ಮೈಸೂರು: ಪ್ರಸ್ತುತ ಸಂದರ್ಭದಲ್ಲಿ ಅಪೌಷ್ಟಿಕತೆ ಎಂಬುದು ಅತ್ಯಂತ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಕಳವಳ ವ್ಯಕ್ತಪಡಿಸಿದರು. ಸಿಎಸ್‌ಐಆರ್- ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ (ಸಿಎಪ್‌ಟಿಆರ್‌ಐ) ಸಂಸ್ಥೆ ವತಿಯಿಂದ ಸಿಎಪ್‌ಟಿಆರ್‌ಐನ ಅಸೆಂಬ್ಲಿ ಹಾಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಅಪೌಷ್ಟಿಕತೆ ಕುರಿತ ಸವಾಲುಗಳು, ಯಶೋಗಾಥೆಗಳು, ಮುಂದಿನ ದಾರಿ ರಾಷ್ಟ್ರೀಯ ಸಮಾವೇಶದಲ್ಲಿ ಅವರು ಮಾತನಾಡಿದರು.
ಮೈಸೂರು ಜಿಲ್ಲೆಯಲ್ಲಿ 324 ಮಂದಿ ತೀವ್ರ ತರವಾದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಪ್ರಮುಖವಾಗಿ ಎಚ್.ಡಿ.ಕೋಟೆ ತಾಲೂಕಿನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಈ ನಿಟ್ಟಿನಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸುವ ಸಲುವಾಗಿ ತಾಯಿ ತನ್ನ ಮಗುವಿಗೆ ಸತತ 2 ವರ್ಷ ಎದೆ ಹಾಲು ನೀಡುವುದರಿಂದ ಅಪೌಷ್ಟಿಕತೆ ತಡೆಯಬಹುದಾಗಿದೆ ಎಂದರು.
ಸಿಎಸ್‌ಐಆರ್- ಸಿಎಪ್‌ಟಿಆರ್‌ಐ ನಿರ್ದೇಶಕ ಪೊ›.ರಾವ್ ರಾಜಶೇಖರನ್ ಮಾತನಾಡಿ, ಅಂಕಿ-ಅಂಶಗಳ ಪ್ರಕಾರವಾಗಿ ದೇಶದಲ್ಲಿ ಶೇ.56ರಷ್ಟು ಮಂದಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಮಹಿಳೆಯರಲ್ಲಿ ವಿಟಮಿನ್ ಕೊರತೆಯಿಂದಾಗಿ ಹುಟ್ಟುವ ಮಕ್ಕಳು ಸಹ ಅಪೌಷ್ಟಿಕತೆಗೆ ಒಳಗಾಗುತ್ತಿವೆ. ಅಪೌಷ್ಟಿಕತೆಯಿಂದ ದೂರ ಉಳಿಯಲು ಪೌಷ್ಟಿಕ ಆಹಾರವನ್ನು ಮನೆಯಲ್ಲಿಯೇ ಪೌಷ್ಟಿಕ ಆಹಾರ ಸಿದ್ಧಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಬಳ್ಳಾರಿಯ ಜೆಎಸ್‌ಡಬ್ಲೂ ಫೌಂಡೇಷನ್‌ನ ಡಾ.ಸಿ.ಎಸ್.ಕೇದರ್ ಮಾತನಾಡಿ, ಸಂಪನ್ಮೂಲ ಹೆಚ್ಚಾಗಿರುವ ಕಡೆಗಳಲ್ಲಿ ಅಪೌಷ್ಟಿಕತೆಯ ಪ್ರಮಾಣ ಅತ್ಯಂತ ಕಡಿಮೆ. ಜಪಾನ್, ಜರ್ಮನಿ ರಾಷ್ಟ್ರಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರು ತುಂಬಾ ವಿರಳವಾಗಿದ್ದಾರೆ. ಆದರೆ ನಮ್ಮಲ್ಲಿ ಸಂಪತ್ತಿದ್ದರೂ ಅಪೌಷ್ಟಿಕತೆಯಿಂದ ಬಳಲುವವರು ಹೆಚ್ಚಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಸಿಎಸ್‌ಐಆರ್-ಸಿಎಪ್‌ಟಿಆರ್‌ಐನ ಡಾ.ಆರ್.ಶಾರದಾ ಸೇರಿದಂತೆ ದೇಶದ ವಿವಿಧ ಕಡೆಗಳಿಂದ ಆಗಮಿಸಿರುವ ಪ್ರತಿನಿಧಿಗಳು ಹಾಜರಿದ್ದರು.