Advertisement

ರಸಗೊಬ್ಬರ ಅನ್‌ಲೋಡ್‌ಗೆ ಕಾರ್ಮಿಕರ ಬರ

06:27 PM Jun 01, 2021 | Team Udayavani |

ಹೇಮರಡ್ಡಿ ಸೈದಾಪುರ

Advertisement

ಹುಬ್ಬಳ್ಳಿ: ಜಿಲ್ಲೆಯಲ್ಲಿನ ಕಟ್ಟುನಿಟ್ಟಿನ ಕರ್ಫ್ಯೂ ಪರಿಣಾಮ ನವಲೂರು ಗೂಡ್‌ಶೆಡ್‌ನ‌ಲ್ಲಿ ಹಮಾಲಿ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿದೆ. ಜಿಲ್ಲೆಯ ವಿವಿಧ ಗ್ರಾಮಗಳಿಂದ ಬರುತ್ತಿದ್ದ ಕಾರ್ಮಿಕರು ನಗರದಿಂದ ದೂರ ಉಳಿದಿದ್ದಾರೆ. ಇದರಿಂದಾಗಿ ಸರಕು ಸಾಗಣೆ ರೈಲುಗಳ ಮೂಲಕ ನಗರಕ್ಕೆ ಬರುವ ಅಗತ್ಯ ವಸ್ತುಗಳ ಅನ್‌ಲೋಡ್‌ ವಿಳಂಬವಾಗುತ್ತಿದೆ.

ಇನ್ನೂ 9 ಜಿಲ್ಲೆಗಳಿಗೆ ಪೂರೈಕೆಯಾಗುವ ರಸಗೊಬ್ಬರಕ್ಕೂ ಈ ಬಿಸಿ ತಟ್ಟಿದೆ. ಚೆಕ್‌ಪೋಸ್ಟ್‌ಗಳಲ್ಲಿ ಕಾರಣ ಹೇಳಬೇಕು, ಇಲ್ಲದಿದ್ದರೆ ಲಾಠಿ ಏಟು ಎನ್ನುವ ಭಯ ಒಂದೆಡೆಯಾದರೆ ನಗರ ಪ್ರದೇಶದಲ್ಲಿ ಸೋಂಕಿತ ಪ್ರಕರಣಗಳ ಭೀತಿ ಕಾರಣ ಗ್ರಾಮಗಳಿಂದ ಬರುತ್ತಿರುವ ಹಮಾಲಿ ಕಾರ್ಮಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಹೀಗಾಗಿ ನವಲೂರಿನ ಗೂಡ್‌ಶೆಡ್‌ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದ್ದು, ನಿಗದಿತ ಸಮಯಕ್ಕೆ ಅನ್‌ಲೋಡ್‌ ಆಗಬೇಕಾಗಿದ್ದ ವಸ್ತುಗಳು ಮೂರ್‍ನಾಲ್ಕು ಗಂಟೆ ವಿಳಂಬವಾಗುತ್ತಿವೆ. ಇದರಿಂದ ಪೂರೈಕೆಗೂ ಸಮಸ್ಯೆಯಾಗುತ್ತಿದೆ.

ನವಲೂರು ಗೂಡ್‌ಶೆಡ್‌ ಮೂಲಕ ಜಿಲ್ಲೆ ಸೇರಿದಂತೆ ಸುತ್ತಲಿನ 9 ಜಿಲ್ಲೆಗಳಿಗೆ ಅಗತ್ಯ ವಸ್ತುಗಳು ಪೂರೈಕೆಯಾಗುತ್ತವೆ. ಇದರಲ್ಲಿ ಪ್ರಮುಖವಾಗಿ ಸಿಮೆಂಟ್‌, ವಾಹನ, ಯಂತ್ರಗಳನ್ನು ಇಲ್ಲಿ ಅನ್‌ಲೋಡ್‌ ಮಾಡಲಾಗುತ್ತಿದೆ. ಇಲ್ಲಿಂದ ಸಕ್ಕರೆ ಸೇರಿದಂತೆ ಕೆಲ ವಸ್ತುಗಳನ್ನು ಬೇರೆಡೆಗೆ ಲೋಡ್‌ ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಹಿಂದೆ ಸುಮಾರು 150 ಹಮಾಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಇದೀಗ ಕರ್ಫ್ಯೂ ಹಿನ್ನೆಲೆಯಲ್ಲಿ ವಿವಿಧ ಗ್ರಾಮಗಳಿಂದ ಬರುತ್ತಿದ್ದ ಸುಮಾರು 60ಕ್ಕೂ ಹೆಚ್ಚು ಕಾರ್ಮಿಕರು ಕೆಲಸದಿಂದ ದೂರ ಉಳಿದಿದ್ದಾರೆ.

ರಸಗೊಬ್ಬರಕ್ಕೆ ತಟ್ಟಿದ ಬಿಸಿ: ನವಲೂರು ಗೂಡ್‌ ಶೆಡ್‌ ಬಿಹಾರ ಮೂಲದ ಸುಮಾರು 90 ಕ್ಯಾಂಪ್‌ ಕಾರ್ಮಿಕರ ಮೇಲೆ ನಿರ್ವಹಣೆಯಾಗುತ್ತಿದೆ. ಸುಮಾರು 50-60 ಕಾರ್ಮಿಕರ ಸಮಸ್ಯೆ ಉಂಟಾಗಿದೆ. ಈ ಗೂಡ್‌ಶೆಡ್‌ ಮೂಲಕವೇ ಸುತ್ತಲಿನ 9 ಜಿಲ್ಲೆಗಳಿಗೆ ಪೂರ್ಣ ಹಾಗೂ ಭಾಗಶಃ ರಸಗೊಬ್ಬರ ಪೂರೈಕೆಯಾಗುತ್ತಿದೆ. ಆದರೆ ಕಾರ್ಮಿಕರ ಸಮಸ್ಯೆಯಿಂದ ನಿತ್ಯ 1-2 ರೇಕ್‌ಗಳ ಮೂಲಕ ಬರುವ ಸುಮಾರು 4-5 ಸಾವಿರ ಟನ್‌ ರಸಗೊಬ್ಬರ ಅನ್‌ಲೋಡ್‌ ವಿಳಂಬವಾಗುತ್ತಿದೆ. ಇದರಿಂದ ಸಾಗಾಟದ ಮೇಲೂ ಪರಿಣಾಮ ಉಂಟಾಗುತ್ತಿದೆ. ಸಕಾಲಕ್ಕೆ ರೈತರಿಗೆ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ದೂರದ ಜಿಲ್ಲೆಗಳಿಗೆ ಪೂರೈಕೆಯಲ್ಲಿ ಸಾಕಷ್ಟು ಸಮಸ್ಯೆ ಉಂಟಾಗಿದೆ. ಹೀಗಾಗಿ ಕೆಲವೆಡೆ ರೈತರು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಉಂಟಾಗಿದೆ.

Advertisement

ಪ್ರಸ್ತಾಪಿಸಿದರೂ ಪ್ರಯೋಜನವಿಲ್ಲ: ರಸಗೊಬ್ಬರ ಅನ್‌ಲೋಡ್‌, ಪೂರೈಕೆಯಲ್ಲಿ ಆಗುತ್ತಿರುವ ಸಮಸ್ಯೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಜಿಲ್ಲಾ ಧಿಕಾರಿ ನಿತೇಶ ಪಾಟೀಲ ಹಾಗೂ ಜಿಲ್ಲೆಯ ಜನಪ್ರತಿನಿ ಧಿಗಳ ಸಭೆಯಲ್ಲಿ ಪ್ರಸ್ತಾಪವಾಗಿತ್ತು. ಗ್ರಾಮಗಳಿಂದ ಬರುವ ಕಾರ್ಮಿಕರಿಗೆ ಚೆಕ್‌ಪೋಸ್ಟ್‌ಗಳಲ್ಲಿ ತಡೆಯಲಾಗುತ್ತಿದೆ. ಅವರ ಬಳಿ ಯಾವುದೇ ಗುರುತಿನ ಚೀಟಿ ಇಲ್ಲದ ಪರಿಣಾಮ ಬಿಡುತ್ತಿಲ್ಲ. ಇದಕ್ಕಾಗಿ ವಾಹನ ವ್ಯವಸ್ಥೆ ಮಾಡಿದರೆ ಅವುಗಳಿಗೆ ಪಾಸ್‌ ಇಲ್ಲ ಎಂದು ದಂಡ ಹಾಕಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಕಾರ್ಮಿಕರು, ಲಾರಿ ಚಾಲಕರು ಬರಲು ಸಾಧ್ಯವಾಗುತ್ತಿಲ್ಲ ಎಂದು ನವಲೂರು ಗೂಡ್‌ಶೆಡ್‌ ಗ್ರಾಹಕರ ಹಾಗೂ ಗುತ್ತಿಗೆದಾರರ ಅಸೋಸಿಯೇಶನ್‌ ಕಾರ್ಯದರ್ಶಿ ನಿಜಗುಣಿ ಬೇವೂರು ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದರು. ಆದರೆ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಎನ್ನುತ್ತಾರೆ ಅವರು.

ಹೆಚ್ಚುವರಿ ಹೊರೆ: ಸದ್ಯ ಇರುವ ಕಾರ್ಮಿಕರನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಬಿಹಾರಿ ಮೂಲದ ಕಾರ್ಮಿಕರಿಗೆ ಶೆಡ್‌, ಊಟ, ನೀರು, ಸಕಾಲಕ್ಕೆ ವಿವಿಧ ಸೌಲಭ್ಯಗಳನ್ನು ನೀಡಿ ಉಳಿಸಿಕೊಳ್ಳಲಾಗಿದೆ. ಅಸೋಸಿಯೇಶನ್‌ ಗೆ ಇದೊಂದು ಹೊರೆಯಾಗಿದೆ. ಇನ್ನೂ ಕಾರ್ಮಿಕರ ಸಮಸ್ಯೆಯಿಂದ ಸಕಾಲಕ್ಕೆ ಅನ್‌ ಲೋಡ್‌ ಮಾಡದ ಕಾರಣಕ್ಕೆ ಡೆಮ್ರೇಜ್‌ ಹಾಗೂ ವಾರ್ಪೇಜ್‌ ಶುಲ್ಕವನ್ನು ರೈಲ್ವೆ ಇಲಾಖೆ ವಿಧಿಸುತ್ತಿದೆ. ವಿಳಂಬವಾಗುವ ಪ್ರತಿ ಗಂಟೆಗೆ 6 ಸಾವಿರ ರೂ. ವಿಧಿ ಸಲಾಗುತ್ತಿದೆ. ಇದರಿಂದ ನಿತ್ಯ 25-30 ಸಾವಿರ ರೂ. ದಂಡ ಪಾವತಿ ಮಾಡುವಂತಾಗಿದೆ. ಹಿಂದಿನ ವರ್ಷ ಕೋವಿಡ್‌ ಕಾರಣದಿಂದ ಡೆಮ್ರೇಜ್‌ ಹಾಗೂ ವಾಪೇìಜ್‌ ಶುಲ್ಕ ಇರಲಿಲ್ಲ. ಆದರೆ ಎರಡನೇ ಅಲೆಯ ತೀವ್ರತೆಯಿಂದ ಕೂಡಿದ್ದರೂ ವಿನಾಯಿತಿ ನೀಡುತ್ತಿಲ್ಲ. ಲಾಕ್‌ಡೌನ್‌ ಪೂರ್ಣಗೊಳ್ಳುವವರೆಗೆ ಡೆಮ್ರೇಜ್‌ ಹಾಗೂ ವಾಪೇìಜ್‌ ಶುಲ್ಕ ವಿನಾಯಿತಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಕೃಷಿ ಇಲಾಖೆಯಿಂದ ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದಾರೆ. ಈ ಕುರಿತು ರೈಲ್ವೆ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಅಗತ್ಯ ವಸ್ತುಗಳ ಪೂರೈಕೆ, ಕಾರ್ಮಿಕರ ಓಡಾಟಕ್ಕೆ ಸಮಸ್ಯೆಯಾಗದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಅಸೋಸಿಯೇಶನ್‌ ಅಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next