Advertisement

ಕೋವಿಡ್ ಸಂಕಷ್ಟಕ್ಕೆ ನೆರವಾಗಲು ಅಮೆರಿಕದಿಂದ 2.2 ಲಕ್ಷ ಕೋಟಿ ಡಾಲರ್‌ ಪ್ಯಾಕೇಜ್‌

06:15 PM Mar 27, 2020 | Hari Prasad |

ವೈರಸ್‌ನಿಂದ ಸಂಕಷ್ಟಕ್ಕೀಡಾಗಿರುವ ಉದ್ದಿಮೆಗಳು, ನೌಕರರು ಹಾಗೂ ಆರೋಗ್ಯ ಸೇವಾ ವ್ಯವಸ್ಥೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಮೆರಿಕ ಸರ್ಕಾರ ಕೂಡ ಬೃಹತ್‌ ಮೊತ್ತದ ಪರಿಹಾರ ಪ್ಯಾಕೇಜ್‌ ಘೋಷಿಸಿದೆ. 2.2 ಲಕ್ಷ ಕೋಟಿ ಡಾಲರ್‌ (165 ಲಕ್ಷ ಕೋಟಿ ರೂ.)ನ ಪ್ಯಾಕೇಜ್‌ ಪ್ರಸ್ತಾಪವು ಗುರುವಾರ ಸೆನೆಟ್‌ ನಲ್ಲಿ  ಅನುಮೋದನೆಗೊಂಡಿದೆ.

Advertisement

ಅಮೆರಿಕಕ್ಕೆ ಕೊರೊನಾ ಸೋಂಕು ಸವಾಲಾಗಿ ಪರಿಣಮಿಸಿರುವ ಬೆನ್ನಲ್ಲೇ, ಸೆನೆಟ್‌ ನಲ್ಲಿ ಭಾರೀ ಚರ್ಚೆ ನಡೆದು ಕೊನೆಗೂ ಆರ್ಥಿಕ ಪ್ಯಾಕೇಜ್‌ಗೆ ಒಕ್ಕೊರಲ ಅಂಗೀಕಾರ ದೊರತಿದೆ. 880 ಪುಟಗಳ ಕ್ರಮಗಳನ್ನೂ ಈ ಪ್ರಸ್ತಾಪದಲ್ಲಿ ಉಲ್ಲೇಖಿಸಲಾಗಿದೆ. ಅಮೆರಿಕದ ಇತಿಹಾಸದಲ್ಲೇ ಇದನ್ನು ಅತಿದೊಡ್ಡ ಮೊತ್ತದ ಆರ್ಥಿಕ ಪರಿಹಾರ ಪ್ಯಾಕೇಜ್‌ ಎಂದು ಬಣ್ಣಿಸಲಾಗಿದೆ.

ವಿಪತ್ತಿನ ಅಂಚಿನಲ್ಲಿ ನ್ಯೂಯಾರ್ಕ್‌: ಈ ನಡುವೆ, ಅಮೆರಿಕದ ಕೊರೊನಾ ಹಾಟ್‌ ಬೆಡ್‌ ಎನಿಸಿರುವ ನ್ಯೂಯಾರ್ಕ್‌ ನಲ್ಲಿ ಸಾರ್ವಜನಿಕ ಆರೋಗ್ಯ ವಿಪತ್ತು ಸಂಭವಿಸುವ ಸಾಧ್ಯತೆಯಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅಧ್ಯಕ್ಷ ಟ್ರಂಪ್‌ ಸೂಚಿಸಿದ್ದಾರೆ. ಅದರಂತೆ, ಮುಂದಿನ ಒಂದೆರಡು ವಾರಗಳಲ್ಲಿ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣುವ ಭೀತಿಯಿರುವ ಕಾರಣ, ಆರೋಗ್ಯ ಸೇವಾ ಸಿಬ್ಬಂದಿ ಅಗತ್ಯ ಬೆಡ್‌ ಗಳು ಹಾಗೂ ವೈದ್ಯಕೀಯ ಉಪಕರಣಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಹೆಚ್ಚಿನ ಸಂಖ್ಯೆಯ ವೈದ್ಯರು, ನರ್ಸ್‌ ಗಳು ಮುಂದೆ ಬಂದು ತಮ್ಮ ಕೈಲಾದ ಕೊಡುಗೆ ನೀಡುವಂತೆ ಕೋರಿಕೊಳ್ಳಲಾಗಿದೆ. ಬೆಲ್ಲೆವ್ಯೂ ಆಸ್ಪತ್ರೆಯ ಹೊರಗೆ ತಾತ್ಕಾಲಿಕ ಶವಾಗಾರ ನಿರ್ಮಿಸಲಾಗಿದೆ. ನ್ಯೂಯಾರ್ಕ್‌ ಯುನಿವರ್ಸಿಟಿಯು ತನ್ನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅವಧಿಗೆ ಮೊದಲೇ ಪದವಿ ನೀಡಿ, ಅವರನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ಇಳಿಸಲು ಸಿದ್ಧತೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next