Advertisement
ನಿಜಕ್ಕೂ ಈ ಹಾಡು ನಮ್ಮ ಜಿಲ್ಲೆಯ ಮಟ್ಟಿಗೆ ಅಕ್ಷರಶಃ ಹೋಲಿಕೆಯಾಗುತ್ತದೆ. ಇಲ್ಲಿ ಜನರು ಟಂಟಂ ವಾಹನಗಳ ಒಳಗೆ, ಹೊರಗೆ ಅಷ್ಟೇ ಅಲ್ಲ ಮೇಲೆಯೂ ಏರಿ ಹೋಗುವುದು ಮಾಮೂಲಾಗಿದೆ.
Related Articles
Advertisement
ಅತಿ ಹೆಚ್ಚು ಪ್ರಯಾಣಿಕರು: ಸಾರಿಗೆ ಸಂಸ್ಥೆ ಬಸ್‌ಗಳ ಅವ್ಯವಸ್ಥೆಗೆ ಬೇಸತ್ತು ಜನರು ಖಾಸಗಿ ಟಂಟಂ ವಾಹನಗಳನ್ನು ಅವಂಬಿಸಿರುವುದನ್ನೇ ಟಂಟಂ ವಾಹನದವರು ಉಪಯೋಗ ಮಾಡಿಕೊಂಡಿದ್ದಾರೆನ್ನಬಹುದು. ನಿಗದಿತ ಸಂಖ್ಯೆಗಿಂತ ಎರಡ್ಮೂರು ಪಟ್ಟು ಹೆಚ್ಚು ಪ್ರಯಾಣಿಕರನ್ನು ವಾಹನದಲ್ಲಿ ಹಾಕಿಕೊಂಡು ಸಾಗುತ್ತಾರೆ. ಟಂಟಂ ವಾಹನದ ಸೀಟುಗಳ ಮಿತಿ ಕೇವಲ ನಾಲ್ಕು. ಆದರೆ, ಟಂಟಂನ ಅತಿ ಚಿಕ್ಕ ಸ್ಥಳದಲ್ಲೇ ಅತಿ ಹೆಚ್ಚು ಪ್ರಯಾಣಿಕರನ್ನು ತುಂಬುತ್ತಾರೆ. ಇಷ್ಟೇ ಅಲ್ಲ ವಾಹನದ ಹಿಂದೆ, ವಾಹನ ಪಕ್ಕದ ಬಾಗಿಲುಗಳ ಮೇಲೆ, ವಾಹನದ ಮೇಲೆ ಆರೆಂಟು ಜನ ಹೀಗೆ ಸುಮಾರು 25ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೇರಿಕೊಂಡು ಟಂಟಂಗಳು ಸಾಗುತ್ತವೆ.
ಟಂಟಂ ವಾಹನಗಳಲ್ಲಿ ಎಷ್ಟೊಂದು ಪ್ರಯಾಣಿಕರನ್ನು ತುಂಬುತ್ತಾರೆಂದರೆ ರಸ್ತೆ ಮೇಲೆ ಸಂಚರಿಸುವಾಗ ವಾಹನವೇ ಕಾಣಲ್ಲ. ಜನರ ಗುಂಪೊಂದು ಹೋಗುತ್ತಿದ್ದಂತೆ ಭಾಸವಾಗುತ್ತದೆ. ಟಂಟಂ ಪ್ರಯಾಣಿಕರಿಂದಲೇ ಮುಚ್ಚಿಕೊಂಡಿರುತ್ತದೆ. ಚಾಲಕ ತನ್ನ ಅಕ್ಕಪಕ್ಕದ ಜಾಗದಲ್ಲೂ ನಾಲ್ಕೈದು ಜನರನ್ನು ಕೂಡ್ರಿಸಿಕೊಂಡು ಕನ್ನಡಿಯಲ್ಲಿ ಇಣುಕಿ ನೋಡುತ್ತ, ಸಂದಿಯಲ್ಲೇ ಹ್ಯಾಂಡಲ್ ತಿರುಗಿಸುತ್ತ ವಾಹನ ಚಲಾಯಿಸುತ್ತಾನೆ. ಹಿಂದೆ ಬರುವ ವಾಹನಗಳ ಬಗ್ಗೆ ಚಾಲಕನಿಗೆ ಗೊತ್ತೇ ಆಗಲ್ಲ. ಅಂದಾಜಿನ ಪ್ರಕಾರ ವಾಹನ ಚಲಾಯಿಸುತ್ತಾನೆ.
ಅಪಾಯ ಕಟ್ಟಿಟ್ಟ ಬುತ್ತಿ: ಶಾಲಾ ಮಕ್ಕಳು, ಮಹಿಳೆಯರು, ವೃದ್ಧರು ಎಲ್ಲರನ್ನು ಒತ್ತೂತ್ತಾಗಿ ಕೂಡ್ರಿಸಿಕೊಂಡು ಸಂಚರಿಸುವ ಈ ವಾಹನಗಳು ಅಪಾಯದ ಬಗ್ಗೆ ಕಿಂಚಿತ್ತೂ ಯೋಚಿಸದೆ ಸಾಗುತ್ತವೆ. ವಾಹನ ಮಾಲೀಕರು ಪ್ರಯಾಣಿಕರನ್ನು ಹೆಚ್ಚು ತುಂಬಿ ಹೆಚ್ಚು ಹಣ ಗಳಿಸುವ ಉಮೇದಿಯಲ್ಲಿ ಪ್ರಯಾಣಿಕರ ಸುಖಕರ ಪ್ರಯಾಣವನ್ನು ಮೈಮರೆಯುವುದು ಅಷ್ಟೇ ಮಾಮೂಲು. ಅಪಾಯವನ್ನು ಅಂಗೈಯಲ್ಲಿಟ್ಟುಕೊಂಡು ಸಂಚರಿಸುವ ಟಂಟಂಗಳ ಕಡೆಗೇ ಜನರು ಹೆಚ್ಚು ಆಕರ್ಷಿತರಾಗಿ ಹೋಗುವುದು ಇಲ್ಲಿ ವಿಪರ್ಯಾಸ.
ಜಿಲ್ಲೆಯಲ್ಲಿ ಪ್ರತಿವರ್ಷ ಸರಾಸರಿ 50ಕ್ಕೂ ಹೆಚ್ಚು ಅಪಘಾತಗಳು ಟಂಟಂ ವಾಹನಗಳಿಂದ ನಡೆಯುತ್ತಿದ್ದು, ಒಂದೆರಡಾದರೂ ಪ್ರಾಣಾಪಾಯ ಪ್ರಕರಣ ಸಂಭವಿಸುತ್ತದೆ. ಆದರೂ ಜನರು ಟಂಟಂ ವಾಹನಗಳನ್ನು ಹತ್ತುವುದು ಬಿಟ್ಟಿಲ್ಲ. ಟಂಟಂ ವಾಹನ ಮಾಲೀಕರು ಅತಿ ಹೆಚ್ಚು ಪ್ರಯಾಣಿಕರನ್ನು ತುಂಬುವುದೂ ನಿಲ್ಲಿಸಿಲ್ಲ.
ಜಾಣ ಕುರುಡು: ಪ್ರಾದೇಶಿಕ ಸಾರಿಗೆ ಇಲಾಖೆಯ ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ 1500ರಷ್ಟು ಟಂಟಂಗಳಿದ್ದು, ಬಹುತೇಕ ಎಲ್ಲ ತಾಲೂಕುಗಳನ್ನು ಟಂಟಂಗಳಲ್ಲಿ ಅತಿ ಹೆಚ್ಚು ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತವೆ. ಅಂಥ ವಾಹನಗಳ ಮೇಲೆ ಕ್ರಮ ಕೈಗೊಳ್ಳಬೇಕಾದ ಪೊಲೀಸ್ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಜಾಣ ಕುರು ಡುತನ ಪ್ರದರ್ಶಿಸುತ್ತಿರುವುದು ಖೇದಕರ ಸಂಗತಿ.
ಜಿಲ್ಲೆಯಲ್ಲಿ 5000 ಪ್ರಯಾಣಿಕರ ಆಟೋ ರಿಕ್ಷಾಗಳಿವೆ. ಇದರಲ್ಲಿ ಶೇ. 30 ಟಂಟಂ ಇರಬಹುದು. ಮೂರು ಚಕ್ರದ ಪ್ರಯಾಣಿಕರ ವಾಹನಗಳಿಗೆ ಸರ್ಕಾರ 3+1 ಸೀಟು ಅನುಮತಿ ಇದೆ. ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ಹಾಕಿಕೊಂಡು ಸಂಚರಿಸುವ ರಿಕ್ಷಾಗಳನ್ನು ಹಿಡಿದು ಪ್ರಕರಣ ದಾಖಲಿಸುತ್ತೇವೆ. ಪೊಲೀಸ್ ಇಲಾಖೆ ಈ ಜವಾಬ್ದಾರಿಯನ್ನು ಹೆಚ್ಚಾಗಿ ನಿರ್ವಹಿಸುತ್ತದೆ ಎನ್ನುತ್ತಾರೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು.
•ಎಚ್.ಕೆ. ನಟರಾಜ