Advertisement

ಉಣ್ಣಕ್ಕಿ ಜಾತ್ರಾಮಹೋತ್ಸವ; ವಿಸ್ಮಯ ಸೃಷ್ಟಿಸುವ ಹುತ್ತ

08:54 PM Nov 05, 2022 | Team Udayavani |

ಕೊಟ್ಟಿಗೆಹಾರ: ಮಲೆನಾಡು ಧಾರ್ಮಿಕ ಕ್ಷೇತ್ರಗಳಿಗೆ ಹೆಸರುವಾಸಿಯಾಗಿದೆ.ಅದರ ಸರದಿಯಲ್ಲಿ ಮೂಡಿಗೆರೆ ತಾಲ್ಲೂಕಿನ ಬಾನಳ್ಳಿಯಲ್ಲಿ ಅಲುಗಾಡಿ ಅಚ್ಚರಿ ಮೂಡಿಸುವ ಉಣ್ಣಕ್ಕಿ ಹುತ್ತವೂ ಒಂದು.ನವೆಂಬರ್ 6 ಭಾನುವಾರದಂದು ಉಣ್ಣಕ್ಕಿ ಉತ್ಸವದ ಜಾತ್ರೆ ಅದ್ದೂರಿಯಾಗಿ ನಡೆಯುತ್ತದೆ.

Advertisement

ಮೂರು ಶತಮಾನಗಳ ಹಿಂದೆ ನೈಸರ್ಗಿಕವಾಗಿ ಸೃಷ್ಟಿಯಾಗಿರುವ ಈ ಉಣ್ಣಕ್ಕಿ ಹುತ್ತ ಸಂಜೆ ಮಹಾ ಮಂಗಳಾರತಿ ವೇಳೆ ಅಲುಗಾಡಿ ಅಚ್ಚರಿ ಮೂಡಿಸುವ ಸಂಗತಿ ವಿಜ್ಞಾನ ಲೋಕಕ್ಕೂ ಒಂದು ಸವಾಲಾಗಿ ಪರಿಣಮಿಸಿದೆ.

ಬಾನಳ್ಳಿಯ ಈ ಹುತ್ತ 10 ಅಡಿ ಎತ್ತರವಿದೆ.ಬರೀ ಮಣ್ಣಿನಿಂದಲೇ ನಿರ್ಮಾಣವಾಗಿದೆ.ಜನರ ಕಷ್ಟ ಕಾರ್ಪಣ್ಯಗಳನ್ನು ಹೋಗಲಾಡಿಸಲು ಶಕ್ತಿ ಹುತ್ತಕ್ಕಿದೆ ಎಂಬುದು ಭಕ್ತರ ದೃಢ ನಂಬಿಕೆಯಾಗಿದೆ.

ಬಾನಳ್ಳಿಯ ಸುತ್ತಮುತ್ತಲ ಗ್ರಾಮಗಳಲ್ಲಿ ದನಗಳಿಗೆ,ಮನುಷ್ಯರಿಗೆ ಕಾಯಿಲೆಗಳು ಬಂದರೆ ಹುತ್ತದ ಮಣ್ಣು ಮೈಗೆ ಹಚ್ಚುವುದರಿಂದ ಕಾಯಿಲೆ ದೂರವಾಗುತ್ತದೆ ಎಂಬ ಅಗಾಧ ನಂಬಿಕೆಯಿದೆ.

ಬಾನಳ್ಳಿಯಲ್ಲಿ ನಡೆಯುವ ಉಣ್ಣಕ್ಕಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು ಭಾನುವಾರದಂದು ಸಂಜೆ ಹುತ್ತ ಅಲುಗಾಡುವ ಅಚ್ಚರಿಯನ್ನು ಭಕ್ತರನ್ನು ಕಣ್ತುಂಬಿಕೊಳ್ಳಬಹುದಾಗಿದೆ.

Advertisement

ಪ್ರತಿವರ್ಷವೂ ಉತ್ಸವಕ್ಕೆ ಸ್ಥಳೀಯರೇ ಅಲ್ಲದೇ ದೂರದ ಊರುಗಳಿಂದಲೂ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ.ಈ ಪೂಜೆಗೆ ಹಾಲು ಮತ್ತು ಅಕ್ಕಿಯನ್ನು ಸಮರ್ಪಿಸಿ ಭಕ್ತರು ಭಕ್ತಿ ಮೆರೆಯುವುದು ಪದ್ಧತಿಯಾಗಿದೆ ಎನ್ನುತ್ತಾರೆ ಭಕ್ತರಾದ ಶಿವಣ್ಣ.

ದೀಪಾವಳಿಯ ನಂತರ ಬರುವ ಹುಣ್ಣಿಮೆ ದಿನ ಅಂದರೆ ಇದೇ ನವೆಂಬರ್ 6ರಂದು ಭಾನುವಾರ ಉಣ್ಣಕ್ಕಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗುತ್ತದೆ.ಅಂದು ಬೆಳಿಗ್ಗೆಯಿಂದ ವಿಶೇಷ ಪೂಜೆಗಳು ಹುತ್ತಕ್ಕೆ ಸಲ್ಲಿಸಲಾಗುತ್ತದೆ.ಸಂಜೆ 6ಗಂಟೆಯ ನಂತರ ವಿಶೇಷ ಹೂಗಳಿಂದ ಹಾಗೂ ವಿದ್ಯುತ್ ಅಲಂಕಾರದಿಂದ ಸಿದ್ಧವಾದ ಮಂಟಪದೊಳಗೆ ಈ ಹುತ್ತ ಜನರನ್ನು ತನ್ನೆಡೆಗೆ ಆಕರ್ಷಿಸುತ್ತದೆ.

ಜಾತ್ರೆಗೆ ಬಂದ ಭಕ್ತರಿಗೆ ಹಾಲಕ್ಕಿಯನ್ನು ವಿತರಣೆ ಮಾಡಲಾಗುತ್ತದೆ.ಅದನ್ನು ಭಕ್ತರು,ಸ್ಥಳೀಯ ಗ್ರಾಮಸ್ಥರು ಮನೆಗಳಿಗೆ ಕೊಂಡು ಹೋಗಿ ಮನೆಯ ಸುತ್ತಮುತ್ತ,ಗದ್ದೆಯ ಶುದ್ಧೀಕರಣಕ್ಕೆ ಹಾಲಕ್ಕಿಯನ್ನು ಹಾಕಿ ಪಾವನವಾಗುವ ಸಂಪ್ರದಾಯವಿದೆ.ರಾತ್ರಿ ಮಹಾಮಂಗಳಾರತಿ ಸಮಯದಲ್ಲಿ ಕಿಕ್ಕಿರಿದ ಭಕ್ತ ಗಣದ ನಡುವೆ ಅರ್ಚಕರು ಪೂಜೆ ಸಲ್ಲಿಸುವಾಗ ಹುತ್ತ ಕ್ಷಣಾರ್ಧದಲ್ಲಿ ಅಲುಗಾಡಿ ಭಕ್ತಿಯ ಜತೆಗೆ ವಿಸ್ಮಯ ಸೃಷ್ಟಿಸುತ್ತದೆ.ಹುತ್ತದ ಪೂಜೆಯಿಂದ ನರಹುಣ್ಣು,ಕುರ,ಸರ್ಪಸುತ್ತು ಮತ್ತಿತರ ಕಾಯಿಲೆಗಳು ವಾಸಿಯಾಗುತ್ತವೆ. ಮಹಾ ಮಂಗಳಾರತಿ ವೇಳೆ ಹುತ್ತದ ಸುತ್ತ ಕರುವೊಂದನ್ನು ಪ್ರದಕ್ಷಿಣೆ ಹಾಕಲಾಗುತ್ತದೆ.ಆಗ ಭಕ್ತರು ಮಂಡಕ್ಕಿ ಎರಚಿ ಮಾಡಿದ ಹರಕೆಯನ್ನು ತೀರಿಸುತ್ತಾರೆ ಎಂದು ಗ್ರಾಮಸ್ಥರಾದ ಪ್ರತಾಪ್ ಹೇಳುತ್ತಾರೆ.

ಸಂತೋಷ್ ಅತ್ತಿಗೆರೆ,ಕೊಟ್ಟಿಗೆಹಾರ

Advertisement

Udayavani is now on Telegram. Click here to join our channel and stay updated with the latest news.

Next