ಹೊಸದಿಲ್ಲಿ : ಉನ್ನಾವೋ ರೇಪ್ ಕೇಸ್ ಆರೋಪಿ, ಬಿಜೆಪಿ ಶಾಸಕ ಕುಲದೀಪ್ ಸೆಂಗರ್ ನನ್ನು ಸಿಬಿಐ ಪುರುಷತ್ವ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಶಾಸಕ ಸೆಂಗರ್ ಅವರ 12 ದಿನಗಳ ಸಿಬಿಐ ರಿಮಾಂಡ್ ಇಂದು ಶುಕ್ರವಾರ ಮುಗಿಯಲಿದ್ದು ಆತನನ್ನು ಇಂದು ಕೋರ್ಟಿಗೆ ಹಾಜರುಪಡಿಸಲಾಗುವುದು ಎಂದು ಸಿಬಿಐ ಹೇಳಿದೆ.
ಸಿಬಿಐ ಈ ಮೊದಲು ರೇಪ್ ಆರೋಪಿ ಬಿಜೆಪಿ ಶಾಸಕ ಸೆಂಗರ್ ನನ್ನು ಸುಳ್ಳು ಪರೀಕ್ಷೆಗೆ ಗುರಿಪಡಿಸುವ ಚಿಂತನೆ ನಡೆಸಿತ್ತು. ಸಿಬಿಐ ತನಿಖಾಧಿಕಾರಿಗಳ ಮುಂದೆ ಶಾಸಕ ಸೆಂಗರ್ ತನ್ನ ಹೇಳಿಕೆಯನ್ನು ಕ್ಷಣ ಕ್ಷಣಕ್ಕೆ ಬದಲಾಯಿಸುತ್ತಿದ್ದುದೇ ಇದಕ್ಕೆ ಕಾರಣವಾಗಿತ್ತು. ವಿವಿಧ ತನಿಖಾ ಸಂಸ್ಥೆಗಳ ಮುಂದೆ ಬಿಜೆಪಿ ಶಾಸಕ ಸೆಂಗರ್ ವಿಭಿನ್ನ ಉತ್ತರ ಕೊಡುತ್ತಿದ್ದುದು ಕೂಡ ಗಮನಾರ್ಹವಾಗಿತ್ತು.
ಆರೋಪಿ ಶಾಸಕ ಸೆಂಗರ್‌ಗೆ ಇದ್ದ ವೈ ಕೆಟಗರಿ ಭದ್ರತೆಯನ್ನು ಕಳೆದ ವಾರ ಕಿತ್ತು ಹಾಕಲಾಗಿತ್ತು. ಸೆಂಗರ್ ಒಬ್ಬ ಅತ್ಯಂತ ಪ್ರಭಾವೀ ರಾಜಕಾರಣಿಯಾಗಿರುವ ಕಾರಣ ರೇಪ್ ಕುರಿತಾದ ತನ್ನ ದೂರನ್ನು ಪೊಲೀಸರು ದಾಖಲಿಸಲು ಹಿಂದೇಟು ಹಾಕಿದ್ದರು ಎಂದು ರೇಪ್ ಸಂತ್ರಸ್ತೆ ದೂರಿದ್ದರು. ಆ ಕಾರಣಕ್ಕಾಗಿ ಹತಾಶಳಾಗಿದ್ದ ಆಕೆ ಎರಡು ಬಾರಿ ಬೆಂಕಿ ಹಚ್ಚಿಕೊಂಡು ಸಜೀವ ದಹನಕ್ಕೆ ಯತ್ನಿಸಿದ್ದಳು.
ತೀವ್ರ ಒತ್ತಡಕ್ಕೆ ಗುರಿಯಾಗಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಂತಿಮವಾಗಿ ಎಸ್‌ಐಟಿ ತನಿಖೆಗೆ ಆದೇಶಿಸಿದ್ದರು.