ವಾಷಿಂಗ್ಟನ್: ಏರ್ ಲೈನ್ಸ್ ಸಿಬ್ಬಂದಿಗಳಿಗೆ ಆಸನದ ವ್ಯವಸ್ಥೆ ಮಾಡಿಸುವ ನಿಟ್ಟಿನಲ್ಲಿ ಸೀಟಿನಲ್ಲಿ ಕುಳಿತಿದ್ದ ಏಷ್ಯಾ ಮೂಲದ ವೈದ್ಯರೊಬ್ಬರನ್ನು ದರದರನೆ ಕೆಳಗೆ ಎಳೆದು ಹಾಕಿ ಅಮಾನವೀಯವಾಗಿ ವರ್ತಿಸಿರುವ ಘಟನೆ ಯುನೈಟೆಡ್ ಏರ್ ಲೈನ್ಸ್ ನಲ್ಲಿ ನಡೆದಿದ್ದು, ವಿಮಾನದೊಳಗಿನ ಹೈಡ್ರಾಮಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ.
ಶಿಕಾಗೋದ ಓ ಹರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆಂಟುಕಿಗೆ ಹೊರಟಿದ್ದ ಅಮೆರಿಕದ ಪ್ರತಿಷ್ಠಿತ ಯುನೈಟೆಡ್ ವಿಮಾನ ಟೇಕ್ ಆಫ್ ಆಗುವ ಮುನ್ನ, ವಿಮಾನದೊಳಕ್ಕೆ ಆಗಮಿಸಿದ್ದ ವಿಮಾನಯಾನ ಅಧಿಕಾರಿ ಸೀಟಿನಲ್ಲಿ ಕುಳಿತಿದ್ದ ವೈದ್ಯರಿಗೆ ಮೇಲೆಳುವಂತೆ ಸೂಚಿಸಿದ್ದರು. ಆದರೆ ಅದಕ್ಕೆ ಅವರು ನಿರಾಕರಿಸಿದಾಗ, ಸೀಟಿನಿಂದ ಕೆಳಕ್ಕೆ ಎಳೆದು ಹಾಕಿ ಎಳೆದಾಡುತ್ತಿರುವ ಘಟನೆಯನ್ನು ಸಹಪ್ರಯಾಣಿಕರು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ತೀವ್ರ ಟೀಕೆ ಹಾಗೂ ಆಕ್ರೋಶ ವ್ಯಕ್ತವಾಗಿದೆ.
ಆ ವ್ಯಕ್ತಿಯಿಂದ ಯಾವುದೇ ತೊಂದರೆ ಇಲ್ಲವಾಗಿತ್ತು, ಯಾವುದೇ ರೀತಿಯ ಅನುಚಿತ ವರ್ತನೆ ತೋರಿಲ್ಲ. ಕೇವಲ ತಮ್ಮ ವಿಮಾನ ಯಾನ ಸಂಸ್ಥೆಯ ಸಿಬ್ಬಂದಿಗಳಿಗೆ ಆಸನದ ವ್ಯವಸ್ಥೆ ಮಾಡಿಸುವ ನಿಟ್ಟಿನಲ್ಲಿ ಬಲವಂತದಿಂದ ವರ್ತಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾನು ಅಗತ್ಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕಾಗಿದೆ, ಹಾಗಾಗಿ ನಾನು ಸೀಟು ಬಿಟ್ಟು ಕೊಡಲ್ಲ ಎಂದು ಆ ವ್ಯಕ್ತಿ ಹೇಳಿದ್ದರು. ಅವರು ವೃತ್ತಿಯಲ್ಲಿ ವೈದ್ಯರಾಗಿದ್ದು, ಸೋಮವಾರ ಕರ್ತವ್ಯಕ್ಕೆ ಹಾಜರಾಗಬೇಕಿತ್ತು ಎಂದು ತಮ್ಮಲ್ಲಿ ಹೇಳಿರುವುದಾಗಿ ಸಹ ಪ್ರಯಾಣಿಕರೊಬ್ಬರು ಟ್ವೀಟರ್ ನಲ್ಲಿ ತಿಳಿಸಿದ್ದಾರೆ.
ಘಟನೆ ಬಗ್ಗೆ ಯುನೈಟೆಡ್ ವಿಮಾನಯಾನ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಆಸ್ಕರ್ ಮುನೋಝ್ ಕ್ಷಮೆಯಾಚಿಸಿದ್ದು, ಘಟನೆ ಬಗ್ಗೆ ಪರಿಶೀಲನೆ ನಡೆಸುವುದಾಗಿ ಇಮೇಲ್ ಸಂದೇಶದಲ್ಲಿ ತಿಳಿಸಿದ್ದಾರೆ ಎಂದು ಮಾಧ್ಯಮದ ವರದಿ ಹೇಳಿದೆ.