Advertisement

ತವರು ಮೈಸೂರಿನಲ್ಲಿ ಸಿದ್ದರಾಮಯ್ಯ ಗಮನಕ್ಕೆ ತರದೇ ಡಿಕೆಶಿ ಸಭೆ: ಬೆಂಬಲಿಗರ ಅಸಮಾಧಾನ

12:09 PM Dec 22, 2021 | Team Udayavani |

ಮೈಸೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ 11 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್‌ ಈಗ ರಣೋತ್ಸಾಹದಲ್ಲಿದೆ. ಮುಂದಿನ ಅಸೆಂಬ್ಲಿ ಚುನಾವಣೆ ಎದುರಿಸುವ ರಣೋತ್ಸಾಹ ದಲ್ಲಿರುವ ಕಾಂಗ್ರೆಸ್ಸಿಗೆ ರಾಜ್ಯದಲ್ಲಿ ನಾಯಕತ್ವದ ಪ್ರತಿಷ್ಠೆಯೇ ಸಂಕಟ ತಂದೊಡ್ಡುವ ಸಾಧ್ಯತೆ ಇದೆ.

Advertisement

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಧ್ಯೆ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ನಡೆಸುವ ಸಂಬಂಧ ಮೈಸೂರಿನಲ್ಲಿ ಸಭೆ ಕರೆಯುವ ವಿಚಾರದಲ್ಲಿ ಅಸಮಾಧಾನ ಮೂಡಿದೆ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಯಾಗುವ ಆಸೆ ಹೊತ್ತಿದ್ದಾರೆ.

ಶಿವಕುಮಾ ರ್‌ ಮುಖ್ಯಮಂತ್ರಿಯಾಗಬೇಕೆಂದು ಬಯಸಿದ್ದಾರೆ. ಮೈಸೂರಿನಲ್ಲಿ ಡಿ.25 ರಂದು ಶಿವಕುಮಾರ್‌ ಪಕ್ಷದ ಸಭೆ ಕರೆದಿದ್ದರು. ಸಿದ್ದರಾಮಯ್ಯ ಅವರ ಗಮನಕ್ಕೆ ತರದೇ ಅವರ ತವರು ಜಿಲ್ಲೆಯಲ್ಲಿ ಈ ಸಭೆ ಕರೆ ಯಲಾಗಿತ್ತು. ಸಿದ್ದರಾಮಯ್ಯ ಅವರನ್ನು ಇದು ಕೆರಳಿಸಿದೆ. ತಮ್ಮ ಅಸಮಾಧಾನವನ್ನು ಹೊರ ಹಾಕಿದ ನಂತರ ಸಭೆ ಮುಂದೂಡಲಾಗಿದೆ. ಒಕ್ಕಲಿಗ ಸಮಾಜದ ಶಿವಕುಮಾರ್‌ ಒಕ್ಕಲಿಗ ಮತದಾರರು ಅಧಿಕ ಸಂಖ್ಯೆಯಲ್ಲಿರುವ ಜಿಲ್ಲೆಗಳಲ್ಲಿ ತಮ್ಮ ಪ್ರಭಾವ ಬೆಳೆಸಿಕೊಳ್ಳಲು ಮುಂದಾಗಿದ್ದಾರೆ.

ಒಕ್ಕಲಿಗ ಪ್ರಾಬಲ್ಯದ ಮೈಸೂರು, ಮಂಡ್ಯ, ಹಾಸನ, ತುಮಕೂರು, ಕೋಲಾರ, ರಾಮನಗರ ಜಿಲ್ಲೆಗಳಲ್ಲಿ ಪಕ್ಷದ ವಿಚಾರದಲ್ಲಿ ಒಕ್ಕಲಿಗ ಸಮಾಜದ ಡಿ.ಕೆ. ಶಿವಕುಮಾರ್‌ ಅವರು ಸಿದ್ದರಾಮಯ್ಯ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮುನ್ನುಗಿದರೆ ಪಕ್ಷದ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗಲಿದೆ. ಪಕ್ಷದಲ್ಲಿ ಇದು ಗೊಂದಲ ಮೂಡಿಸಲಿದೆ. ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ಅವರ ಪ್ರಭಾವ ಹೆಚ್ಚು.

ಇದನ್ನೂ ಓದಿ:- ಹಾಡಹಗಲೇ ಬೈಕಿನಲ್ಲಿ ಬಂದು ಜೆಸಿಬಿಯ ಬಿಡಿಭಾಗವನ್ನೇ ಹೊತ್ತೊಯ್ದ ಚಾಲಾಕಿ ಕಳ್ಳರು

Advertisement

ಇಲ್ಲಿನ ಅನೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಒಕ್ಕಲಿಗ, ಕುರುಬ ಸಮಾಜದ ಮತದಾರರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ, ಸಿದ್ದರಾಮಯ್ಯ- ಶಿವಕುಮಾರ್‌ ಮಧ್ಯೆ ಮನಸ್ತಾಪ ಉಂಟಾದರೆ ಅದು ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಇದನ್ನು ಸಿದ್ದರಾಮಯ್ಯ ಅವರು ಶಿವಕುಮಾರ್‌ ಅವರಿಗೆ ಬೆಳಗಾವಿಯಲ್ಲಿ ಬಹಳ ಸ್ಪಷ್ಟವಾಗಿಯೇ ಹೇಳಿದ್ದಾರೆ.

ಜನಸಮೂಹದ ನಾಯಕ: ಕಾಂಗ್ರೆಸ್‌ನಲ್ಲಿ ಜನಸಮೂಹದ ನಾಯಕರೆಂದರೆ ಸಿದ್ದರಾಮಯ್ಯ ಮಾತ್ರ. ಚುನಾವಣೆಯಲ್ಲಿ ಮತಗಳನ್ನು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ವರ್ಗಾಯಿಸುವ ಶಕ್ತಿ ಸಿದ್ದರಾಮಯ್ಯ ಅವರಿಗೆ ಇದೆ. ಆದರೆ, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‌ ಪಕ್ಷದ ರಾಜ್ಯಾಧ್ಯಕ್ಷರೆಂಬ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ಬಿಟ್ಟು ಪಕ್ಷದ ಸಂಘಟನೆಗೆ ಹೊರಟರೆ ಇದು ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.

ಸಿದ್ದರಾಮಯ್ಯ ಬೆಂಬಲಿಗ ಶಾಸಕರಿಗೆ ಇದರ ಅರಿವು ಚೆನ್ನಾ ಗಿದೆ. ಹೀಗಾಗಿಯೇ ಮೈಸೂರಿನಲ್ಲಿ ಶಿವಕುಮಾರ್‌ ಅವರು ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಸಭೆ ನಡೆ ಸಲು ಮುಂದಾದಾಗ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ಈ ಸಭೆಯನ್ನು ಮುಂದೂಡಬೇಕೆಂದು ಒತ್ತಡ ತಂದರು. ತಮ್ಮ ಅಸಮಾಧಾನವನ್ನು ಶಿವಕುಮಾರ್‌ ಅವರಿಗೆ ತಲುಪಿಸಿದರು.

ಸಂಘಟನಾ ಶಕ್ತಿ: ಶಿವಕುಮಾರ್‌ ಅವರು ಉತ್ಸಾಹಿ. ಅವರಿಗೆ ಸಂಘಟನಾ ಶಕ್ತಿ ಇದೆ. ಆದರೆ, ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮಾಜದ ಮತಗಳನ್ನು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ವರ್ಗಾಯಿಸುವ ರಾಜಕೀಯ ಶಕ್ತಿ ಅವರಿಗೆ ಇನ್ನೂ ದಕ್ಕಿಲ್ಲ. ಮಾಸ್‌ ಲೀಡರ್‌ ಆಗಿ ಅವರಿನ್ನೂ ಹೊರಹೊಮ್ಮಿಲ್ಲ. ಹೀಗಾಗಿ, ಸಿದ್ದರಾಮಯ್ಯ ಅವರ ಜೊತೆಗೆ ಅವರು ಹೆಜ್ಜೆ ಹಾಕಿದರೆ ಪಕ್ಷಕ್ಕೆ ಅನುಕೂಲಕರ ಎಂಬುದು ಸಿದ್ದರಾಮಯ್ಯ ಬೆಂಬಲಿಗ ಶಾಸಕರ ಅಭಿಪ್ರಾಯ.

ಇಲ್ಲದಿದ್ದರೆ ಕಾಂಗ್ರೆಸ್‌ ಕಾರ್ಯಕರ್ತರಿಗೆ, ಮತದಾರರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬುದು ಈ ಶಾಸಕರ ಅನಿಸಿಕೆ. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮಾಜದಲ್ಲಿ ಪ್ರಭಾವಿ ನಾಯಕರಾಗುವ ಶಿವಕುಮಾರ್‌ ಅವರ ಪ್ರಯತ್ನ ಅಷ್ಟು ಸುಲಭವಲ್ಲ. ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರು-ಚಾಮರಾಜನಗರ ಸ್ಥಳೀಯ ಸಂಸ್ಥೆ ಗಳಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಂದ ಪ್ರಥಮ ಪ್ರಾಶಸ್ತ್ಯ ಮತಗಳಲ್ಲಿ ದ್ವಿತೀಯ ಪ್ರಾಶಸ್ತ್ಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್‌ಗೆ ಬಂದಿದ್ದನ್ನು ಇಲ್ಲಿ ಗಮನಿಸಬಹುದು.

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ನಿರ್ಲಕ್ಷಿಸುವಂತಿಲ್ಲ

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ದುರ್ಬಲ ವಾಗಿದ್ದರೂ ಇದರ ಶಕ್ತಿಯನ್ನು ನಿರ್ಲಕ್ಷಿಸುವಂತಿಲ್ಲ. ಜೆಡಿಎಸ್‌ ಸಂದರ್ಭ ಒದಗಿದರೆ ಪುಟಿದೇಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಳೇ ಮೈಸೂ ರು ಭಾಗದಲ್ಲಿ ಒಕ್ಕಲಿಗ ಸಮಾಜದಲ್ಲಿ ಜೆಡಿಎಸ್‌ ಪ್ರಾಬಲ್ಯವಿದೆ. ಒಕ್ಕಲಿಗ ಸಮಾಜದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ಅವರ ಪುತ್ರ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ ಅವರು ಪ್ರಭಾವಿ ನಾಯಕರು. ಇತ್ತೀಚೆಗೆ ನಡೆದ ಮೈಸೂರು-ಚಾಮರಾಜನಗರ ದ್ವಿ ಸದಸ್ಯ ಕ್ಷೇತ್ರ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಿ ಜೆಡಿಎಸ್‌ ಅಭ್ಯರ್ಥಿ ಗೆದ್ದಿರುವುದನ್ನು ಸ್ಮರಿಸಬಹುದು.

– ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next