Advertisement
ಪ್ರಕೃತಿ ರಮಣೀಯ ಪ್ರದೇಶವಾಗಿರುವ ವೀರಮಲೆ ಚೆರ್ವತ್ತೂರು ಪಂಚಾಯತ್‌ನಲ್ಲಿ ನೆಲೆಗೊಂಡಿದ್ದು, ವೀರಮಲೆ ಬೆಟ್ಟವನ್ನು ಕಾರ್ಯಂ ಗೋಡು ನದಿ ಆವರಿಸಿಕೊಂಡಿದೆ. ಇದೇ ವೀರಮಲೆ 18 ನೇ ಶತಮಾನದಲ್ಲಿ ಡಚ್‌ರ ಪ್ರಮುಖ ಕೇಂದ್ರವಾಗಿತ್ತು. ರಾಣಿಪುರದಂತೆ ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುವ ವೀರಮಲೆ ಹಿಲ್ ಪ್ರವಾಸಿಗರ ಪ್ರಮುಖ ಕೇಂದ್ರವಾಗಿ ಅಭಿವೃದ್ಧಿ ಪಡಿಸುವ ಎಲ್ಲ ಸಾಧ್ಯತೆಗಳಿದ್ದು, ಈ ಬಗ್ಗೆ ಸಚಿವರು ಕೂಡ ಘೋಷಣೆ ಮಾಡಿದ್ದರು.
Related Articles
ಅರಣ್ಯ ಇಲಾಖೆಯ ಸ್ವಾಧೀನದಲ್ಲಿರುವ 70 ಎಕರೆ ಭೂಪ್ರದೇಶದಲ್ಲಿ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಪಡಿಸುವ ಬಗ್ಗೆ ವರ್ಷಗಳ ಹಿಂದೆಯೇ ಡಿ.ಟಿ.ಪಿ.ಸಿ. ಮುಖಾಂತರ ಯೋಜನೆಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿತ್ತು.
Advertisement
ಸ್ವದೇಶಿ ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ತಕ್ಕುದಾದ ಅಭಿವೃದ್ಧಿ ಪಡಿಸಲಾಗುವು ದೆಂದು ಡಿಟಿಪಿಸಿ ಅಧಿಕಾರಿಗಳೊಂದಿಗಿದ್ದ ಜನಪ್ರತಿನಿಧಿಗಳು ಘೋಷಿಸಿದ್ದರು. ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಹಾಗು ಪ್ರವಾಸಿಗ ರನ್ನು ಆಕರ್ಷಿಸಲು ವಿವಿಧ ಸೌಕರ್ಯಗಳನ್ನು ಏರ್ಪಡಿಸುವುದಾಗಿ ತಿಳಿಸಲಾಗಿತ್ತು.
ವೀರಮಲೆ ಬೆಟ್ಟದ ಮೇಲೆ ಮಕ್ಕಳ ಪಾರ್ಕ್, ಆಟಿಕೆಗಳ ಜೋಡಣೆ, ರೋಪ್ ವೇ, ತೇಜಸ್ವಿನಿ ಹೊಳೆಯಿಂದ ವೀರಮಲೆ ತಲುಪಲು ವಿಶೇಷ ರೀತಿಯ ಬೋಟ್ ಸರ್ವೀಸ್ ಆರಂಭಿಸುವುದು, ಈಜು ಕೊಳ ಮೊದಲಾದವುಗಳನ್ನು ಕಲ್ಪಿಸುವ ಬಗ್ಗೆ ತೀರ್ಮಾನಿಸಲಾಗಿತ್ತು. ಆದರೆ ಎಲ್ಲ ಘೋಷಣೆ ಗಳೂ, ಯೋಜನೆಗಳೂ ಮರೆಯಾದವು. ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ತಕ್ಕ ಪ್ರದೇಶ ವಾಗಿರುವ ವೀರಮಲೆ ಬೆಟ್ಟವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿದ್ದರೆ ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿತ್ತು. ಆದರೆ ಅದು ಈ ವರೆಗೂ ಸಾಧ್ಯವಾಗಿಲ್ಲ.
ಮಳೆಗಾಲದಲ್ಲಿ ನಿರಾಶ್ರಿತರಾಗುವ ಜನರಿಗಾಗಿ ಎರಡು ಕೇಂದ್ರಗಳನ್ನು ಈ ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಈ ಕೇಂದ್ರಗಳು ಇದೀಗ ಸಮಾಜ ವಿದ್ರೋಹಿಗಳ ಅಟ್ಟಹಾಸ ಕೇಂದ್ರವಾಗಿ ಬದಲಾಗಿದೆ ಎಂಬುದಾಗಿ ಸ್ಥಳೀಯರು ಸಾರ್ವತ್ರಿಕವಾಗಿ ಆರೋಪಿಸುತ್ತಿದ್ದಾರೆ.
ಕಾಂಞಂಗಾಡ್‌ನಿಂದ ಸುಮಾರು 16 ಕಿ.ಮೀ. ದೂರದಲ್ಲೂ, ಬೇಕಲ ಕೋಟೆಯಿಂದ 29 ಕಿ.ಮೀ. ದೂರದಲ್ಲಿರುವ ಚೆರ್ವತ್ತೂರಿನ ವೀರಮಲೆ ಹಿಲ್‌ಪ್ರದೇಶಕ್ಕೆ ಹತ್ತಿರದ ರೈಲು ನಿಲ್ದಾಣ ಚೆರ್ವತ್ತೂರು ಆಗಿದೆ.
ಕಾಸರಗೋಡು ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಪಡಿಸುವ ಸಾಧ್ಯತೆಯಿರುವ ಪ್ರದೇಶವಾಗಿರುವ ವೀರಮಲೆ ಬೆಟ್ಟ ಚಾರಣಿಗರ ಸ್ವರ್ಗವಾಗಿ ಪರಿವರ್ತಿಸಬಹುದು. ಅಲ್ಲದೆ ಬೇಕಲ ಕೋಟೆಯನ್ನು ಆಸ್ವಾದಿಸಲು ಬರುವ ಸ್ವದೇಶಿ ಮತ್ತು ವಿದೇಶಿ ಪ್ರವಾಸಿಗರನ್ನೂ ಇತ್ತ ಆಕರ್ಷಿಸಬಹುದಾಗಿದೆ. ಈ ಕಾರಣದಿಂದ ಈ ಬೆಟ್ಟ ಪ್ರದೇಶ ಅಭಿವೃದ್ಧಿ ಸಾಧ್ಯವಾದರೆ ಜಿಲ್ಲೆಯ ಆರ್ಥಿಕ ಸ್ಥಿತಿಯ ಮೇಲೂ ಉತ್ತಮ ಪರಿಣಾಮ ಬೀರಲಿದೆ.
ಹೀಗಿರುವುದರಿಂದ ವೀರಮಲೆ ಪ್ರವಾಸಿ ಕೇಂದ್ರವನ್ನು ಶೀಘ್ರದಲ್ಲೇ ಅಭಿವೃದ್ಧಿ ಸಾಧ್ಯವಾ ಗಬೇಕು. ಈ ಮೂಲಕ ಸಚಿವರ ಘೋಷಣೆ ಸಾಕಾರಗೊಳ್ಳಬೇಕು. ಜನರ ಬಹಳ ನಿರೀಕ್ಷೆಯ ಪ್ರವಾಸಿ ಕೇಂದ್ರ ಸಾಕಾರಗೊಳ್ಳಬಹುದೇ ಎಂಬುದಾಗಿ ಕಾಸರಗೋಡಿನ ಜನತೆ ಎದುರು ನೋಡುತ್ತಿದ್ದಾರೆ.
– ಪ್ರದೀಪ್ ಬೇಕಲ್