ಮಂತ್ರಿ ಮಾಲ್‌ನಿಂದ ಹೊರಬಂದರೆ ಸಾಲುಸಾಲು ಆಟೋಗಳು ನಿಂತಿರುತ್ತವೆ. ಆದರೆ ಒಂದೇ ಸಮಸ್ಯೆ ಎಂದರೆ ಅವರು ಎಲ್ಲಿಗೂ ಬರುವುದಿಲ್ಲವಷ್ಟೇ! ಮಾಲ…ನಿಂದ ಹೊರಬರುವವರೆಲ್ಲ ಮಾಲ್‌ನ ಮಾಲೀಕರೇ ಇರಬೇಕು ಅನ್ನುವಂತೆ “ಬಸವೇಶ್ವರ ನಗರ’ ಎಂದ ಕೂಡಲೇ “ಅಯ್ಯೋ, ಅದು ಮನುಷ್ಯರು ವಾಸಿಸುವ ಜಾಗವೇ!?’ ಎನ್ನುವಂತೆ ನಿರ್ಲಕ್ಷ್ಯದಿಂದ ತಲೆ ಕೊಡವುತ್ತಾ ಹೇಳುವ ರೇಟನ್ನು ಕೇಳಿದರೆ ನಖಶಿಖಾಂತ ಉರಿಯೇಳಬೇಕು, ಹಾಗಿರುತ್ತದೆ! ಅವತ್ತೂ ಹಾಗೆಯೇ ಆಯಿತು.
ರಾತ್ರಿ ಒಂಭತ್ತೂವರೆ ಆಗಿದೆ, ಒಂದೇ ಒಂದು ಆಟೋದವರೂ ಬರಲು ಒಪ್ಪುತ್ತಿಲ್ಲ. ಬಂದ ಎಲ್ಲ ಆಟೋಗಳಿಗೂ ಕೈ ಚಾಚಿ ಚಾಚಿ ಸುಸ್ತಾಯ್ತು. ಅಷ್ಟರಲ್ಲಿ ಒಂದು ಆಟೋ ಬಂದಿತು. ದೈನ್ಯತೆಯಿಂದ ನಮ್ಮ ತಿಟ್ಟಿನ ಹೆಸರು ಹೇಳಿದೆ. ಅವರೂ ಅಡ್ಡಡ್ಡ ತಲೆಯಾಡಿಸಿದ ಕೂಡಲೇ ಸಿಟ್ಟು ನೆತ್ತಿಗೇರಿಬಿಟ್ಟಿತು. ಅದೇ ಸಿಟ್ಟಿನಲ್ಲಿ “ಬೆಂಗಳೂರಿನ ಆಟೋದವರನ್ನು ಎಲ್ರೂ ಬಯ್ಯೋದೇ ಸರಿ ನೋಡಿ. ಎಲ್ಲಿಗೆ ಕರೆದ್ರೂ ಬರಲ್ಲ ಅಂತೀರಲಿÅà. ಊಬರ್, ಓಲಾ ಟ್ಯಾಕ್ಸಿ ಕಂಪನಿಗಳು ಬಂದ್ರೂ ಬುದ್ದಿ ಅಂತೂ ಬರಲಿಲ್ಲ ನಿಮಗೆ…’ ಹೀಗೆ ಪುಂಖಾನುಪುಂಖವಾಗಿ ಬಯ್ಯುತ್ತಲೇ ಇದ್ದೆ. ಅವರು ಮುಖ ಸಪ್ಪಗೆ ಮಾಡಿ “ಬರ್ತಿದ್ದೆ ಕಣ್ರೀ. ನಾನು ಎಲ್ಲಿಗೆ ಕರೆದ್ರೂ ಇಲ್ಲ ಅನ್ನಲ್ಲ. ಆದ್ರೆ ತುಂಬಾ ತಲೆನೋವು. ಅದಕ್ಕೇ ಮನೆಗೆ ಹೊರಟಿದ್ದೀನಿ’ ಅಂದರು ಮೆಲುದನಿಯಲ್ಲಿ. ಕೋಪದಿಂದ ಕೂಗಾಡುತ್ತಿದ್ದ ನಾನು ಇನ್ನೂ ಸ್ಟಾಕ್ ಮಾಡಿಟ್ಟುಕೊಂಡಿದ್ದ ಬೈಗುಳಗಳನ್ನು ಏನು ಮಾಡಬೇಕೆಂದು ಗೊತ್ತಾಗದೇ ತಬ್ಬಿಬ್ಟಾಗಿ ನಿಂತೆ.
ಅಷ್ಟರಲ್ಲಿ ಅವರೇ “ನಮ್ಮನೆ ಘಾಟ್ ಹತ್ರ. ಅಲ್ಲೀವರೆಗೆ ಬಿಡಲಾ?’ ಅಂದರು. ವಾಸ್ತು ಬದಲಿಸಿದರೆ ಆಟೋ ಸಿಗಬಹುದು ಅಂತ ಯೋಚಿಸಿ, ನಾನು ಆ ರೀತಿ ಕೂಗಾಡಿದ್ದಕ್ಕೆ ಸಮಜಾಯಿಷಿ ಕೊಡುತ್ತಾ ಹತ್ತಿ ಕೂತೆ. ಬೆಳಗಿನಿಂದ ಬಾಡಿಗೆ ಸರಿಯಾಗಿ ಸಿಕ್ಕದ ಕತೆ, ಕೆ. ಆರ್ ಪುರಂನ ಟ್ರಾಫಿಕ್‌ನಲ್ಲಿ ಸಿಕ್ಕಿ ಎರಡು ಗಂಟೆ ನರಳಿದ ಕತೆ ಎಲ್ಲವನ್ನೂ ಅವರು ಹೇಳಿದರು. ಅಷ್ಟರಲ್ಲಿ ಹೇಳುವುದರಲ್ಲಿ ಹರಿಶ್ಚಂದ್ರ ಘಾಟ್ ತಲುಪಿದ್ದೆ. ಇಳಿದು, ಸಿದ್ಧ ಮಾಡಿಟ್ಟುಕೊಂಡಿದ್ದ ಮಿನಿಮಂ ಚಾರ್ಜ್ ಕೊಡಲು ಹೋದರೆ, ಜಗತ್ತಿನ ಎಂಟನೆಯ ಅದ್ಭುತ! ಆತ ಬೇಡವೆನ್ನುವಂತೆ ಅಡ್ಡಲಾಗಿ ತಲೆಯಾಡಿಸಿದರು. ನಾನು, ಅವರ ಋಣವೇಕೆ ಬೇಕು ಅನ್ನುವ ರೀತಿಯಲ್ಲಿ “ಇಲ್ಲೀವರೆಗೆ ಬಿಟ್ರಲ್ಲ ಸಧ್ಯ! ಅಷ್ಟು ಸಾಕು. ದುಡ್ಡು ಬೇಡವೆಂದರೆ ಹೇಗೆ…’ ಅಂತ ಹೇಳುತ್ತಿರುವಾಗಲೇ, ಆತ ಅದರ ಕಡೆಗೆ ಗಮನವೇ ಕೊಡದಂತೆ ಪಕ್ಕದಲ್ಲಿ ಹೋಗ್ತಿದ್ದ ಆಟೋದೆಡೆಗೆ ಕುತ್ತಿಗೆ ಚಾಚಿ “ಅಣ್ಣ, ಬಸವೇಶ್ವರನಗರಕ್ಕೆ ಬಿಡ್ತೀಯಾ ಇವ್ರನ್ನ? ಒಬ್ರೇ ಲೇಡೀಸು… ಲೇಟಾಗದೆ. ತಲ್ನೋವಿಲ್ದಿದ್ರೆ ನಾನೇ ಹೋಗ್ತಿದ್ದೆ’ ಅಂತ ಕೇಳಿಕೊಂಡರು. ಆತ ಬರುತ್ತೇನೆ ಅಂದರು. ಇಳಿದಾಗಲೂ “ಅಲ್ಲಾ ದುಡ್ಡು ಯಾಕೆ ತಗೊತಿಲ್ಲ ನೀವು… ನಂಗರ್ಥ ಆಗ್ತಿಲ್ಲ’ ಅಂದೆ. “ನೀವು ಕೇಳಿದ ಕಡೆಗೆ ಬಂದಿದ್ರೆ ಅದು ಬೇರೆ ಮಾತು! ಮನೆಗೆ ಬರೋ ದಾರಿ ಅಂತ ಇಲ್ಲಿಗೆ ಬಿಟ್ಟಿದ್ದಕ್ಕೆ ಕಾಸು ಇಸ್ಕೊಳಕ್ಕಾಗತ್ತಾ’ ಅಂದವರೇ ಹೊರಟೇಬಿಟ್ಟರು.
ಬೆಂಗಳೂರಿನಲ್ಲಿ ಕತೆಗಳು ಹುಟ್ಟುವುದಿಲ್ಲ ಅನ್ನುವ ಆಪಾದನೆಯಿದೆ… ಯಾಕೆ ಹುಟ್ಟುವುದಿಲ್ಲ!? ಕಾಣುವ ಕಣ್ಣು, ಕೇಳುವ ಕಿವಿಯಿರಬೇಕಷ್ಟೇ…
ಬಿ ವಿ ಭಾರತಿ