ನವದೆಹಲಿ: ಎರಡು ದಿನಗಳ ಭಾರತ ಭೇಟಿಯಲ್ಲಿರುವ ಡೊನಾಲ್ಡ್ ಟ್ರಂಪ್ ಅವರು ಇಂದು ಭಾರತೀಯ ಸಿ.ಇ.ಒ.ಗಳನ್ನುದ್ದೆಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಂಬರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗಳಲ್ಲಿ ತಮ್ಮ ರಿಪಬ್ಲಿಕನ್ ಪಕ್ಷವೇ ಅಧಿಕಾರಕ್ಕೆ ಮರಳಲಿದ್ದು ನಾನೇ ಅಧ್ಯಕ್ಷನಾಗಿ ಪುನರಾಯ್ಕೆಗೊಳ್ಳಲಿದ್ದೇನೆ ಎಂಬ ಭರವಸೆಯನ್ನು ಡೊನಾಲ್ಡ್ ಟ್ರಂಪ್ ಅವರು ನೀಡಿದ್ದಾರೆ.
‘ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಗೆದ್ದರೆ ನಮ್ಮ ಶೇರು ಮಾರುಕಟ್ಟೆ ಸಾವಿರ ಅಂಕಗಳ ಜಿಗಿತವನ್ನು ಕಾಣಲಿದೆ ; ಒಂದುವೇಳೆ ನಾನು ಸೋತರೆ ಅದು ತೀವ್ರ ಕುಸಿತವನ್ನು ಕಾಣಲಿದೆ’ ಎಂದು ಟ್ರಂಪ್ ಅವರು ಇಲ್ಲಿನ ಅಮೆರಿಕಾ ರಾಯಭಾರಿ ಕಛೇರಿಯಲ್ಲಿ ಭಾರತೀಯ ಉದ್ಯಮ ನಾಯಕರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಹೇಳಿದರು.
ನಮ್ಮ ಪಕ್ಷ ಅಧಿಕಾರದಲ್ಲಿ ನಾವು ಮಾಡಿರುವ ಕೆಲಸಗಳನ್ನು ನೋಡುವಾಗ ಈ ವಿಚಾರ ನಿಮಗೇ ಮನವರಿಕೆಯಾಗುತ್ತದೆ. ಹಾಗಾಗಿಯೇ ನೀವೆಲ್ಲರೂ ಅಮೆರಿಕಾದಲ್ಲಿ ಸಂತೋಷವಾಗಿದ್ದೀರಿ ಎಂದು ಟ್ರಂಪ್ ಇದೇ ಸಂದರ್ಭದಲ್ಲಿ ಹೇಳಿದರು.
ತನ್ನ ಅಧಿಕಾರವಧಿಯಲ್ಲಿ ಆಗಿರುವ ಕೆಲಸಗಳ ಉದಾಹರಣೆಯನ್ನೂ ಸಹ ಟ್ರಂಪ್ ಇದೇ ಸಂದರ್ಭದಲ್ಲಿ ತೆರೆದಿಟ್ಟರು. ‘ಈ ಹಿಂದೆ ರಸ್ತೆ ಹಾಗೂ ಹೆದ್ದಾರಿ ನಿರ್ಮಾಣಕ್ಕೆ ಒಪ್ಪಿಗೆ ಪಡೆದುಕೊಳ್ಳಲು 20 ವರ್ಷ ಕಾಯಬೇಕಿತ್ತು. ಆದರೆ ಇದೀಗ ಎರಡು ವರ್ಷಗಳಲ್ಲೇ ಒಪ್ಪಿಗೆ ಸಿಗುವಂತೆ ನಾವು ಮಾಡಿದ್ದೇವೆ ಮತ್ತು ಈ ಅವಧಿಯನ್ನು ಇನ್ನಷ್ಟು ಕಡಿಮೆಗೊಳಿಸಲು ಪ್ರಯತ್ನಗಳು ಸಾಗಿವೆ.’
ರಿಲಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷ ಮುಖೇಶ್ ಅಂಬಾನಿ, ಭಾರ್ತಿ ಏರ್ ಟೆಲ್ ಅಧ್ಯಕ್ಷ ಸುನಿಲ್ ಮಿತ್ತಲ್, ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್, ಮಹಿಂದ್ರಾ ಗ್ರೂಪ್ ಅಧ್ಯಕ್ಷ ಆನಂದ ಮಹಿಂದ್ರ, ಲಾರ್ಸೆನ್ ಆ್ಯಂಡ್ ಟರ್ಬೋ ಅಧ್ಯಕ್ಷ ಎ.ಎಂ. ನಾಯ್ಕ್ ಮತ್ತು ಬಯೋಕಾನ್ ಸಿಎಂಡಿ ಕಿರಣ್ ಮುಜುಮ್ದಾರ್ ಸಹಿತ ಪ್ರಮುಖ ಉದ್ಯಮ ಸಂಸ್ಥೆಗಳ ಸಿಇಒಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.