ಉಳ್ಳಾಲ, ಅ. 28: ಶೈಕ್ಷಣಿಕ ಅಭಿವೃದ್ಧಿಗೆ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಸ್ವಾಯತ್ತೆಯ ಅಗತ್ಯವಿದೆ ಎಂದು ಆಂಧ್ರಪ್ರದೇಶ ಕಡಪದ ಯೋಗಿ ವೆಮುನಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ| ಅರ್ಜುಲ ರಾಮಚಂದ್ರ ರೆಡ್ಡಿ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ರಾಜ್ಯ ವಿ.ವಿ.ಗಳ ವಿಶ್ರಾಂತ ಕುಲಪತಿಗಳ ಒಕ್ಕೂಟ (ಎಫ್‌ವಿಸಿಕೆ) ಜಂಟಿ ಆಶ್ರಯದಲ್ಲಿ ಮಂಗಳೂರು ವಿ.ವಿ. ಒಳಾಂಗಣ ಕ್ರೀಡಾಂಗಣದ ಸಭಾಂಗಣದಲ್ಲಿ ಮಂಗಳವಾರ “ಮ್ಯಾನ್ ಪವರ್ ಪ್ಲಾನಿಂಗ್ ಇನ್ ಹೈಯರ್ ಎಜುಕೇಶನ್’ ಎಂಬ ವಿಷಯದಲ್ಲಿ ನಡೆದ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಮೈಸೂರು ವಿ.ವಿ. ವಿಶ್ರಾಂತ ಕುಲಪತಿ ಹಾಗೂ ಕರ್ನಾಟಕ ರಾಜ್ಯ ವಿವಿಗಳ ವಿಶ್ರಾಂತ ಕುಲಪತಿಗಳ ಒಕ್ಕೂಟದ ಅಧ್ಯಕ್ಷ ಪ್ರೊ| ಎಸ್.ಎನ್. ಹೆಗ್ಡೆ ಭಾಗವಹಿಸಿ ಮಾತನಾಡಿದರು.
ಮಂಗಳೂರು ವಿ.ವಿ. ಕುಲಪತಿ ಪ್ರೊ| ಕೆ.ಭೈರಪ್ಪ ಅಧ್ಯಕ್ಷತೆ ವಹಿಸಿದ್ದರು. ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ| ಎ.ಎಂ.ಖಾನ್ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ವಿವಿಗಳ ವಿಶ್ರಾಂತ ಕುಲಪತಿಗಳ ಒಕ್ಕೂಟದ ಕಾರ್ಯದರ್ಶಿ ಪ್ರೊ| ಆರ್.ಎನ್. ಶ್ರೀನಿವಾಸ್ ಗೌಡ ವಿಚಾರಸಂಕಿರಣದ ಬಗ್ಗೆ ಮಾಹಿತಿ ನೀಡಿದರು. ಮಂಗಳೂರು ವಿವಿ ಕುಲಸಚಿವ ಪ್ರೊ| ಕೆ.ಎಂ. ಲೋಕೇಶ್ ಸ್ವಾಗತಿಸಿದರು. ವಿವಿ ಕಾಲೇಜು ಅಭಿವೃದ್ಧಿ ಮಂಡಳಿಯ ಪ್ರೊ| ಜಯರಾಜ್ ಅಮೀನ್ ವಂದಿಸಿದರು. ವಿವಿಯ ಆಂಗ್ಲಭಾಷಾ ವಿಭಾಗ ಪ್ರಾಧ್ಯಾಪಕ
ಪ್ರೊ| ರವಿಶಂಕರ್ ರಾವ್ ಹಾಗೂ ಯಕ್ಷಗಾನ ಅಧ್ಯಯನ ಕೆಂದ್ರದ ಸಂಯೋಜಕ ಡಾ| ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.