ನವದೆಹಲಿ: ಉನ್ನಾವ್ ಅಪ್ರಾಪ್ತ ಯುವತಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಉತ್ತರಪ್ರದೇಶ ಬಿಜೆಪಿಯ ಮಾಜಿ ಶಾಸಕ ಕುಲ್ ದೀಪ್ ಸಿಂಗ್ ಸೆನ್ಗಾರ್ ದೋಷಿ ಎಂದು ದಿಲ್ಲಿಯ ತೀಸ್ ಹಜಾರಿ ಕೋರ್ಟ್ ಸೋಮವಾರ ತೀರ್ಪು ಪ್ರಕಟಿಸಿದೆ.
ಎರಡು ವರ್ಷದ ಹಿಂದಿನ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಬಿಜೆಪಿ ಉಚ್ಛಾಟಿದ(ನಾಲ್ಕು ಬಾರಿ ಆಯ್ಕೆಯಾಗಿದ್ದ) ಶಾಸಕ ಕುಲ್ ದೀಪ್ ದೋಷಿ ಎಂದು ತೀರ್ಪು ನೀಡಿರುವ ಕೋರ್ಟ್, ಮಂಗಳವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ತಿಳಿಸಿದೆ.
ಸಂತ್ರಸ್ತೆ ಕುಟುಂಬದ ವಿರುದ್ಧ ಸುಳ್ಳು ದೂರು ದಾಖಲಿಸಿರುವ ಪ್ರಭಾವಿ ವ್ಯಕ್ತಿ ವಿರುದ್ಧ ಕಾನೂನು ಹೋರಾಟ ನಡೆಸಿರುವುದಕ್ಕೆ ನ್ಯಾಯಾಧೀಶರು ಈ ಸಂದರ್ಭದಲ್ಲಿ ಶ್ಲಾಘನೆ ವ್ಯಕ್ತಪಡಿಸಿದರು. ಅಲ್ಲದೇ ಆರೋಪಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ವಿಳಂಬ ಮಾಡಿರುವುದಕ್ಕೆ ಸಿಬಿಐಯನ್ನು ನ್ಯಾಯಾಧೀಶರು ಈ ಸಂದರ್ಭದಲ್ಲಿ ಪ್ರಶ್ನಿಸಿದ್ದರು.
ಅಪ್ರಾಪ್ತೆ ಬಾಲಕಿಯನ್ನು ಕುಲ್ ದೀಪ್ ಸಿಂಗ್ ಬಳಿ ಕರೆದೊಯ್ದಿದ್ದ ಪ್ರಕರಣದ ಎರಡನೇ ಆರೋಪಿ ಶಶಿ ಸಿಂಗ್ ಅನ್ನು ಕೋರ್ಟ್ ಖುಲಾಸೆಗೊಳಿಸಿದೆ.
ಬಿಜೆಪಿಯ ಉಚ್ಚಾಟಿತ ನಾಯಕ ಕುಲದೇಪ್ ಸಿಂಗ್ ಸೆಂಗಾರ್ ವಿರುದ್ಧ 2017ರಲ್ಲಿ ಮಹಿಳೆ ಮೇಲೆ ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಅತ್ಯಾಚಾರ ಎಸಗಿದ ಆರೋಪವಿದೆ. ಸಿಬಿಐ ಮತ್ತು ಇತರರ ವಾದಗಳನ್ನು ಕೋರ್ಟ್ ಈಗಾಗಲೇ ಆಲಿಸಿದೆ. ಸೆಂಗಾರ್ ನಾಲ್ಕು ಬಾರಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಪ್ರಕರಣ ರಾಜಕೀಯವಾಗಿಯೂ ಮಹತ್ವ ಪಡೆದಿತ್ತು.