Advertisement

Lok Sabha Election: ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಜಪ; ಮೈತ್ರಿಗೆ ಆತಂಕ 

01:04 PM Apr 15, 2024 | Team Udayavani |

ಸಕಲೇಶಪುರ: ಹಿಂದೆಂದೂ ಕಾಣದ ಒಗ್ಗಟ್ಟು  ಈ ಬಾರಿ ತಾಲೂಕು ಕಾಂಗ್ರೆಸ್‌ನಲ್ಲಿ ಕಾಣುತ್ತಿದ್ದು ಸದ್ದಿಲ್ಲದೆ ಕಾಂಗ್ರೆಸ್‌ ಮುಖಂಡರು ಅನ್ಯ ಪಕ್ಷಗಳ ಮುಖಂಡರು, ಕಾರ್ಯಕರ್ತರನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ.

Advertisement

ಹಾಸನ ಲೋಕಸಭಾ ಕ್ಷೇತ್ರದಲ್ಲಿ  ಕಾಂಗ್ರೆಸ್‌ ಲೋಕಸಭಾ ಅಭ್ಯರ್ಥಿಯಾಗಿ ಶ್ರೇಯಸ್‌ ಪಟೇಲ್‌ ಅಭ್ಯರ್ಥಿಯಾಗಿ ಆಯ್ಕೆಯಾದ ನಂತರ ತಾಲೂಕಿನ ರಾಜಕೀಯ ಚಿತ್ರಣ ಬದಲಾವಣೆಯಾಗಿದ್ದು ಹರಿದು ಹಂಚಿ ಹೋಗಿದ್ದ ಕಾಂಗ್ರೆಸ್‌ನ ಮುಖಂಡರುಗಳು ಹಾಗೂ ಕಾರ್ಯಕರ್ತರು ಒಟ್ಟಾಗಿ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮುರುಳಿ ಮೋಹನ್‌ ಪರ ಕಾಂಗ್ರೆಸ್ಸಿಗರೆ ಸರಿಯಾಗಿ ಕೆಲಸ ಮಾಡದ ಕಾರಣ ರಾಜ್ಯದಲ್ಲಿ ಕಾಂಗ್ರೆಸ್‌ ಅಲೆ ಉದ್ಭವವಾದರು ಸಹ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಮೂರನೇ ಸ್ಥಾನಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಕುಸಿದಿದ್ದರು.

ಈ ಹಿನ್ನೆಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಗಿರುವ ತಪ್ಪು ಮತ್ತಾಗಬಾರದೆಂದು ಪರಾಜಿತ ಅಭ್ಯರ್ಥಿ ಮುರುಳಿಮೋಹನ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬೈರಮುಡಿ ಚಂದ್ರು, ಕಾಂಗ್ರೆಸ್‌ ಮುಖಂಡ ಬಾಚಹಳ್ಳಿ ಪ್ರತಾಪ್‌ ಗೌಡ ಒಟ್ಟಾಗಿ ಚುನಾವಣಾ ಪ್ರಚಾರಕ್ಕೆ ತಂತ್ರಗಾರಿಕೆ ರೂಪಿಸಿದ್ದು ಮೊದಲ ಹಂತದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿರುವ ಅಸಮಾದಾನಿತರನ್ನು ಸಮಾಧಾನಿಸುವ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಕಾಣಿಸುತ್ತಿದ್ದ ಅಸಮಾಧಾನ ಈ ಬಾರಿ ಅಷ್ಟಾಗಿ ಕಾಣುತ್ತಿಲ್ಲ. ಇದಾದ ನಂತರ ಅನ್ಯ ಪಕ್ಷಗಳ ಅಸಮಾಧಾನಿತರು, ಮುಖಂಡರುಗಳು ಹಾಗೂ ಗ್ರಾ.ಪಂ ಸದಸ್ಯರನ್ನು ಕಾಂಗ್ರೆಸ್‌ನತ್ತ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ ಪಕ್ಷ ದಿನದಿಂದ ದಿನಕ್ಕೆ ಸದ್ದಿಲ್ಲದೆ ಬಲಿಷ್ಠವಾಗುತ್ತಿದೆ. ಜೆಡಿಎಸ್‌ ಬಿಜೆಪಿಯೊಡನೆ ಮೈತ್ರಿಯಾಗಿರುವುದರಿಂದ ದಲಿತ ಮತಗಳು ಕಾಂಗ್ರೆಸ್‌ನತ್ತ ಹೆಚ್ಚು ವಾಲುವುದು ಖಚಿತವಾಗಿದೆ ಜೊತೆಗೆ ಮುಸ್ಲಿಂರು ಹಾಗೂ ಕ್ರೈಸ್ತರ ಮತಗಳು ಸಹ ಕಾಂಗ್ರೆಸ್‌ ಪರ ಶೇ100% ಬೀಳುವ ಸಾಧ್ಯತೆಯಿದೆ.

ಬೈರಮುಡಿ ಚಂದ್ರು ಹಾಗೂ ಬಾಚಹಳ್ಳಿ ಪ್ರತಾಪ್‌ ಗೌಡ ಒಕ್ಕಲಿಗರ ಮತಗಳನ್ನು ಸೆಳೆಯುವ ಕೆಲಸ ಮಾಡುತ್ತಿದ್ದು ಕಾಂಗ್ರೆಸ್‌ನಲ್ಲಿರುವ ವೀರಶೈವ ಮುಖಂಡರು ವೀರಶೈವ ಮತಗಳನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಇನ್ನು ಕಾಂಗ್ರೆಸ್‌ನಲ್ಲಿ ಹಲವಾರು ದಲಿತ ಮುಖಂಡರುಗಳಿದ್ದು ಕಾಂಗ್ರೆಸ್‌ ಪಕ್ಷ ನೀಡಿರುವ ಗ್ಯಾರಂಟಿಗಳ ಆಧಾರದಲ್ಲಿ ಹೆಚ್ಚಿನ ದಲಿತರು ಕಾಂಗ್ರೆಸ್‌ ಪರ ವಾಲುವುದರಲ್ಲಿ ಅನುಮಾನವಿಲ್ಲ. ಇದಲ್ಲದೆ ಮುಖ್ಯ ಒಟ್ಟಾರೆಯಾಗಿ ಹಿಂದೆ ಯಾವ ಚುನಾವಣೆಯಲ್ಲೂ ಕಾಣದ ಒಗ್ಗಟ್ಟು ಕಾಂಗ್ರೆಸ್‌ ವಲಯದಲ್ಲಿ ಕಾಣುತ್ತಿದ್ದು ಜೆಡಿಎಸ್‌ ಹಾಗೂ ಬಿಜೆಪಿ ಎಚ್ಚೆತ್ತುಕೊಳ್ಳದಿದ್ದಲ್ಲಿ ಜೆಡಿಎಸ್‌ ಬಿಜೆಪಿ ಭದ್ರಕೋಟೆಯಲ್ಲಿ ಕಾಂಗ್ರೆಸ್‌ ಮುನ್ನಡೆ ಪಡೆಯುವ ಸಾಧ್ಯತೆಗಳು ಹೆಚ್ಚಾಗಿದೆ.

ಬಿಜೆಪಿ ಗೊಂದಲ ಕಾಂಗ್ರೆಸ್‌ಗೆ ಲಾಭ :

Advertisement

ಎನ್‌.ಡಿ.ಎ ಅಭ್ಯರ್ಥಿ ಶಾಸಕರ ಮಾರ್ಗದರ್ಶನ ಪಡೆಯದೇ ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಗೂ ಸಂಘ ಪರಿವಾರದ ಕಾರ್ಯಕರ್ತರನ್ನು ನೇರವಾಗಿ ಸಂಪರ್ಕಿಸು ತ್ತಿದ್ದಾರೆ. ಇದರಿಂದಾಗಿ ಕೆಲವು ಬಿಜೆಪಿ ಹಾಗೂ ಸಂಘ ಪರಿವಾರದ ಮುಖಂಡರು ಮಾತ್ರ ನೇರವಾಗಿ ಎನ್‌ಡಿಎ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ  ತೊಡಗಿಸಿಕೊಳ್ಳುತ್ತಿದ್ದಾರೆ. ಇನ್ನು ಜೆಡಿಎಸ್‌ ಜತೆ ಮೈತ್ರಿ ಹಲವರಿಗೆ ಇಷ್ಟವಾಗು ತ್ತಿಲ್ಲ. ಇದರಿಂದಾಗಿ ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ಗೊಂದಲ ಉಂಟಾಗಿದೆ. ಇನ್ನು ಜೆಡಿಎಸ್‌ ಹೈಕಮಾಂಡ್‌ ಬಿಜೆಪಿ ಕಾರ್ಯ ಕರ್ತರಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಹಲವು ಜೆಡಿಎಸ್‌ ಕಾರ್ಯಕರ್ತರಿಗೆ ಇಷ್ಟ ವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇದನ್ನೆ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್‌ ಎರಡು ಪಕ್ಷಗಳ ಅಸಮಾಧಾನಿತರನ್ನು ಪಕ್ಷಕ್ಕೆ ಸೆಳೆಯುವ ಕೆಲಸ ಮಾಡುತ್ತಿದೆ.

ಕಾಂಗ್ರೆಸ್‌ನಲ್ಲಿ ಹಿಂದೆಂದೂ ಕಾಣದ ಒಗ್ಗಟ್ಟಿನ ಮಂತ್ರ ಕಂಡು ಬರುತ್ತಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಸಕಲೇಶಪುರ ತಾಲೂಕಿನಿಂದ ಉತ್ತಮ ಮತಗಳು ಬೀಳುವುದರಲ್ಲಿ ಅನುಮಾನವಿಲ್ಲ. -ಚಾರ್ಲ್ಸ್‌ ಬಾಗೆ, ಗ್ರಾಪಂ ಸದಸ್ಯರು

ಸಿಎಂ ಸಿದ್ದರಾಮಯ್ಯನವರ ಗ್ಯಾರಂಟಿ ಯೋಜನೆಗಳು ಜನರ ಮನಸ್ಸನ್ನು ಗೆದ್ದಿದ್ದು, ಗ್ಯಾರಂಟಿ ಯೋಜನೆಗಳಿಂದ ಬಡವರು, ಮಧ್ಯಮ ವರ್ಗದವರಿಗೆ ಬಹಳ ಅನುಕೂಲವಾಗಿದೆ. ಅಲ್ಲದೆ ಎಲ್ಲಾ ಕಾಂಗ್ರೆಸ್‌ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದು ಮತದಾರರು ಕಾಂಗ್ರೆಸ್‌ ಅಭ್ಯರ್ಥಿಗೆ ಒಮ್ಮೆ ಅವಕಾಶ ನೀಡಲಿದ್ದಾರೆ.-ಪ್ರತಾಪ್‌ ಗೌಡ, ಕಾಂಗ್ರೆಸ್‌ ಮುಖಂಡರು

-ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next