ಹೆಚ್ಚಿಸಲು ಕ್ರಮಕ್ಕೆ ಚಿಂತನೆ