Advertisement
.ಸಂಸ್ಕರಿತ ಪ್ಲಾಸ್ಟಿಕ್ ಹಾಗೂ ವೈವಿಧ್ಯಮಯ ಮಣಿಗಳ ಜೋಡಣೆಯ ಆಭರಣಗಳು ಈ ಮಳೆಗಾಲಕ್ಕಾಗಿ ಸಜ್ಜಾಗಿವೆ. ಆಭರಣ ಧಾರಣೆಗೂ, ಉಡುಗೆ-ತೊಡುಗೆಗೂ ಸಂಬಂಧವಿದೆ. ಧರಿಸಿದ ಉಡುಗೆಗೆ ಹೊಂದುವಂತಹ ಆಭರಣಗಳನ್ನು ಧರಿಸಿದರೆ ವ್ಯಕ್ತಿತ್ವಕ್ಕೊಂದು ಶೋಭೆ!
Related Articles
ಮಳೆಗಾಲದಲ್ಲಿ ಬಂಗಾರದ ಆಭರಣಗಳಿಗಿಂತ ಬೆಳ್ಳಿಯ ಆಭರಣಗಳು ಬೇಗನೆ ಹೊಳಪು ಕಳೆದುಕೊಳ್ಳುತ್ತವೆ. ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ (ಏರ್ ಟೈಟ್) ಇರುವಂತಹ ಬ್ಯಾಗ್‌ಗಳಲ್ಲಿ ಆಭರಣಗಳನ್ನು ಜೊತೆಯಲ್ಲಿ ಹಾಕಿಡುವುದಕ್ಕಿಂತ, ಬಟ್ಟೆಯ ಚೀಲ, ಗಾಳಿಯಾಡುವ ತಿಳಿ ಬ್ಯಾಗ್‌ಗಳಲ್ಲಿ ಒಂದೊಂದೇ ಆಭರಣ ಹಾಕಿಡಬೇಕು.
Advertisement
ಮಳೆಯಲ್ಲಿ ಧರಿಸಿದ ಒದ್ದೆಯಾದ ಆಭರಣಗಳನ್ನು ಚೆನ್ನಾಗಿ ಒರೆಸಿ, ತದನಂತರ ಆಭರಣದ ಪೆಟ್ಟಿಗೆಯಲ್ಲಿ ಹಾಕಿಡಬೇಕು. ತೇವಾಂಶ ಹೀರುವ ಸಿಲಿಕಾ ಬ್ಯಾಗ್‌ಗಳನ್ನು ಆಭರಣದ ಪೆಟ್ಟಿಗೆಯಲ್ಲಿಟ್ಟರೆ ಮತ್ತೂ ಉತ್ತಮ. ರೆಸಿನ್ ಜುವೆಲ್ಲರಿಗಳು ನೋಡಲು ಮುದ್ದಾಗಿರುತ್ತವೆ. ಪುಟ್ಟ ಮಕ್ಕಳಿಂದ ಹಿಡಿದು ಕಾಲೇಜು ಯುವತಿಯರವರೆಗೆ ಮಳೆಗಾಲದಲ್ಲಿ ಧರಿಸಲು ಬಲು ಅಂದ. ನೀರಿನಲ್ಲಿ ಕುಣಿದು ಕುಪ್ಪಳಿಸಿ, ನರ್ತಿಸಿದರೂ ಈ ಆಭರಣಗಳಿಗೆ ಕುಂದಾಗುವುದಿಲ್ಲ.
ತೆಂಗಿನಕಾಯಿಯ ಚಿಪ್ಪಿನಿಂದ ತಯಾರಿಸಿದ ಆಭರಣಗಳು, ಹಾರ್ನ್ ಆಭರಣ (ದಂತದ ಆಭರಣ), ಸಮುದ್ರ ಚಿಪ್ಪಿನ ಆಭರಣಗಳು ಇಂದು ಟ್ರೆಂಡಿಯಾಗಿವೆ. ಜುವೆಲ್ಲರಿ ಬಾಕ್ಸ್ ಅಥವಾ ಆಭರಣದ ಪೆಟ್ಟಿಗೆಗಳು ಮಳೆಗಾಲದಲ್ಲಿ ತೇವಾಂಶದಿಂದ ಕುಂದಾಗದಂತೆ ಆರೈಕೆ ಮಾಡುವುದು ಅಗತ್ಯ.ವಜ್ರ, ರೂಬಿ, ಸಫಾಯರ್ ಮೊದಲಾದ ಆಭರಣಗಳನ್ನು ಸೋಪಿನ ನೀರಿನಲ್ಲಿ ತೊಳೆದು ಒರೆಸಿಡಿ. ಚಿನ್ನದ ಆಭರಣಗಳು ತೇವಾಂಶಕ್ಕೆ ಹೊಳಪು ಕಳೆದುಕೊಳ್ಳುವುದಿಲ್ಲ. ಆದರೆ ಅವುಗಳಲ್ಲಿ ಕೊಳೆ ಇದ್ದರೆ ಅಂತಹ ಭಾಗದಲ್ಲಿ ತೇವಾಂಶದಿಂದ ಪರಿಣಾಮ ಉಂಟಾಗುತ್ತದೆ. ಸೋಪ್ ನೀರಿನಲ್ಲಿ ಅದ್ದಿ, ಬ್ರಶ್‌ನಿಂದ ಮೃದುವಾಗಿ ತಿಕ್ಕಿ ಶುಭ್ರಗೊಳಿಸಬೇಕು. ತದನಂತರ ಚೆನ್ನಾಗಿ ಒರೆಸಿ ಒಣಗಿಸಿ ಇಡಬೇಕು. ಆಭರಣದ ಅಂಗಡಿಗಳಲ್ಲಿ “ಮೆಟಲ್ ಜುವೆಲ್ಲರಿ ವಾಶ್’ ಮೂಲಕವೂ ಇಂತಹ ಆಭರಣಗಳನ್ನು ತೊಳೆದು ಇಟ್ಟರೆ ಸಹ ಉತ್ತಮ. ಆಭರಣದ ಪೆಟ್ಟಿಗೆಯಲ್ಲಿ ಒಳಗಿನ ವಿನ್ಯಾಸ (ಸಾಫ್ಟ್ ಇಂಟೀರಿಯರ್) ಮೃದುತ್ವದಿಂದ ಇರಬೇಕು. ಇದರಿಂದಾಗಿ ಒಳಗೆ ಇರಿಸಿದ ಆಭರಣಗಳಿಗೆ ಹಾನಿಯಾಗುವುದಿಲ್ಲ. ಜುವೆಲ್ಲರಿ ಬಾಕ್ಸ್‌ನ ಹೊರ ವಿನ್ಯಾಸ ಗಟ್ಟಿಮುಟ್ಟಾಗಿ (ಹಾರ್ಡ್ ಎಕ್ಸ್ ಟೀರಿಯರ್) ಇದ್ದರೆ ಉತ್ತಮ. ಮುತ್ತು, ಹವಳ ಮೊದಲಾದ ಆಭರಣಗಳು ಮಳೆಗಾಲದಲ್ಲಿ ತೇವಾಂಶದಿಂದ ಶೀಘ್ರ ಹೊಳಪು ಕಳೆದುಕೊಳ್ಳುವುದರಿಂದ ಸರಿಯಾಗಿ ಒರೆಸಿ ಒಣಗಿಸಿ ಇರಿಸಬೇಕು. ಇಂದು ಮಾರುಕಟ್ಟೆಯಲ್ಲಿ ಮಳೆಗಾಲಕ್ಕೆ ಸರಿಯಾಗಿ ಟ್ರೆಂಡಿ ಆಭರಣಗಳು ದೊರೆಯುತ್ತವೆ. ಈ ಆಭರಣಗಳಲ್ಲಿ ಮದುವೆ, ಹಬ್ಬಹರಿದಿನಗಳಲ್ಲಿ ಬಳಸುವಂತಹ ಚಿತ್ತಾಕರ್ಷಕ ಆಭರಣ ವೈವಿಧ್ಯಗಳೂ ಇವೆ. ಇವುಗಳು ಅಧಿಕ ಮೌಲ್ಯದವುಗಳಾಗಿದ್ದು ಸಭೆ, ಸಮಾರಂಭ, ಪಾರ್ಟಿಗಳಿಗೆ ಧರಿಸಲು ತುಂಬಾ ಸೂಕ್ತವಾಗಿರುತ್ತವೆ. ಈ ಎಲ್ಲಾ ಮಳೆಗಾಲದ ಆಭರಣಗಳು, ಫ್ಯಾಶನ್‌ಪ್ರಿಯರಿಗೆ ಮತ್ತು ಆಭರಣಪ್ರಿಯರಿಗೆ ಮುದ ನೀಡುವಂತಿವೆ. ಡಾ. ಅನುರಾಧಾ ಕಾಮತ್