ಕಲಬುರಗಿ: ಕರ್ನಾಟಕ ಏಕೀಕರಣಕ್ಕಾಗಿ ತೋರಿದ ಒಗ್ಗಟ್ಟನ್ನು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೂ ನಾವು ತೋರಬೇಕಿದೆ ಎಂದು ಕೋವಿಡ್-19 ಮತ್ತು ನೆರೆ ಮೇಲುಸ್ತುವಾರಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.
ನಗರದ ನಗರೇಶ್ವರ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹರಣ ನೆರವೇರಿಸಿ ಅವರು ಮಾತನಾಡಿದರು.
ಕನ್ನಡ ರಾಜ್ಯೋತ್ಸವದ ಸಂಭ್ರಮ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ನಿರಂತರ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ನೆಲ-ಜಲ ಪರಂಪರೆ ಉಳಿಸಿ ಬೆಳೆಸುವಂತೆ ಇರಬೇಕು. ಜತೆಗೆ ಸದೃಢ, ಸಮೃದ್ಧ ಹಾಗೂ ಸ್ವಾವಲಂಬಿ ರಾಜ್ಯವಾಗಿಸಲು ಅಭಿವೃದ್ಧಿಯಲ್ಲಿ ಉತ್ತುಂಗಕ್ಕೆ ಕೊಂಡೊಯ್ಯೋಣ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಶಾಸಕರಾದ ಬಸವರಾಜ ಮತ್ತಿಮಡು, ಡಾ| ಅವಿನಾಶ ಜಾಧವ, ಎಂಎಲ್‌ಸಿಗಳಾದ ಶಶೀಲ ನಮೋಶಿ, ಡಾ| ತಳವಾರ ಸಾಬಣ್ಣ, ದಯಾಘನ್ ಧಾರವಾಡಕರ್, ನಳಿನ್ ಅತುಲ್, ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ, ಜಿಪಂ ಸಿಇಒ ಡಾ| ದಿಲೀಷ್ ಸಸಿ, ಎಸ್‌ಪಿ ಇಶಾ ಪಂತ್, ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ನಗರ ಉಪ ಪೊಲೀಸ್ ಆಯುಕ್ತ ಅಡ್ಡೂರು ಶ್ರೀನಿವಾಸಲು, ಉಪವಿಭಾಗಾಧಿಕಾರಿ ಮೋನಾ ರೂಟ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ| ಶಂಕರಣ್ಣ ವಣಿಕ್ಯಾಳ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.