Advertisement
24 ವರ್ಷದ ಯುವತಿಯನ್ನು ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಪಡಿಸಲಾಗಿತ್ತು ಮತ್ತು ಮೊನ್ನೆ ಗುರುವಾರದಂದು ಈ ಅತ್ಯಾಚಾರ ಪ್ರಕರಣದ ಇಬ್ಬರು ಆರೋಪಿಗಳು ಮತ್ತು ಇತರೇ ಮೂವರು ಸೇರಿದಂತೆ ಒಟ್ಟು ಐದು ಮಂದಿಯ ತಂಡ ಆಕೆಯ ಮೇಲೆ ಹಲ್ಲೆ ನಡೆಸಿ ಬಳಿಕ ಬೆಂಕಿ ಹಚ್ಚಿದ್ದರು.
Related Articles
Advertisement
ಸಂತ್ರಸ್ತೆಯು ಉತ್ತರಪ್ರದೇಶದ ರಾಯ್ ಬರೇಲಿಯಲ್ಲಿರುವ ನ್ಯಾಯಾಲಯದಲ್ಲಿ ಗುರುವಾರ ನಡೆಯಲಿದ್ದ ಪ್ರಕರಣದ ವಿಚಾರಣೆಗೆಂದು ಬೆಳಗಿನ ಜಾವ ಬೈಸ್ವಾರ ಬಿಹಾರ ರೈಲ್ವೇ ನಿಲ್ದಾಣಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ದಾರಿಮಧ್ಯದಲ್ಲಿ ಬೆಳಗಿನ ಜಾವ 4.30ರ ಸುಮಾರಿಗೆ ಆಕೆಯನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಆಕೆಯನ್ನು ನಿಂದಿಸಿ ಹಲ್ಲೆ ನಡೆಸಿ ಬಳಿಕ ಬೆಂಕಿ ಹಚ್ಚಿ ಪರಾರಿಯಾಗಿದ್ದರು.
ದುಷ್ಕರ್ಮಿಗಳು ಮೊದಲಿಗೆ ಸಂತ್ರಸ್ತೆಯ ತಲೆ ಮೇಲೆ ಹೊಡೆದು ಬಳಿಕ ಆಕೆಯ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆಕೆ ಕೆಳಗೆ ಬಿದ್ದಾಗ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು ಎಂದು ಸಂತ್ರಸ್ತೆಯು ಈ ಘಟನೆಯ ಬಳಿಕ ಉನ್ನಾವೋ ಜಿಲ್ಲಾಸ್ಪತ್ರೆಯಲ್ಲಿ ಉಪವಿಭಾಗೀಯ ಜಿಲ್ಲಾಧಿಕಾರಿಗಳಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಳು.
ಮೈಯೆಲ್ಲಾ ಬೆಂಕಿಯ ಜ್ವಾಲೆಗಳಿಂದ ಆವರಿಸಲ್ಪಟ್ಟಿದ್ದ ಸಂತ್ರಸ್ತೆ ಸಹಾಯಕ್ಕಾಗಿ ಬೊಬ್ಬಿಡುತ್ತಾ ಸುಮಾರು ಒಂದು ಕಿಲೋಮೀಟರ್ ದೂರ ಓಡಿ ಬಂದಿದ್ದಳು. ಇದನ್ನು ಕಂಡ ಕೆಲವರು ತಕ್ಷಣವೇ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆ ತನ್ನ ಹೇಳಿಕೆಯಲ್ಲಿ ಹೆಸರಿಸಿದ ಎಲ್ಲಾ ಐವರನ್ನು ಬಂಧಿಸಲಾಗಿದೆ ಎಂದು ಉನ್ನಾವೋ ಎಸ್.ಪಿ. ಮಾಹಿತಿ ನೀಡಿದ್ದಾರೆ.