Advertisement

ನ.1ರಿಂದ ಯೂನಿವರ್ಸಲ್‌ ಹೆಲ್ತ್‌ ಸ್ಕೀಂ

01:22 PM Oct 25, 2017 | |

ಮೈಸೂರು: ನ.1ರಂದು ಜಾರಿಗೆ ತರಲಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೂನಿವರ್ಸಲ್‌ ಹೆಲ್ತ್‌ ಕವರೇಜ್‌ ಸ್ಕೀಂ ಯಶಸ್ಸಿಗೆ ಶ್ರಮಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ತಿಳಿಸಿದರು. ಮಂಗಳವಾರ ಮೈಸೂರು ಜಿಪಂ ಸಭಾಂಗಣದಲ್ಲಿ ಮೈಸೂರು ವಿಭಾಗಮಟ್ಟದ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

Advertisement

ಯಶಸ್ವಿನಿ, ವಾಜಪೇಯಿ ಆರೋಗ್ಯ ಶ್ರೀ ಸೇರಿದಂತೆ ಬೇರೆ ಬೇರೆ ಆರೋಗ್ಯ ಯೋಜನೆಗಳನ್ನೆಲ್ಲಾ ಒಂದು ಘಟಕದಡಿ ತಂದು ಯೂನಿವರ್ಸಲ್‌ ಹೆಲ್ತ್‌ ಕವರೇಜ್‌ ಸ್ಕೀಂ ರೂಪಿಸಲಾಗಿದೆ. ಈ ಯೋಜನೆ ಜಾರಿಯಿಂದ ರಾಜ್ಯದ 1.40 ಕೋಟಿ ಕುಟುಂಬಗಳಲ್ಲಿನ ಪ್ರತಿಯೊಬ್ಬರೂ ರಾಜ್ಯಸರ್ಕಾರದ ಆರೋಗ್ಯ ರಕ್ಷಣೆ ವ್ಯಾಪ್ತಿಗೆ ಬರುತ್ತಾರೆಂದರು. 

ವೈದ್ಯರು ಮತ್ತು ಸಿಬ್ಬಂದಿ ಈ ವರ್ತನೆಯಿಂದ ಬಡ-ಮಧ್ಯಮ ವರ್ಗದ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ದುಬಾರಿ ದರ ತೆರಲಾಗದೆ ಒದ್ದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸುವ ದೃಷ್ಟಿಯಿಂದ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.

ಈ ಯೋಜನೆ ಜಾರಿ ನಂತರ ಯಾವುದೇ ರೋಗಿಗಳು ಆಧಾರ್‌ ಕಾರ್ಡ್‌ನೊಂದಿಗೆ ಮೊದಲು ಸರ್ಕಾರಿ ಆಸ್ಪತ್ರೆಗೆ ಹೋಗಬೇಕು. ಅಲ್ಲಿ ಚಿಕಿತ್ಸೆ ದೊರೆಯದಿದ್ದಾಗ ಖಾಸಗಿ ಆಸ್ಪತ್ರೆಗೆ ಹೋಗಬಹುದಾಗಿದೆ. ಇಡೀ ದೇಶದಲ್ಲಿ ಇಂತಹ ಪರಿಣಾಮಕಾರಿ ಯೋಜನೆ ರೂಪಿಸಿರುವ ಮೊದಲ ರಾಜ್ಯ ಕರ್ನಾಟಕ. ಈ ಯೋಜನೆ ಯಶಸ್ವಿಯಾದರೆ, ಇಡೀ ದೇಶ ನಮ್ಮನ್ನು ಅನುಸರಿಸಲಿದೆ ಎಂದು ಹೇಳಿದರು.

ವಿಧೇಯಕ ಮಂಡನೆ: ಖಾಸಗಿ ಆಸ್ಪತ್ರೆಗಳಲ್ಲಿನ ದುಬಾರಿ ದರಗಳಿಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ವಿಧೇಯಕ ಮಂಡಿಸಲಾಗುವುದು ಎಂದರು.

Advertisement

ನ್ಯಾಯ ಸಮ್ಮತ ದರ ನಿಗದಿ: ಖಾಸಗಿ ಆಸ್ಪತ್ರೆಗಳು ಮನಸೋ ಇಚ್ಚೇ ಹಣ ಪಡೆಯುತ್ತಿವೆ. ಇದನ್ನು ನಿಯಂತ್ರಿಸಲು ಜಂಟಿ ಸಲಹಾ ಸಮಿತಿ ಅನುಮೋದನೆ ಮೇರೆಗೆ ಆರೋಗ್ಯ ಕ್ಷೇತ್ರದಲ್ಲಿನ ಸರ್ಕಾರಿ-ಖಾಸಗಿ ತಜÒರ ಜತೆ ಚರ್ಚಿಸಿ ನ್ಯಾಯ ಸಮ್ಮತ ದರ ನಿಗದಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಯಾವ್ಯಾವ ಸೇವೆಗೆ ಯಾವ ದರ ಎಂಬುದರ ದರಪಟ್ಟಿ ಪ್ರದರ್ಶನ ಮಾಡುವಂತೆ ಕಾಯ್ದೆಗೆ ತಿದ್ದುಪಡಿ ತರಲಾಗುವುದು. ಸರ್ಕಾರದ ಈ ನಡೆ ವೈದ್ಯ ವೃತ್ತಿ ವಿರುದ್ಧವಲ್ಲ, ವೈದ್ಯಕೀಯ ಸಂಸ್ಥೆಗಳ ವ್ಯಾಪಾರಿ ಮನೋಭಾವದ ವಿರುದ್ಧ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಪ್ರಗತಿ ಪರಿಶೀಲನೆ: ಮೈಸೂರು ವಿಭಾಗ ವ್ಯಾಪ್ತಿಯ ಮೈಸೂರು, ಚಾಮರಾಜ ನಗರ, ಮಂಡ್ಯ, ಹಾಸನ ಹಾಗೂ ಕೊಡಗು ಜಿಲ್ಲೆಗಳ ಜಿಲ್ಲಾ ಆರೋಗ್ಯಾಧಿಕಾರಿಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳ ಆಡಳಿತಾಧಿಕಾರಿಗಳಿಂದ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿನ ಕುಂದು ಕೊರತೆಗಳು,

ವೈದ್ಯರು ಮತ್ತು ಇತರೆ ಸಿಬ್ಬಂದಿ ಕೊರತೆ, ಆಸ್ಪತ್ರೆಗಳಲ್ಲಿನ ಹೆರಿಗೆ ಪ್ರಮಾಣ, ಸಾಂಕ್ರಮಿಕ ರೋಗ ತಡೆಗಟ್ಟುವಿಕೆ, ಜನರಿಕ್‌ ಔಷಧ ಮಳಿಗೆ, ಜಿಲ್ಲಾ ಡ್ರಗ್‌ ಹೌಸ್‌ಗಳಿಂದ ಔಷಧಗಳ ಎತ್ತುವಳಿ ಮೊದಲಾದ ವಿಷಯಗಳ ಬಗ್ಗೆ ಮಾಹಿತಿ ಪಡೆದು, ಕುಂದುಕೊರತೆ ಸರಿಪಡಿಸಿಕೊಳ್ಳುವಂತೆ ಸೂಚನೆ ನೀಡಿದರು.

ಆರೋಗ್ಯ-ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್‌ಸೇs…, ಆರೋಗ್ಯ ಇಲಾಖೆ ಆಯುಕ್ತ ಮನೋಜ್‌ಕುಮಾರ್‌ ಮೀನಾ, ಇಲಾಖೆ ನಿರ್ದೇಶಕರಾದ ಡಾ.ರತನ್‌ ಕೇಲ್ಕರ್‌, ಡಾ.ಪಿ.ಸಿ.ನಟರಾಜ್‌, ಜಿಲ್ಲಾಧಿಕಾರಿ ರಂದೀಪ್‌, ಜಿಪಂ ಸಿಇಒ ಪಿ.ಶಿವಶಂಕರ್‌ ಇದ್ದರು.
 
ಹೊರ ಗುತ್ತಿಗೆ ಎಂಬುದು ಗುಲಾಮಗಿರಿ ಪರಿಷ್ಕೃತ ಆವೃತ್ತಿ. ಡಿ ಗ್ರೂಪ್‌ ಸಿಬ್ಬಂದಿ ಹೊರಗುತ್ತಿಗೆ ದಂಧೆಯಾಗಿ ಪರಿಣಮಿಸಿದೆ. ಗುತ್ತಿಗೆ ಪಡೆದ ಏಜೆನ್ಸಿಯವರು ಎಲ್ಲಾ ಹಣವನ್ನೂ ಇಟ್ಟುಕೊಂಡು ದುಡಿಯುವ ಸಿಬ್ಬಂದಿಗೆ ಕಡಿಮೆ ಹಣ ಕೊಡುತ್ತಾರೆ. ಹೀಗಾಗಿ ಆಸ್ಪತ್ರೆಗಳಲ್ಲಿ ಹೊರ ಗುತ್ತಿಗೆ ಕೊಡದೆ, ಕಾಯಂ ಮಾಡಿಕೊಳ್ಳುವುದಿಲ್ಲ ಎಂಬ ಷರತ್ತಿನ ಮೇಲೆ ಗುತ್ತಿಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳಿ.
-ಕೆ.ಆರ್‌.ರಮೇಶ್‌ಕುಮಾರ್‌, ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next