Advertisement

ಯುನಿಟಿ ಇನ್‌ ಯೂನಿಫಾರ್ಮ್

12:53 PM Oct 17, 2019 | mahesh |

ಅದು ಜುಲೈ ತಿಂಗಳ ಕೊನೆಯ ವಾರ. ಜೀವನದ ಹೊಸ ಮೆಟ್ಟಿಲು ಏರುತ್ತಿರುವ ಸಂತೋಷ ಒಂದೆಡೆಯಾದರೆ, ವಿದ್ಯಾರ್ಥಿ ಜೀವನದ ಕೊನೆಯ ಹಂತ ಎನ್ನುವ ಬೇಸರ ಇನ್ನೊಂದೆಡೆ. ಅದು ಏನೇ ಇರಲಿ, ನನ್ನ ಮಟ್ಟಿಗೆ ಕಾಲೇಜು ಮಾತ್ರ ಹಳೆಯದೆ. ಬಿಲ್ಡಿಂಗ್‌ ಬೇರೆ. ಕ್ಲಾಸ್‌ರೂಮ್‌ ಬೇರೆ, ಅಧ್ಯಾಪಕರು ಮತ್ತು ಸ್ನೇಹಿತರು ಹೊಸಬರೇ. ಸೀನಿಯರ್ಸ್‌ ಆಗಿ ಮೆರೆದಿದ್ದ ನಾವು ಮತ್ತೂಮ್ಮೆ ಜೂನಿಯರ್‌ಗಳಾಗುವ ಬೇಜಾರು. ಅದು ನನ್ನ ಸ್ನಾತಕೋತ್ತರ ಪದವಿಯ ಮೊದಲ ದಿನ. ಮೊದಲ ದಿನವೇನೋ ಓರಿಯೆಂಟೇಶನ್‌ ಕೊಡುವುದರಲ್ಲಿಯೇ ಕಳೆದು ಹೋಯಿತು. ನಂತರ ದಿನಗಳು ಉರುಳುತ್ತಿದ್ದುದು ಗೊತ್ತೇ ಆಗಲಿಲ್ಲ. ಎಲ್ಲ ವಿಭಾಗಗಳು ಸಂಜೆ ನಾಲ್ಕಕ್ಕೆ ಮುಚ್ಚಿದರೆ ನಮ್ಮ ವಿಭಾಗ ಮಾತ್ರ ರಾತ್ರಿ ಎಂಟಾದರೂ ಮುಚ್ಚುತ್ತಲೇ ಇರಲಿಲ್ಲ. ಕಾಲೇಜು ಶುರುವಾಗಿ ಒಂದು ತಿಂಗಳಾದರೂ ನಮಗೆ ಒಂದೇ ಚಿಂತೆ. ಯೂನಿಫಾರ್ಮ್ ಯಾವಾಗ ಸಿಗುತ್ತದೆ ಎಂಬುದು.

Advertisement

ಹೀಗೆ ಕಾಲೇಜು ಶುರುವಾಗಿ ಒಂದೂವರೆ ತಿಂಗಳು ಕಳೆದರೂ ಯೂನಿಫಾರ್ಮ್ ಬಗ್ಗೆ ಯಾರೊಬ್ಬ ಅಧ್ಯಾಪಕರು ಮಾತನಾಡುತ್ತಿರಲಿಲ್ಲ. ಬೇರೆ ಬೇರೆ ವಿಷಯಗಳನ್ನು ಕಲಿಯುತ್ತಿದ್ದ ನನ್ನ ಗೆಳತಿಯರೆಲ್ಲ ಅದಾಗಲೇ ಯುನಿಫಾರ್ಮ್ ಹಾಕಿಕೊಂಡು ಮೆರೆಯಲು ಪ್ರಾರಂಭಿಸಿದ್ದರು. ಕೊನೆಗೂ ಒಂದು ದಿನ ನಮ್ಮ ಕೂಗು ಪ್ರಾಧ್ಯಾಪಕರಿಗೆ ಅರ್ಥವಾಗಿ ಸ್ಯಾಂಪಲ್‌ ಪೀಸ್‌ನ ಒಂದು ಪುಸ್ತಕವನ್ನೇ ತಂದು ಮುಂದಿಟ್ಟರು. ಅಷ್ಟು ದಿನ ಯುನಿಫಾರ್ಮ್ ಬಂದಿಲ್ಲ ಎನ್ನುತ್ತಿದ್ದ ನಮಗೆ ಯಾವ ಕಲರ್‌ ಆಯ್ಕೆ ಮಾಡುವುದು ಅನ್ನೋ ಚಿಂತೆ. ಅರ್ಧ ಗಂಟೆಯಲ್ಲಿ ಅದನ್ನು ಹೇಳಬೇಕಿತ್ತು. ನಮ್ಮ ತರಗತಿಯಲ್ಲಿ ಇದ್ದ ಇಪ್ಪತ್ತು ಜನ ಒಂದು ವೃತ್ತ ಮಾಡಿ ಕುಳಿತು ಪ್ಯಾನೆಲ್‌ ಡಿಸ್ಕಶನ್‌ ಶುರು ಮಾಡಿದೆವು. ಪ್ರತಿಯೊಬ್ಬರದ್ದು ವಿಭಿನ್ನ ಆಲೋಚನೆ. ಯಾವುದೇ ಆಯ್ಕೆ ಮಾಡಿಕೊಂಡರೂ ಇನ್ನೊಬ್ಬರ ಆಕ್ಷೇಪ. ಅದು ಬಿಟ್ಟು ಇದು ಬಿಟ್ಟು ಅದು- ಅಂತ ಯೋಚನೆ ಮಾಡಿ ತಲೆಕೆಡಿಸಿಕೊಂಡು ಕಡೆಗೂ ಒಂದು ಕಲರ್‌ ಅನ್ನು ಆಯ್ಕೆ ಮಾಡಿ ಅಧ್ಯಾಪಕರ ಮುಂದೆ ಇಟ್ಟೆವು. ನಮ್ಮ ದುರದೃಷ್ಪವೇನೋ ! ಅಧ್ಯಾಪಕರು “ಆ ಕಲರ್‌ ಬೇಡ’ ಎಂದರು. ಸರ್‌ ಹೇಳಿದ ಕಲರ್‌ ನಮಗೆಲ್ಲ ಇಷ್ಟವಾಗದಿದ್ದರೂ ಒಪಿಕೊಳ್ಳಲೇಬೇಕಾಯಿತು. ಒಂದು ದಿನ ಆ ಯುನಿಫಾರ್ಮ್ ಕೈಗೂ ಸೇರಿತು.

ಯೂನಿಫಾರ್ಮ್ ಸಿಕ್ಕಿತು ಎಂದು ಖುಷಿ ಪಡಬೇಕೋ ಅಥವಾ ಕಲರ್‌ ನೋಡಿ ಬೇಸರ ಪಡಬೇಕೋ ಎಂದು ತಿಳಿಯದೆ ಸಪ್ಪಗಾದೆವು. ಬಸ್ಸಿನ ಕಂಡೆಕ್ಟರ್‌ ತೊಡುವ ಬಣ್ಣದ ಆ ಯೂನಿಫಾರ್ಮ್ನ್ನು ನಾವು ನಮಗೇ ಬಸ್‌ ಕಂಡಕ್ಟರ್‌ ಬಂದರು ಎಂದು ತಮಾಷೆ ಮಾಡಿದ್ದೂ ಇದೆ.

ಕೊನೆಗೂ ಯುನಿಫಾರ್ಮ್ ಧರಿಸಿ ಕಾಲೇಜಿಗೆ ಬಂದಾಗ ಬಗೆ ಬಗೆಯ ಕಾಮೆಂಟ್‌ಗಳು ಬರಬಹುದೆಂದು ಊಹಿಸಿದ್ದ ನಮಗೆ ಎಲ್ಲರಿಂದಲೂ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. ಆಶ್ಚರ್ಯದ ಜೊತೆ ಸಂತೋಷ ಕೂಡ‌ ಆಯಿತು.

ಕೀರ್ತನಾ. ವಿ. ಭಟ್‌
ಪ್ರಥಮ ಬಿ. ಎ. (ಪತ್ರಿಕೋದ್ಯಮ)
ಆಳ್ವಾಸ್‌ ಕಾಲೇಜು, ಮೂಡಬಿದ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next