ಕಾರವಾರ: ಕೊರೊನಾದಿಂದ ಲಾಕ್ ಆಗಿದ್ದ ಉತ್ತರ ಕನ್ನಡ ಜಿಲ್ಲೆ ಇದೀಗ ಜೂ.21 ರಿಂದ ಅನ್‌ಲಾಕ್ ಆಗುತ್ತಿದೆ. ಜನರಲ್ಲಿ ಸಂತಸ ಮನೆ ಮಾಡಿದೆ.
ಕೋವಿಡ್ ಪಾಜಿಟಿವಿಟಿ ರೇಟ್ 2.47ಕ್ಕೆ ಇಳಿದಿದ್ದು, ಆಶಾದಾಯಕ ಬೆಳವಣಿಗೆ. ಕರ್ಫ್ಯೂ ಮುಕ್ತ ಮತ್ತು ಕೊರೊನಾ ಮುಕ್ತ ದಿನಗಳಲ್ಲಿ ಎಂದಿನಂತೆ ಓಡಾಡಲು ಜನ ಸಜ್ಜಾಗಿದ್ದಾರೆ. ವಾರಾಂತ್ಯದ ದಿನಗಳನ್ನು ಮನೆಯಲ್ಲಿ ಎಂಜಾಯ್ ಮಾಡಲು ಸಹ ಸಿದ್ಧತೆ ಆಗಿವೆ. ಎಲ್ಲಾ ಅಂಗಡಿಗಳು ಸಹ ತೆರೆಯಲಿದ್ದು, ಇಲ್ಲಿ ಸಹ ಸಾಮಜಿಕ ಅಂತರ ಕಾಪಾಡಲು ಸಿದ್ಧತೆ ನಡೆದಿವೆ. ರೆಸ್ಟೋರೆಂಟ್‌ಗಳು ಸ್ವತ್ಛವಾಗಿದ್ದು, ಶೇ.50 ಗ್ರಾಹಕರಿಗೆ ಚೇರ್ ವ್ಯವಸ್ಥೆ ಮಾಡಲಾಗಿದೆ. ಆದರೆ ಸತತ ಬೀಳುವ ಮಳೆ ಜನರ ಸಂಚಾರಕ್ಕೆ ಅಡ್ಡಿಯಾಗುವ ಸಂಭವ ಸಹ ಇದೆ. ಬಸ್ ಸಂಚಾರ ಶೇ,50 ರಷ್ಟು ಆರಂಭವಾಗಲಿದೆ.
ಬಸ್‌ಗಳಲ್ಲಿ ಶೇ.50 ರಷ್ಟು ಸೀಟ್‌ಗೆ ಅವಕಾಶವಿದೆ. ಮೈಸೂರು ಮಾರ್ಗವಾಗಿ ತೆರಳುವ ಬಸ್‌ಗಳಲ್ಲಿ ಮೈಸೂರು ಸ್ಟಾಪ್ ಇರುವುದಿಲ್ಲ. ಮೈಸೂರಿನಿಂದ ಯಾರನ್ನು ಹತ್ತಿಸಿಕೊಳ್ಳುವುದಿಲ್ಲ. ಇಳಿಸುವುದಿಲ್ಲ ಎಂದು ಕೆಎಸ್‌ಆರ್‌ಟಿಸಿ ಹೇಳಿದೆ. ವೋಲ್ವೋ ಬಸ್ ಸಂಚಾರ ಇರಲಿದ್ದು, ಎ.ಸಿ. ಬಳಸುವುದಿಲ್ಲ. ಜಿಲ್ಲೆಯ ಎಲ್ಲಾ ಬಸ್ ನಿಲ್ದಾಣಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಬಸ್‌ಗಳನ್ನು ಸಹ ಶುದ್ಧೀಕರಿಸಲಾಗಿದೆ. ಕೊರೊನಾ ಮುಕ್ತ ಜಿಲ್ಲೆಗಳಲ್ಲಿ ಬಸ್ ಸಂಚಾರ ಇರಲಿದೆ. ಅಂತರ್ ಜಿಲ್ಲಾ ಸಂಚಾರ ಹಾಗೂ ಜಿಲ್ಲೆಯಲ್ಲಿ ಬಸ್ ಸಂಚಾರ ಇರಲಿದೆ. ವಾರಾಂತ್ಯದ ಕರ್ಫ್ಯೂ ಮತ್ತು ರಾತ್ರಿ ಕರ್ಫ್ಯೂ ಬಸ್‌ಗಳಿಗೆ ಅನ್ವಯಿಸುವುದಿಲ್ಲ ಎಂದು ಉತ್ತರ ಕನ್ನಡ ಜಿಲ್ಲಾ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.
ಅಂಗಡಿಗಳ ವಹಿವಾಟಿಗೆ ಹೆಚ್ಚಿಗೆ ಸಮಯ: ಅಂಗಡಿಗಳು ಬೆಳಗ್ಗೆ 6 ರಿಂದ ಸಂಜೆ 6ರತನಕ ತೆರೆಯಲಿವೆ. ಬಾರ್, ರೆಸ್ಟೋರೆಂಟ್, ಅಗತ್ಯ ವಸ್ತುಗಳ ಅಂಗಡಿ ತೆರೆದಿರಲಿವೆ. ಜನರು ಅಂತರ ಕಾಪಾಡಿ, ಮಾಸ್ಕ್ ಧರಿಸಿ ಅಗತ್ಯ ವಸ್ತು ಖರೀದಿಸಬಹುದು. ಬಟ್ಟೆ ಅಂಗಡಿ ಚಿನ್ನದ ಅಂಗಡಿ ತೆರೆದಿರಲಿವೆ. ಮದುವೆಗೆ 20 ಜನ ಮಾತ್ರ ಹಾಜರು ಇರಬಹುದು. ಉಳಿದಂತೆ ವಾರಾಂತ್ಯದ ಕರ್ಫ್ಯೂ ಇರಲಿದೆ. ರಾತ್ರಿ ಕರ್ಫ್ಯೂ ಸಹ ಮುಂದುವರಿಯಲಿದೆ. ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ತೆರೆಯುವಂತಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ. ಜು.5 ರವರೆಗೆ ಇದೆ ಸ್ಥಿತಿ ಇರಲಿದೆ. ಆ ವೇಳೆಗೆ ಕೊರೊನಾ ಸಂಪೂರ್ಣ ಮರೆಯಾದಲ್ಲಿ ಸರ್ಕಾರದ ನಿರ್ದೇಶನ ನೋಡಿ, ಇನ್ನಷ್ಟು ಬದಲಾವಣೆ ತರಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಉದಯವಾಣಿಗೆ ತಿಳಿಸಿದ್ದಾರೆ.