ಧಾರವಾಡ: ಗಿಜಿಗಿಜಿ ಎನ್ನುವಷ್ಟು ಪ್ರಯಾಣಿಕರನ್ನು ತುಂಬಿಕೊಂಡು ಸುತ್ತಾಡಿದ ಸಾರಿಗೆ ಬಸ್ ಗಳು, ತಮ್ಮ ತಲೆಯ ಮೇಲೂ ಗ್ರಾಮೀಣ ಪ್ರಯಾಣಿಕರನ್ನು ಹೊತ್ತು ಓಡಾಡಿದ ಟಂಟಂಗಳು, ದಾಖಲೆ ಪ್ರಮಾಣ ದಲ್ಲಿ ಖರೀದಿಯಾದ ಕಬ್ಬಿಣ, ಸಿಮೆಂಟ್‌ನಂತಹ ಕಟ್ಟಡ ಸಾಮಗ್ರಿಗಳು, ಉತ್ತಮ ವ್ಯಾಪಾರ ಕುದುರಿಸಿದ ಹಾರ್ಡ್‌ವೇರ್ ಅಂಗಡಿಗಳು, ಮಾಲೀಕರ ಬಾಯಿಗೆ ಮೊದಲ ದಿನವೇ ಸಿಹಿ ಹಾಕಿದ ಮಿಠಾಯಿ ಮಾರ್ಕೆಟ್.
ಬರೋಬ್ಬರಿ ಎರಡು ತಿಂಗಳ ನಂತರ ನಗರ ಅನ್‌ಲಾಕ್ ಆಗಿದ್ದು, ವ್ಯಾಪಾರ-ವಹಿವಾಟು ಮೊದಲ ದಿನವೇ ಉತ್ತಮವಾಗಿತ್ತು. ಹಣ್ಣಿನ ಮಾರುಕಟ್ಟೆ, ಕಾಯಿಪಲ್ಲೆ ಮಾರುಕಟ್ಟೆ, ಅಕ್ಕಿಪೇಟೆ, ಬಳೆಪೇಟೆ, ಟಿಕಾರೆ ರಸ್ತೆ, ವಿಜಯಾ ರಸ್ತೆ, ಸುಭಾಷ ರಸ್ತೆಗಳು ಜನರಿಂದ ತುಂಬಿದ್ದವು. ಬೆಳಗ್ಗೆ 7 ರಿಂದಲೇ ಹೂವಿನ ಮಾರುಕಟ್ಟೆ ರಂಗೇರಿತ್ತು. ತರಕಾರಿ ಖರೀದಿ ಮತ್ತು ಮಾರಾಟ ಜೋರಾ ಗಿತ್ತು. ಕಬ್ಬಿಣ, ತಂತಿಬೇಲಿ, ಸಿಮೆಂಟ್, ಕೃಷಿ ಚಟುವಟಿಕೆಗಳಿಗೆ ಬಳಕೆಯಾಗಿರುವ ಪೈಪ್ ಗಳು ಸೇರಿದಂತೆ ವಿವಿಧ ಸಾಮಗ್ರಿಗಳ ಖರೀದಿ ಹೆಚ್ಚಿತ್ತು.
ಸಾಮಾನ್ಯ ದಿನಗಳಂತೆ ಭಾಸ: ನಗರದಲ್ಲಿಯೇ ಅತೀ ದೊಡ್ಡ ಶಾಪಿಂಗ್ ಬೀದಿ ಸುಭಾಷ ರಸ್ತೆಯಲ್ಲಿ ಅನ್‌ಲಾಕ್‌ನ ಮೊದಲ ದಿನವೇ ಎಲ್ಲಾ ಅಂಗಡಿ ಮುಂಗಟ್ಟುಗಳು ತೆರೆದುಕೊಂಡಿದ್ದರಿಂದ ಸಾಮಾನ್ಯ ದಿನಗಳಂತೆ ಗೋಚರಿಸಿತು. ಹಳ್ಳಿಗರು ಕಾಳು, ಕಡಿ ಮಾರಾಟದಲ್ಲಿ ತೊಡಗಿದ್ದರೆ, ನಗರವಾಸಿಗಳು ಭರ್ಜರಿ ಖರೀದಿಯಲ್ಲಿ ತೊಡಗಿದ್ದರು. ಗಾಂಧಿ ಚೌಕ್‌ನಲ್ಲಿರುವ ಬಂಗಾರ ಬಜಾರ್ ಕೂಡ ಸೋಮವಾರ ಕಳೆಕಟ್ಟಿತ್ತು. ಇನ್ನುಳಿದಂತೆ ಬ್ಯಾಂಕುಗಳು, ಸೂಪರ್ ಮಾರುಕಟ್ಟೆ, ಮೇದಾರಿಕೆ ವಸ್ತುಗಳ ಮಾರಾಟ, ಮಟನ್ ಮಾರುಕಟ್ಟೆಗೆ ಜನರು ಮುಗಿಬಿದ್ದಿದ್ದರು.
ನಗರ ಪ್ರದೇಶದಲ್ಲಿ ಹೆಚ್ಚು ಜನರು ಸ್ವಯಂಪ್ರೇರಿತರಾಗಿ ಕೋವಿಡ್ ತಡೆ ಮುಂಜಾಗೃತಾ ಕ್ರಮಗಳನ್ನು ಅನುಸರಿಸಿದ್ದು ಕಂಡು ಬಂತು. ಹೋಟೆಲ್‌ಗಳಲ್ಲಿ ಶೇ.50 ಜನರು ಮಾತ್ರ ಕುಳಿತು ಉಪಹಾರ ಸೇವಿಸಬೇಕು ಎನ್ನುವ ನಿಯಮ ಪಾಲನೆ ಮಾಲೀಕರಿಂದ ನಿರ್ವಹಿಸುವುದು ಕೊಂಚ ಕಷ್ಟವೇ ಆಗಿತ್ತು. ಹಳ್ಳಿಗಳಿಂದ ಬಂದ್ ಬಸ್‌ಗಳಲ್ಲಿ, ಕೃಷಿ ಪರಿಕರಗಳನ್ನು ಟ್ರ್ಯಾಕ್ಟರ್‌ಗಳ ಮೂಲಕ ಸಾಗಿಸುವಾಗಲೂ ಕೋವಿಡ್ ನಿಯ ಮಗಳ ಪಾಲನೆ ಸರಿಯಾಗಿ ಆಗಲೇ ಇಲ್ಲ.