Advertisement

ಭಾವೈಕ್ಯತೆ ಸಾರಿದ ಹಿರೇಮ್ಯಾಗೇರಿ

03:15 PM Jan 19, 2020 | Team Udayavani |

ಯಲಬುರ್ಗಾ: ದೇಶಾದ್ಯಂತ ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಚರ್ಚೆಯಲ್ಲಿ ಇರುವಾಗಲೇ ತಾಲೂಕಿನ ಹಿರೇಮ್ಯಾಗೇರಿ ಗ್ರಾಮಸ್ಥರು ಕರಿಸಿದ್ದೇಶ್ವರ ಶಾಖಾ ಮಠದಲ್ಲಿ ನಡೆದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ಖಾಜಿಗಳಿಗೆ ಹಿತವಚನ ನೀಡಲು ಅವಕಾಶ ಕಲ್ಪಿಸಿ, ಭಾವೈಕ್ಯತೆ ಸಾರಿದ್ದಾರೆ.

Advertisement

ಸಿಂಧನೂರು ಗ್ರಾಮದ ಮಹ್ಮದ್‌ ಉಸ್ಮಾನ್‌ ಖಾಜಿ ಎಂಬ ಮುಸ್ಲಿಂ ಧರ್ಮಗುರುಗಳೇ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಹಿತವಚನ ನೀಡಿದರು. ಲಿಂಗೈಕ್ಯ ಜಗದ್ಗುರು ಗುರು ಮಹಾಂತ ಶಿವಯೋಗಿಗಳ 52ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಬೋಧನೆ ಮಾಡಿದ್ದಾರೆ. ನಿತ್ಯ ಜಾತಿ, ಜಾತಿಗಳ ಹೆಸರಿನಲ್ಲಿ ಅನೇಕ ಗದ್ದಲ, ಗಲಾಟೆಗಳು ನಡೆಯುತ್ತಿವೆ. ಆದರೆ ಹಿರೆಮ್ಯಾಗೇರಿ ಗ್ರಾಮ ಭಾವೈಕ್ಯತೆಗೆ ಹೆಸರುವಾಸಿಯಾಗಿದೆ.

ಹಿಂದೂ-ಮುಸ್ಲಿಂ ಒಟ್ಟಿಗೆ ಸೇರಿಕೊಂಡು ಎಲ್ಲ ಹಬ್ಬಗಳನ್ನು ಆಚರಣೆ ಮಾಡುತ್ತಾರೆ. ಜಾತಿ ಭೇದ-ಭಾವ ಮರೆತು ಎಲ್ಲರೂ ಒಂದಾಗಿ ಬೆಳೆಯಬೇಕು ಎಂಬ ಸಂದೇಶ ಸಾರುತ್ತಿದ್ದಾರೆ. ಮೊಹರಂ, ದೀಪಾವಳಿ, ಯುಗಾದಿ, ಬಕ್ರೀದ್‌ ಹಬ್ಬಗಳನ್ನು ಒಗ್ಗೂಡಿ ಆಚರಿಸುತ್ತಾರೆ. ಅಷ್ಟೇ ಅಲ್ಲದೇ ಈ ಬಾರಿ ಒಂದು ವಿಶೇಷ ವಿನೂತನಕ್ಕೆ ಮುಂದಾಗಿದ್ದಾರೆ. ಮಠದಲ್ಲಿ ನಡೆಯುವ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಮುಸ್ಲಿಂ ಖಾಜಿಯನ್ನು ಆಹ್ವಾನಿಸಿ ಧಾರ್ಮಿಕ ಬೋಧನೆ ಮಾಡಿಸಿ ಅವರಿಗೆ ಸಮಿತಿ ವತಿಯಿಂದ ಸನ್ಮಾನಿಸಿ, ಅಭಿನಂದಿಸಿದ್ದಾರೆ.

ದೇವನೊಬ್ಬ ನಾಮ ಹಲವು ಎಂಬ ನಂಬಿಕೆಯಲ್ಲಿ ಇಲ್ಲಿನ ಹಿಂದೂ-ಮುಸ್ಲಿಮರು ಜೀವನ ನಡೆಸುತ್ತಿದ್ದಾರೆ. ಸದಾ ಈ ಗ್ರಾಮ ಭಾವೈಕ್ಯತೆಯ ಕೇಂದ್ರ ಬಿಂದುವಾಗಿದೆ. ಗಣೇಶ ಹಬ್ಬವನ್ನು ಸಹ ಜೊತೆಗೂಡಿ ಆಚರಿಸುತ್ತಾರೆ. ಎಲ್ಲರೂ ಒಂದೇ ಎಂಬ ಮಾತನ್ನು ಸಾಬೀತು ಮಾಡಿದ್ದಾರೆ. ಗ್ರಾಮದಲ್ಲಿ ನಡೆಯುವ ಎಲ್ಲ ಹಬ್ಬಗಳನ್ನು ಇಲ್ಲಿನ ಜನರು ಜಾತಿ, ಮತ, ಪಂಥವಿಲ್ಲದೇ ಆಚರಣೆ ಮಾಡುತ್ತಿರುವುದು ಇತರೆ ಗ್ರಾಮಗಳಿಗೆ ಮಾದರಿಯಾಗಿದೆ.

ಈ ಹಿಂದೆ ಹಿರೇಮ್ಯಾಗೇರಿ ಗ್ರಾಮದ ಶಾಖಾ ಮಠದ ವಿಜಯ ಮಹಾಂತ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಖಾಜಿ ಅವರು ಹಲವಾರು ಸರ್ವಧರ್ಮಗಳ ಸಮಾವೇಶ ಸಹ ನಡೆಸಿದ್ದಾರೆ. ಖಾಜಿಗಳು ಹಿಂದೂ ಧರ್ಮದ ಬಸವಣ್ಣ, ಶ್ರೀರಾಮಚಂದ್ರ, ಭಗವದ್ಗೀತೆ ಸೇರಿದಂತೆ ಹಲವಾರು ಮಹಾನ್‌ ವ್ಯಕ್ತಿಗಳ ಹಾಗೂ ಗ್ರಂಥಗಳ ಕುರಿತು ಬೋಧನೆ ಮಾಡಿದ್ದಾರೆ. ಎಲ್ಲರೂ ಒಂದೇ ಆಗಿರಬೇಕು ಎಂಬುದನ್ನು ಜನತೆಗೆ ತಿಳಿಸಿಕೊಟ್ಟಿದ್ದಾರೆ.

Advertisement

ಒಟ್ಟಾರೆ ಇಂತಹ ಸಾಮರಸ್ಯದ ಬದುಕು ಹಾಗೂ ಆಚರಣೆ ಎಲ್ಲರಿಗೂ ಎಲ್ಲ ಕಡೆ ಮಾದರಿಯಾಗಲಿ ಎಂಬುದು ಪ್ರತಿಯೊಬ್ಬರ ಆಸೆಯಾಗಿದೆ.

 

-ಮಲ್ಲಪ್ಪ ಮಾಟರಂಗಿ

Advertisement

Udayavani is now on Telegram. Click here to join our channel and stay updated with the latest news.

Next