Advertisement

ಜರ್ಮನಿ ಮಿಷನರಿಗಳಿಂದ ಸ್ಥಾಪಿತ ಜಿಲ್ಲೆಯ ಮೊದಲ ಶಾಲೆಗೆ 164ರ ಸಂಭ್ರಮ

11:43 PM Nov 14, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಉಡುಪಿ: ಜರ್ಮನಿ ಮಿಷನರೀಸ್‌ಗಳಿಂದ ಸ್ಥಾಪಿತ ಹಾಗೂ ಜಿಲ್ಲೆಯಲ್ಲಿ ಶಿಕ್ಷಣದ ಕ್ರಾಂತಿ ಮೂಡಿಸಿದ ಮೊದಲ ಕನ್ನಡ ಶಾಲೆ ಯೂನೈಟೆಡ್‌ ಬಾಸೆಲ್‌ ಮಿಷನರೀಸ್‌ಗೆ 164 ವರ್ಷದ ಸಂಭ್ರಮ. ಈ ಶಾಲೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನದ ಜತೆಗೆ ಬದುಕು ರೂಪಿಸಿಕೊಟ್ಟಿದೆ.

ಯೂನೈಟೆಡ್‌ ಬಾಸೆಲ್‌ ಮಿಷನರೀಸ್‌ ಚರ್ಚ್‌ ಕನ್ನಡ ಮಾಧ್ಯಮ ಶಾಲೆ ಜಿಲ್ಲೆಯ ಮೊದಲ ಶಾಲೆ. ಜರ್ಮನಿಯ ಕ್ರೈಸ್ತ ಮಿಷನರಿಗಳು ಧರ್ಮ ಪ್ರಚಾರಕ್ಕೆ ಉಡುಪಿಗೆ ಬಂದ ಸಮಯದಲ್ಲಿ ಜನರಲ್ಲಿ ಶಿಕ್ಷಣದ ಅರಿವು ಇರಲಿಲ್ಲ. ಸ್ಥಳೀಯರಿಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ 1855ರಲ್ಲಿ ಮಿಷನರಿಗಳು ಶಾಲೆಯನ್ನು ಪ್ರಾರಂಭಿಸಿದರು. ಆ ಸಮಯದಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಬದುಕು ರೂಪಿಸಲು ಅಗತ್ಯವಿರುವ ವೃತ್ತಿಪರ ತರಬೇತಿಯನ್ನು ಸಹ ನೀಡುತ್ತಿದ್ದರು.

1892ರಲ್ಲಿ ಸರಕಾರದ ಮಾನ್ಯತೆ
1855ರಲ್ಲಿ ಸಣ್ಣ ಕಟ್ಟಡದಲ್ಲಿ ಪ್ರಾರಂಭಗೊಂಡ ಶಾಲೆ 1863ರಲ್ಲಿ ವಿಶಾಲವಾದ ಹೊಸ ಕಟ್ಟಡವನ್ನು ನಿರ್ಮಿಸಿದ್ದರು. ಬ್ರಿಟಿಷ್‌ ಸರಕಾರ 1892ರಲ್ಲಿ ಶಾಲೆಗೆ ಮಾನ್ಯತೆ ನೀಡಿದ್ದು, 1907ರಲ್ಲಿ 5ರಿಂದ 7 ತರಗತಿ ಪ್ರಾರಂಭಗೊಂಡಿತ್ತು. 1914ರ ಬಳಿಕ ವಿವಿಧ ಕಾರಣಗಳಿಂದ ವೃತ್ತಿಪರ ತರಬೇತಿ ಕೇಂದ್ರ ಮುಚ್ಚಲಾಯಿತು.

ಹಲವು ಪ್ರದೇಶದ ಜನರಿಗೆ ಶಿಕ್ಷಣ ನೀಡಿದ ಶಾಲೆ
ಆ ಕಾಲದಲ್ಲಿ ಉದ್ಯಾವರ, ಕೊಡವೂರು, ಮಲ್ಪೆ, ಅಂಬಲಪಾಡಿ, ಅಂಬಾಗಿಲು, ಅಲೆವೂರು, ಕೊರಂಗರಪಾಡಿ ಸೇರಿದಂತೆ ವಿವಿಧ ಪ್ರದೇಶದವರು ಇಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಶಾಲೆಯ ಮೊದಲ ಮುಖ್ಯೋಪಾಧ್ಯಾಯರಾಗಿ ಆಲ್ಬರ್ಟ್‌ ಸೇವೆ ಸಲ್ಲಿಸಿದ್ದಾರೆ. ಕುವೆಂಪು ವಿವಿ ಕುಲಪತಿ ಜೆ.ಎಸ್‌. ಶೇರಿಗಾರ್‌ ಅವರು ಶಾಲೆಯ ಹಳೆವಿದ್ಯಾರ್ಥಿಯಾಗಿದ್ದಾರೆ.

Advertisement

1,000 ವಿದ್ಯಾರ್ಥಿಗಳು
1980ರ ವರೆಗೆ ಶಾಲೆಯಲ್ಲಿ 14ಮಂದಿ ಸರಕಾರಿ ಶಿಕ್ಷಕರು ಇದ್ದರು. ಸುಮಾರು 1,000 ವಿದ್ಯಾರ್ಥಿಗಳು ಪ್ರತಿವರ್ಷ ಶಿಕ್ಷಣವನ್ನು ಪಡೆಯುತ್ತಿದ್ದರು. ಪ್ರಸ್ತುತ 126 ವಿದ್ಯಾರ್ಥಿಗಳು, ಸರಕಾರದ 2 ಶಿಕ್ಷಕರು ಹಾಗೂ ಆಡಳಿತ ಮಂಡಳಿಯಿಂದ ನೇಮಕಗೊಂಡ 5 ಶಿಕ್ಷಕರು ಇದ್ದಾರೆ. ಈ ಶಾಲೆ ಇನ್ನೊಂದು ವಿಶೇಷವೆಂದರೆ ಅನಾಥ ಮಕ್ಕಳಿಗೆ ಈ ಶಾಲೆಯಲ್ಲಿ ಶಿಕ್ಷಣ ನೀಡುವುದರ ಜತೆಗೆ ವಸತಿ ಸೌಕರ್ಯ ನೀಡಲಾಗುತ್ತಿತ್ತು. ಆ ವ್ಯವಸ್ಥೆ ಇಂದಿಗೂ ಜೀವಂತವಾಗಿದೆ.

ಅಜ್ಜಿ, ಅಮ್ಮ ನಾನು ಇದೇ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದುಕೊಂಡಿದ್ದೇವೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರು ಮಾಡಿದೆ. ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿ ಇದ್ದಾರೆ. ಜಿಲ್ಲೆಯಲ್ಲಿ ಮೊದಲ ವಿದ್ಯಾದೇಗುಲ ಎನ್ನುವ ಶಾಲೆಯಲ್ಲಿ ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದೆ.
-ಪಲ್ಲವಿ,ಹಳೆ ವಿದ್ಯಾರ್ಥಿ

ಜರ್ಮನಿ ಮಿಷನರೀಸ್‌ನಿಂದ ಸ್ಥಾಪಿತ ಈ ಕನ್ನಡ ಮಾಧ್ಯಮ ಶಾಲೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ. ಹಳೆಯ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿ ಇದ್ದಾರೆ.
-ಓಫಿಲಿಯ ಸುವಾಸಿನಿ,
ಮುಖ್ಯೋಪಾಧ್ಯಾಯಿನಿ.

- ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next