ಬೆಂಗಳೂರು: ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ ಎಂದು ಲೋಕಸಭಾ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾಧ್ಯಮ ಸೇರಿದಂತೆ ಎಲ್ಲ ರಂಗದ ಮೇಲೂ ಕೇಂದ್ರ ಸರ್ಕಾರ ನಿರ್ಬಂಧ ಹೇರುತ್ತಿದೆ. ಮುಕ್ತವಾಗಿ ಮಾತನಾಡುವ, ಅಭಿಪ್ರಾಯ ತಿಳಿಸುವ ಸ್ವಾತಂತ್ರ್ಯ ದೇಶದ ಜನತೆಗೆ ಇಲ್ಲದಂತಾಗಿದೆ ಎಂದು ಹೇಳಿದರು.
ಸುಭದ್ರ ಸಂವಿಧಾನ ಕಾಂಗ್ರೆಸ್ ಕೊಡುಗೆ: ಪ್ರಧಾನಿ ನರೇಂದ್ರ ಮೋದಿ ಹಿಟ್ಲರ್ ರೀತಿ ಆಡಳಿತ ನಡೆಸುತ್ತಿದ್ದಾರೆ. ಅವರ ಎದುರು ಅವರ ಸಂಪುಟದ ಸಚಿವರೇ ಹೋಗಿ ಮಾತನಾಡಲು ಹೆದರುವಂತಾಗಿದೆ. ದೇಶದಲ್ಲಿ ಸುಭದ್ರ ಸಂವಿಧಾನ ಇರುವುದರಿಂದ ಪ್ರಜಾಪ್ರಭುತ್ವ ಜೀವಂತವಾಗಿದೆ. ಸಂವಿಧಾನ ಇಲ್ಲದೇ ಹೋಗಿದ್ದರೆ, ಮೋದಿ ಪ್ರಜಾಪ್ರಭುತ್ವವನ್ನೇ ನಾಶ ಮಾಡಿ ಬಿಡುತ್ತಿದ್ದರು ಎಂದು ತಿಳಿಸಿದರು
ರಾಹುಲ್ ಮೇಲೆ ಬಿಜೆಪಿ ದಾಳಿ: ದೇಶದಲ್ಲಿ ಅಲ್ಪ ಸಂಖ್ಯಾತರು, ದೀನ ದಲಿತರಿಗೆ ರಕ್ಷಣೆ ಇಲ್ಲದಂತಾಗಿದ್ದು, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತ್‌ಗೆ ಭೇಟಿ ನೀಡಿದಾಗ ಅವರ ಮೇಲೆಯೂ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಈ ದೇಶದಲ್ಲಿ ಯಾರಿಗೂ ರಕ್ಷಣೆ ಇಲ್ಲದಂತಾಗಿದೆ. ಗುಜರಾತ್‌ನಲ್ಲಿ ಒಂದು ರಾಜ್ಯಸಭೆ ಚುನಾವಣೆಯನ್ನು ಗೆಲ್ಲಲು ಕೇಂದ್ರದ ಐವರು ಸಚಿವರು ಚುನಾವಣಾ ಆಯೋಗದ ಮುಂದೆ ಹೋಗಿ ಕುಳಿತರು. ಅದರ ಬದಲು ಗುಜರಾತ್‌ನಲ್ಲಿ ಶಾಸಕರ ಖರೀದಿ ಮಾಡಿದವರ ವಿರುದಟಛಿ ಚುನಾವಣಾ ಆಯೋಗಕ್ಕೆ ದೂರು ನೀಡಬೇಕಿತ್ತು ಎಂದು ಹೇಳಿದರು.
ಕೇವಲ 15 ಜನ ಶ್ರೀಮಂತರ 6 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಆಗುವುದಿಲ್ಲ ಎಂದು ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಸಚಿವ ಡಿಕೆಶಿಗೆ ಜೈಕಾರ
ಕಾಂಗ್ರೆಸ್ ಆಯೋಜಿಸಿದ್ದ ಸಾರ್ಥಕ ಸಮಾವೇಶದಲ್ಲಿ ರಾಹುಲ್‌ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಖರ್ಗೆ, ಪರಮೇಶ್ವರ ಸೇರಿದಂತೆ ಎಲ್ಲ ನಾಯಕರೂ ವೇದಿಕೆ ಮೇಲೆ ಕುಳಿತಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಎಲ್ಲರನ್ನು ಸ್ವಾಗತಿಸಿದಾಗ ಶಿಳ್ಳೆ ಹೊಡೆಯುತ್ತಿದ್ದ ಕಾರ್ಯಕರ್ತರು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೆಸರು ಹೇಳಿದಾಗ ಜೋರಾಗಿ ಶಿಳ್ಳೆ ಹೊಡೆದಿದ್ದು ಕಂಡು ಬಂತು.