ಬೆಂಗಳೂರು: ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜು ಆಫ್ ಎಂಜಿನಿಯರಿಂಗ್ (ಯುವಿಸಿಇ)ನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊನೆಗೂ ಸಂಬಳ ಪಡೆದಿದ್ದಾರೆ.
ಮಾರ್ಚ್ ತಿಂಗಳಿನಿಂದ ಸಂಬಳವಿಲ್ಲದೆ ಒದ್ದಾಡುತ್ತಿದ್ದ ಸಿಬ್ಬಂದಿ ಖಾತೆಗೆ ಮೇ 26ರಂದು ಮಾರ್ಚ್ ತಿಂಗಳ ಸಂಬಳ ಪಾವತಿಯಾಗಿದೆ. ಆದರೆ ಏಪ್ರಿಲ್ ಸಂಬಳ ಇನ್ನೂ ಬಾಕಿಯಿದೆ.
ರಾಜ್ಯದ ಅತ್ಯಂತ ಹಳೆಯ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾಗಿರುವ ಯುವಿಸಿಇ ಯನ್ನು ಬೆಂಗಳೂರು ವಿವಿಯಿಂದ ಬೇರ್ಪಡಿಸಿ ಆರ್ಥಿಕ ಸ್ವಾವಲಂಬಿ ವಿವಿಯನ್ನಾಗಿ ಮಾಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿತ್ತು. ಅದರಂತೆ 2022ರ ಮಾರ್ಚ್‌ನಲ್ಲಿ ಸಂಸ್ಥೆಯನ್ನು ಸ್ವಾಯತ್ತ ಎಂದು ಘೋಷಿಸಲಾಯಿತು. ಆದರೆ ಯುವಿಸಿಇ ನಿರ್ವಹಣೆಗೆ ಅಗತ್ಯವಾದ ನಿಧಿ ಸಂಗ್ರಹ ಪ್ರಯತ್ನ ವಿಫಲಗೊಂಡಿದ್ದು, ಸಿಬ್ಬಂದಿ ಸಂಬಳಕ್ಕೆ ಪರದಾಡುವ ಸ್ಥಿತಿ ಬಂದಿದೆ. ಇದರಿಂದಾಗಿ ಹಲವು ಯುವಿಸಿಇ ಸಿಬ್ಬಂದಿ ಈಗಾಗಲೇ ನಮ್ಮನ್ನು ಮಾತೃ ಸಂಸ್ಥೆ (ಬೆಂಗಳೂರು ವಿವಿ)ಗೆ ಮರಳಿ ಕಳುಹಿಸಿ ಎಂದು ಬೇಡಿಕೆ ಇಟ್ಟಿದ್ದಾರೆ.
ಯುವಿಸಿಇ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿರುವುದನ್ನು ಖಂಡಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಮಾರ್ಚ್ ನಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಸಹ ನಡೆಸಿದ್ದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪ್ರತಿಭಟನೆಯ ಎಚ್ಚರಿಕೆಯನ್ನು ರವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ರಾಜ್ಯ ಸರ್ಕಾರ ಶೈಕ್ಷಣಿಕ ಮತ್ತು ಆಡಳಿತಾತ್ಮಕ ನಿರ್ವಹಣೆಗಾಗಿ 2023-24ರ ಶೈಕ್ಷಣಿಕ ವರ್ಷಕ್ಕೆ 35 ಕೋಟಿ ರೂ. ನೀಡುವುದಾಗಿ ಏಪ್ರಿಲ್ ಮೊದಲ ವಾರದಲ್ಲಿ ಆದೇಶ ನೀಡಿತ್ತು. ಈ ಪ್ರಕಾರ ಈಗ ಮಾರ್ಚ್ ಸಂಬಳವಾಗಿದೆ.
ಈ ಆರ್ಥಿಕ ವರ್ಷಕ್ಕೆ ಸೀಮಿತವಾಗಿ ಬೆಂಗಳೂರು ವಿವಿಯ ಜತೆಗಿನ ಯಥಾಸ್ಥಿತಿ ಹೊಂದಾ ಣಿಕೆಗೆ ಉನ್ನತ ಶಿಕ್ಷಣ ಇಲಾಖೆ ಆದೇಶವನ್ನು ಹೊರಡಿಸಿದೆ. ಆದರೆ ಯುವಿಸಿಇ ಸುಗಮವಾಗಿ ಕಾರ್ಯನಿರ್ವಹಿಸಲು ವಾರ್ಷಿಕವಾಗಿ 50 ಕೋಟಿ ರೂ. ಬೇಕು ಎಂದು ಆಡಳಿತ ಮಂಡಳಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದರಲ್ಲಿ 47.69 ಕೋಟಿ ಕಾರ್ಯನಿರ್ವಹಣೆ ಮತ್ತು ಬಂಡವಾಳ ವೆಚ್ಚವಾಗಿಯೇ ವಿನಿಯೋಗವಾಗುತ್ತದೆ ಎಂದು ಸರ್ಕಾರಕ್ಕೆ ತಿಳಿಸಲಾಗಿತ್ತು. ಆದರೆ ಸರ್ಕಾರ ಈ ವರ್ಷ ಕೇವಲ 35 ಕೋಟಿ ರೂ ಮಾತ್ರ ನೀಡಿದೆ. ಉಳಿದಂತೆ ಕನಿಷ್ಠ ಪಕ್ಷ 15 ಕೋಟಿ ರೂಗಳ ನಿಧಿಯನ್ನು ಯುವಿಸಿಇಯೇ ಸಂಗ್ರಹಿಸಬೇಕಿದೆ.
ಆದ್ದರಿಂದ ವಿವಿಯ ಸಿಬ್ಬಂದಿ ಸಂಬಳದ ಗೋಳು ಹಾಗೂ ಆರ್ಥಿಕ ದುರಾವಸ್ಥೆ ಈ ವರ್ಷವು ಮುಂದುವರಿಯುವ ಸಾಧ್ಯತೆಯೇ ಹೆಚ್ಚು ಎಂದು ವಿವಿಯು ಸಿಬ್ಬಂದಿ ಹೇಳುತ್ತಾರೆ. ಐಐಟಿಯಂತಹ ವಿವಿಯೊಂದನ್ನು ನಿರ್ಮಿಸುವ ರಾಜ್ಯ ಸರ್ಕಾರದ ಕನಸಿಗೆ ಆರಂಭದಲ್ಲೇ ಹತ್ತಾರು ವಿಘ್ನಗಳು ತಲೆದೋರಿದ್ದು, ವಿವಿಯ ಘನತೆ ಮುಕ್ಕಾಗುತ್ತಿದೆ. ಬೆಂಗಳೂರು ವಿವಿಯಿಂದ ಪ್ರತ್ಯೇಕಿಸಿ ಸ್ವಾಯತ್ತಗೊಳಿಸುವ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ, ಮುಂದಾಲೋಚನೆ ಸಹಿತ ಮಾಡಬೇಕು. ನಿಧಿ ಸಂಗ್ರಹ ಸಾಕಷ್ಟು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆ. ಕನಿಷ್ಠ ಪಕ್ಷ ನಾಲ್ಕೈದು ವರ್ಷಕ್ಕೆ ಸರ್ಕಾರ ನಿಶ್ಚಿತವಾದ ನಿಧಿ ಅಥವಾ ಹಣಕಾಸು ಮಾರ್ಗವನ್ನು ತೋರಿಸುವುದು ಅಗತ್ಯ ಎಂದು ವಿವಿಯ ಪ್ರಾಧ್ಯಾಪಕರೊಬ್ಬರು ಅಭಿಪ್ರಾಯ ಪಡುತ್ತಾರೆ.
ಯುವಿಸಿಇಗೆ ಸೂಕ್ತ ನಿಧಿ ಸಂಗ್ರಹಿಸುವ ಪ್ರಕ್ರಿಯೆ ನಡೆಯುತ್ತಿದೆ. ನಾವು ಈ ಬಗ್ಗೆ ಸೂಕ್ತ ಸಂದರ್ಭದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇವೆ. ತಾಂತ್ರಿಕ ಕಾರಣಗಳಿಂದ ಸಂಬಳ ಆಗಿರಲಿಲ್ಲ. ನಮ್ಮಲ್ಲಿ ಹಣದ ಕೊರತೆಯಿಲ್ಲ.
– ಬಿ.ಮುತ್ತುರಾಮನ್, ಯುವಿಸಿಇಯ ಬೋರ್ಡ್ ಮುಖ್ಯಸ್ಥ