Advertisement

ಲೆಕ್ಕಕ್ಕಿಲ್ಲದ ಆಸಾಮಿ ಜೊತೆ ದರ್ಶನ್‌

06:00 AM May 04, 2018 | Team Udayavani |

ಈ ಹಿಂದೆ ಪ್ರಥಮ್‌, “ಹೊಟ್ಟೆಯಲ್ಲಿ ಮಗು ಇರುವಾಗಲೇ ಇನ್ನೊಂದು ಮಗುವಿಗೆ ಪ್ರಯತ್ನಿಸಬಾರದು. ಹಾಗೆ ನಾನು ಸಹ ಒಂದು ಸಿನ್ಮಾ ಮುಗಿದ ಮೇಲೆ ಇನ್ನೊಂದು ಸಿನಿಮಾ ಮಾಡ್ತೀನಿ. ಸದ್ಯಕ್ಕೆ ನನ್ನ ಹಿಂದಿನ ಚಿತ್ರಗಳು ಚಿತ್ರೀಕರಣದಲ್ಲಿವೆ. ಅವೆಲ್ಲ ಮುಗಿದ ಬಳಿಕ “ಎಂಎಲ್‌ಎ’ ಮಾಡ್ತೀನಿ’ ಎಂದು ಹೇಳಿದ್ದರು. ಆದರೆ, ಅವರ ಹಿಂದಿನ ಚಿತ್ರಗಳಿನ್ನೂ ಮುಗಿದೇ ಇಲ್ಲ. ಆಗಲೇ “ಎಂಎಲ್‌ಎ’ ಮಾಡಿದ್ದಾರೆ. ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಬಂದಿದ್ದು ದರ್ಶನ್‌. ಹಾಗಾಗಿ ಸಹಜವಾಗಿಯೇ ಸಭಾಂಗಣದ ಒಳಗೂ ಜನ, ಹೊರಗೂ ಜನ. ಕಾಲಿಡದಷ್ಟು ಜನಜಂಗುಳಿ.

Advertisement

ವೇದಿಕೆಗೆ ಬಂದ ದರ್ಶನ್‌, “ಎಂಎಲ್‌ಎ’ ತಂಡಕ್ಕೆ ಒಳ್ಳೆಯದಾಗಲಿ, ಚಿತ್ರ ಶತದಿನ ಆಚರಿಸಲಿ, ಹಾಡುಗಳು ಹಿಟ್‌ ಆಗಲಿ’ ಅಂತ ಶುಭ ಕೋರಿದರು. 50 ಚಿತ್ರ ಪೂರೈಸಿದ ಹಿನ್ನೆಲೆಯಲ್ಲಿ ಅಂದು ದರ್ಶನ್‌ ಅವರಿಗೆ ಸನ್ಮಾನ ಮಾಡಲಾಯಿತು. ಅದಾದ ಬಳಿಕ ದರ್ಶನ್‌ ಇನ್ನೇನು ಹೊರಡಲು ಅಣಿಯಾಗುತ್ತಿದ್ದಂತೆಯೇ, ಕೈಯಲ್ಲಿ ಮೈಕ್‌ ಹಿಡಿದ ಪ್ರಥಮ್‌, “ಚಾಲೆಂಜಿಂಗ್‌ ಸ್ಟಾರ್‌ ಜೊತೆ ನಾನು ಚಾಲಾಕಿ ಸ್ಟಾರ್‌’ ಅಲ್ವಾ ಸಾರ್‌? ಅಂತ ದರ್ಶನ್‌ ಕಡೆ ನೋಡಿದರು. ದರ್ಶನ್‌, ಎಂದಿನ ಶೈಲಿಯ ನಗು ಹೊರ ಹಾಕಿದರು. ದರ್ಶನ್‌ ಮುಂದೆ ಮಾತಾಡಬೇಕು ಅಂತಾನೇ ಮೈಕ್‌ ಹಿಡಿದಿದ್ದ ಪ್ರಥಮ್‌, “ಚಿತ್ರದಲ್ಲಿ ರೇಖಾ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅವರಿಗೆ ಇನ್ನೊಂದು ದಿನ ಇರಮ್ಮಾ, ಆಡಿಯೋ ಸಿಡಿ ಬಿಡುಗಡೆ ನಂತರ ಹೋಗುವಿರಂತೆ ಅಂದೆ. ಆದರೆ, ಅವರು ವಿದೇಶಕ್ಕೆ ಹೋಗಿದ್ದಾರೆ. ರೇಖಮ್ಮ ಹತ್ತು ವರ್ಷ ಲೇಟ್‌ ಆಗಿ ಹುಟ್ಟಿದ್ದರೆ, ನಾನು ಅವರಿಗೆ ಹೀರೋ ಆಗುತ್ತಿದ್ದೆ. ಆದರೆ, ನನಗಿಂತ ಮುಂಚೆ ಹುಟ್ಟಿದ್ದಾರೆ. ನಾನು ಅನ್‌ಲಕ್ಕಿ’ ಅಂದರು. ಅಷ್ಟೇ ಅಲ್ಲ, ಕಾರ್ಯಕ್ರಮದುದ್ದಕ್ಕೂ ಬೇರೆಯವರು ಮಾತಾಡುವಾಗ, ಮಧ್ಯೆ ನನ್ನದೂ ಒಂದು ಮಾತು ಅಂತ ಆಗಾಗ ತಮ್ಮ ಇಚ್ಛೆಗನುಸಾರ ಮಾತು ಹರಿಬಿಟ್ಟು, ಸಣ್ಣದ್ದೊಂದು ಕಿರಿಕಿರಿಯನ್ನುಂಟು ಮಾಡಿದ್ದು ಅಂದಿನ ಹೈಲೆಟ್‌ಗಳಲ್ಲೊಂದು.

ಅಂದಹಾಗೆ, “ಎಂಎಲ್‌ಎ’ ತಮಾಷೆಯಲ್ಲಿ ಸಾಗುವ ಸಿನಿಮಾ. ಒಬ್ಬ “ಎಂಎಲ್‌ಎ’ ಆಗಬೇಕಾದವನು ಹೇಗಿರಬೇಕು, “ಎಂಎಲ್‌ಎ’ ಆದವನು ಹೀಗೇ ಇರಬೇಕು ಎಂಬ ವಿಷಯ ಇಲ್ಲಿದೆಯಂತೆ.  ಮೊದಲರ್ಧ ಸಾಮಾನ್ಯ ಹುಡುಗನ ತುಂಟಾಟ ಸುತ್ತುವ ಈ ಚಿತ್ರ, ಮಧ್ಯಂತರದಲ್ಲಿ ಎಂಎಲ್‌ಎ ಆಗ್ತಾನೆ. ಆ ನಂತರ ಏನೆಲ್ಲಾ ಆಗುತ್ತೆ ಎಂಬುದು ಕಥೆ. ನಿರ್ದೇಶಕ ಮೌರ್ಯ ಅವರು ರಾಮಕೃಷ್ಣ  ಪರಮಹಂಸರ ಒಂದು ಕಥೆ ಇಟ್ಟುಕೊಂಡು ಈ ಚಿತ್ರ ಮಾಡಿದ್ದಾರಂತೆ. ಆಸೆ ಇದ್ದರೆ ಮನುಷ್ಯ ಏನಾಗುತ್ತಾನೆ ಎಂಬ ಸಣ್ಣ ಕಥೆ ಈ ಸಿನಿಮಾಗೆ ಸ್ಫೂರ್ತಿ. “ಎಂಎಲ್‌ಎ’ ಅಂದರೆ, “ಮದರ್‌ ಪ್ರಾಮೀಸ್‌ ಲೆಕ್ಕಕ್ಕಿಲ್ಲದ ಆಸಾಮಿ’ ಎಂಬರ್ಥವಿದೆ. ನಿರ್ಮಾಪಕ ವೆಂಕಟೇಶ್‌ ರೆಡ್ಡಿ ಕೂಡ ಬಂದವರಿಗೆ ಥ್ಯಾಂಕ್ಸ್‌ ಹೇಳುವುದಕ್ಕಷ್ಟೇ ಸೀಮಿತವಾದರು. ಅಂದು ನಿರ್ದೇಶಕ ಆರ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಮಂಡಳಿಯ ಎಂ.ಜಿ.ರಾಮಮೂರ್ತಿ, ಗಣೇಶ್‌ ಇತರರು ಶುಭಕೋರುವ ಹೊತ್ತಿಗೆ ಕಾರ್ಯಕ್ರಮ ಮುಗಿಯಿತು. ಚಿತ್ರಕ್ಕೆ ಕೃಷ್ಣ ಸಾರಥಿ ಛಾಯಾಗ್ರಹಣ ಮಾಡಿದರೆ, ವಿಕ್ರಮ್‌ ಸುಬ್ರಮಣ್ಯ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next