ಹುಬ್ಬಳ್ಳಿ: ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ತಗ್ಗುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಲಾಕ್‌ಡೌನ್ ಗೆ ಮುಂದಾಗಿದ್ದರೂ ಜನರು ಮಾತ್ರ ಇದಕ್ಕೆ ಕ್ಯಾರೇ ಎನ್ನುತ್ತಿಲ್ಲ.
ಸರಕಾರ ಅನ್ ಲಾಕ್‌ಗೆ ಮುಂದಾಗಿರುವಾಗ ನಗರದಲ್ಲಿ ಜನರ ಓಡಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆತಂಕ ಹೆಚ್ಚಿದೆ. ಕಟ್ಟುನಿಟ್ಟಿನ ಲಾಕ್‌ಡೌನ್ ನಂತರ ದಿನಸಿ, ಹಾಲು, ಹೊಟೇಲ್ ಪಾರ್ಸಲ್ ಸೇರಿದಂತೆ ಕೆಲ ಅಗತ್ಯ ಕಾರ್ಯಗಳಿಗೆ ಜಿಲ್ಲಾಡಳಿತ ಒಂದಿಷ್ಟು ಸಡಿಲಿಕೆ ಮಾಡುತ್ತಿದ್ದಂತೆ ಜನರ ಓಡಾಟ ಹೆಚ್ಚಾಗುತ್ತಿದೆ. ನಗರದ ಬಹುತೇಕ ಕಡೆಗಳಲ್ಲಿ ಪೊಲೀಸರು ಚೆಕ್‌ಪೋಸ್ಟ್ ಸ್ಥಾಪಿಸಿದ್ದರೂ ಇವುಗಳನ್ನು ತಪ್ಪಿಸಿ ಓಡಾಡುತ್ತಿರುವುದು ಕಂಡು ಬರುತ್ತಿದೆ.
ಜ.7ರಿಂದ ಒಂದಿಷ್ಟು ಸಡಿಲಿಕೆ ನೀಡಿದ್ದೇ ತಡ ವಾಹನಗಳು, ಜನರ ಓಡಾಟ ಹೆಚ್ಚಾಗುತ್ತಿದೆ. ಚೆಕ್‌ಪೋಸ್ಟ್ ಗಳ ಹೊರತಾಗಿ ಇನ್ನಿತರೆ ಕಾರ್ಯದಲ್ಲಿ ಪೊಲೀಸರ ಗಸ್ತು ಕಡಿಮೆಯಾಗಿರುವುದು ಇದಕ್ಕೆ ಕಾರಣವಾಗಿದೆ. ಪೊಲೀಸರು ಯಾವ ರಸ್ತೆಯಲ್ಲಿ ಚೆಕ್‌ಪೋಸ್ rಗಳನ್ನು ಸ್ಥಾಪಿಸಿದ್ದಾರೆ. ಎಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ ಎಂಬುದನ್ನರಿತು ಇವುಗಳನ್ನು ತಪ್ಪಿಸಿ ಓಡಾಡುವುದು ಹೆಚ್ಚಾಗಿ ಕಂಡು ಬರುತ್ತಿದೆ. ಚೆಕ್‌ಪೋಸ್ಟ್ಗಳ ಬರುವ ಮುನ್ನವೇ ವಾಹನಗಳನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ಬರುವುದು, ಚೆಕ್‌ಪೋಸ್ಟ್‌ಗಳು ಇರುವ ರಸ್ತೆಗಳನ್ನು ಬಿಟ್ಟು ರಾಂಗ್‌ಸೈಡ್ ವಾಹನಗಳನ್ನು ಸಂಚರಿಸುವುದು ನಡೆಯುತ್ತಿದೆ. ಹೀಗಾಗಿ ಇಂತಹವರನ್ನು ಹಿಡಿದು ತಪಾಸಿಸುವುದು ಪೊಲೀಸರಿಗೆ ಕಷ್ಟಸಾಧ್ಯವಾಗಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು, ಈ ಸಂದರ್ಭದಲ್ಲಿ ಜನರು ಬೇಕಾಬಿಟ್ಟಿ ಓಡಾಟಕ್ಕೆ ಮುಂದಾಗದೆ ಸ್ವಯಂ ಕಡಿವಾಣ ಹಾಕಿಕೊಳ್ಳಬೇಕಿದೆ.
ಈಗಾಗಲೇ ಶೇ.5ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಒಂದಿಷ್ಟು ಅನ್‌ಲಾಕ್ ಗೆ ಸರಕಾರ ಚಿಂತನೆ ನಡೆಸುತ್ತಿರುವ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸೋಂಕಿತರ ದರ ಕಡಿಮೆಯಾಗದಿದ್ದರೆ ಮತ್ತೂಂದಿಷ್ಟು ದಿನ ಲಾಕ್‌ಡೌನ್ ಮುಂದೂಡುವ ಸಾಧ್ಯತೆಗಳಿವೆ. ಹೀಗಾಗಿ ಜನರು ವಿನಾಕಾರಣ ಹೊರ ಬರದೆ ಲಾಕ್‌ಡೌನ್ ಗೆ ಸ್ಪಂದಿಸಬೇಕೆಂಬುದು ಅಧಿಕಾರಿಗಳ ಮನವಿಯಾಗಿದೆ.