Advertisement
ವರದಿಯಲ್ಲಿನ ದೃಷ್ಟಿಕೋನವು ಭಾರತದ ಸಾರ್ವಭೌಮತ್ವ ಹಾಗೂ ಪ್ರಾಂತೀಯ ಸಮಗ್ರತೆಗೆ ಧಕ್ಕೆ ತರುವಂತಿದೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಭಾರತ ಆಕ್ಷೇಪಿಸಿದೆ. ಗಡಿಯಾಚೆಗಿನ ಭಯೋತ್ಪಾದನೆ ವಿಚಾರವನ್ನು ಗಣನೆಗೆ ತೆಗೆದುಕೊಳ್ಳದೆಯೇ ವರದಿ ಸಿದ್ಧಪಡಿಸಲಾಗಿದೆ. ವಿಶ್ವದ ಅತ್ಯಂತ ದೊಡ್ಡ, ವೈವಿಧ್ಯಮಯ ಪ್ರಜಾಪ್ರಭುತ್ವವಾಗಿರುವ ಭಾರತ ಮತ್ತು ಭಯೋತ್ಪಾದನೆಯನ್ನೇ ಪ್ರಚೋದಿಸುವ ಪಾಕಿಸ್ಥಾನದ ಮಧ್ಯದ ವ್ಯತ್ಯಾಸವನ್ನು ವರದಿ ಪರಿಗಣಿಸಿಯೇ ಇಲ್ಲ. ಈ ಕುರಿತು ನಮ್ಮ ರಾಯಭಾರ ಕಚೇರಿಯ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ವಿಶ್ವದ ಶೇ. 60ರಷ್ಟು ಜನಸಂಖ್ಯೆ ಹೊಂದಿರುವ ಏಷ್ಯಾ ಖಂಡದಲ್ಲಿ ನರಹತ್ಯೆ ಪ್ರಮಾಣ ಅತ್ಯಂತ ಕಡಿಮೆ ಇದೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. ಅಮೆರಿಕ ಖಂಡದಲ್ಲಿ ನರಹತ್ಯೆ ಪ್ರಮಾಣ 2017ರ ವೇಳೆಗೆ ಅತ್ಯಂತ ಅಧಿಕ ಪ್ರಮಾಣದಲ್ಲಿದೆ. ವಿಶ್ವಸಂಸ್ಥೆಯ ಮಾದಕದ್ರವ್ಯ ಮತ್ತು ಅಪರಾಧ ವಿಭಾಗವು ಜಾಗತಿಕ ನರಹತ್ಯೆ ಅಧ್ಯಯನ ನಡೆಸಿದ್ದು, ವಿಶ್ವದಲ್ಲಿ 2017ರಲ್ಲಿ ಒಟ್ಟು 4.64 ಲಕ್ಷ ನರಹತ್ಯೆ ನಡೆದಿದ್ದು, 1 ಲಕ್ಷಕ್ಕೆ ಇದು 6.1 ಆಗಿದೆ. ಈ ಪೈಕಿ ಏಷ್ಯಾ ಖಂಡದಲ್ಲಿ ಅತ್ಯಂತ ಕಡಿಮೆ ವರದಿಯಾಗಿದ್ದು, 1 ಲಕ್ಷ ಜನರಿಗೆ ಕೇವಲ 2.3 ನರಹತ್ಯೆ ನಡೆದಿದೆ. ಅಮೆರಿಕ ಖಂಡದಲ್ಲಿ 1 ಲಕ್ಷಕ್ಕೆ 17.2 ನರಹತ್ಯೆ ನಡೆದಿದೆ ಎಂದು ವರದಿ ಮಾಡಲಾಗಿದೆ.